ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಿಟ್ಟ ಮಕ್ಕಳ ಗಣತಿ ಕಾರ್ಯ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಉಡುಪಿ: ಶಾಲೆಯಿಂದ ಹೊರಗುಳಿದ ಅರ್ಹ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ಮುಖ್ಯ ವಾಹಿನಿಗೆ ತರಲು ನಿರ್ಧರಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆ ಬಿಟ್ಟ ಮಕ್ಕಳ ಗಣತಿ ಕಾರ್ಯಕ್ಕೆ ಇದೇ 10ರಂದು ಚಾಲನೆ ನೀಡಲಿದೆ.

ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 6ರಿಂದ 14 ವರ್ಷದ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಇಲಾಖೆ ಗಣತಿ ನಡೆಸುತ್ತಿದ್ದು, ಇದೇ 10ರಿಂದ 15ರ ವರೆಗೆ ಆರು ದಿನಗಳ ಕಾಲ ಈ ಕಾರ್ಯ ನಡೆಯಲಿದೆ.

ಶಾಲೆಗೆ ಸೇರದ ಮಕ್ಕಳನ್ನು ಗಣತಿ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಇಲಾಖೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗಳಿಗೆ ಈಗಾಗಲೇ ಸುತ್ತೋಲೆ ಕಳುಹಿಸಿದೆ. 2012-2013ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ದಾಖಲಾಗದ ಎಲ್ಲ ಮಕ್ಕಳನ್ನು ಪತ್ತೆ ಹಚ್ಚುವುದು, ಪತ್ತೆಯಾದ ಮಕ್ಕಳನ್ನು ಶಾಲೆಗೆ ದಾಖಲಿಸಲು ಕ್ರಮ ಕೈಗೊಳ್ಳುವುದು ಗಣತಿಯ ಮುಖ್ಯ ಉದ್ದೇಶವಾಗಿದೆ. 2011-12ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 51,994 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದದ್ದು ಪತ್ತೆಯಾಗಿತ್ತು.

ಗಣತಿ ಹೇಗೆ: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂರು ಜನರ ತಂಡ ರಚಿಸಲಾಗುತ್ತದೆ. ಶಿಕ್ಷಕ, ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ಥಳೀಯ ಮಟ್ಟದಲ್ಲಿ ಇರುವ ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಈ ತಂಡದದಲ್ಲಿ ಇರುತ್ತಾರೆ. ನಗರದ ವಾರ್ಡ್ ಮಟ್ಟದಲ್ಲಿ ಇದೇ ರೀತಿಯ ತಂಡ ರಚಿಸಲಾಗುತ್ತದೆ.

ತಂಡ ಜನ ವಸತಿ ಪ್ರದೇಶ, ಕೈಗಾರಿಕಾ ಪ್ರದೇಶ, ರೈಲು ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತದೆ. ಆ ಪ್ರದೇಶದಲ್ಲಿರುವ 6ರಿಂದ 14 ವರ್ಷದೊಳಗಿನ ಮಗು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ.

ಈ ತಂಡಕ್ಕೆ ಮಾಹಿತಿ ನೀಡಲು ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿ ಇರುತ್ತದೆ. ಜಿಲ್ಲಾಧಿಕಾರಿ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ಸಹಾಯವಾಣಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಅವರು ಅಗತ್ಯ ಸಹಾಯ ಮಾಡುವರು ಮತ್ತು ಸಲಹೆ- ಸೂಚನೆ ನೀಡುವರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿದ ನಂತರ ಅವರಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಹಿಂದಿನ ಮೂಲ ಕಲಿಕೆಗೆ ಆಧಾರವಾಗಿ ಅವರಿಗೆ ತರಬೇತಿ ನೀಡಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದ ತರಬೇತಿ ನೀಡಲು ಅವಕಾಶ ಇದೆ.

ಉದಾಹರಣೆಗೆ: ಶಾಲೆಯಿಂದ ಹೊರಗಿರುವ ಹುಡುಗನೊಬ್ಬ ಮೂರನೇ ತರಗತಿ ಪೂರೈಸಿದ ನಂತರ ನಾಲ್ಕನೇ ತರಗತಿಗೆ ಪ್ರವೇಶ ಪಡೆದಿಲ್ಲ. ಶಾಲೆ ಆರಂಭವಾಗಿ ಆರು ತಿಂಗಳು ಆಗಿದೆ ಎಂದುಕೊಳ್ಳೋಣ. ಆತನಿಗೆ ನಾಲ್ಕನೇ ತರಗತಿಯ ಆರು ತಿಂಗಳ ಪಾಠವನ್ನು ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ. ಆ ನಂತರ ಆತನನ್ನು ನಾಲ್ಕನೇ ತರಗತಿಗೇ ದಾಖಲು ಮಾಡಲಾಗುತ್ತದೆ.

ಶಾಲೆಯಿಂದ ಹೊರಗುಳಿದ ಮಗುವಿನ ತರಬೇತಿ ಹಾಗೂ ಇತರ ಸೌಲಭ್ಯಗಳಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ (ಪ್ರತಿ ಮಗುವಿಗೆ) ವರೆಗೆ ಖರ್ಚು ಮಾಡಲು ಅವಕಾಶ ಇದೆ.

ಮಕ್ಕಳು ನೂರಕ್ಕೆ ನೂರರಷ್ಟು ಶಾಲೆಗೆ ದಾಖಲಾಗಬೇಕು ಎಂಬ ಗುರಿ ಸಾಧನೆಯ ಹಿನ್ನೆಲೆಯಲ್ಲಿ ಗಣತಿ ಕಾರ್ಯ ನಡೆಯುತ್ತಿದೆ.

ನೀವೂ ಸಹಾಯ ಮಾಡಿ
`ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯದಲ್ಲಿ ಜನರೂ ಭಾಗಿಯಾಗಬೇಕು. ಅರ್ಹ ಮಗುವೊಂದು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಜನರಿಗೆ ಮಾಹಿತಿ ಇದ್ದರೆ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಬೇಕು. ಅಥವಾ ಆಯಾ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಮಾಹಿತಿ ತಲುಪಿಸಬೇಕು'
  ಪಿ. ನಾಗರಾಜ್ 
(ಸರ್ವ ಶಿಕ್ಷಣ ಇಲಾಖೆಯ ಉಪ  ಯೋಜನಾ ಸಮನ್ವಯ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT