ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಿಟ್ಟ ಮಕ್ಕಳಿಗೆ ಶಿಕ್ಷಣ ಅಗತ್ಯ

Last Updated 27 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಚಳ್ಳಕೆರೆ: ಶಾಲೆ ಬಿಟ್ಟ ಮಕ್ಕಳ ಶಿಕ್ಷಣಕ್ಕೆ ಸಮಾಜದ ಎಲ್ಲಾ ವರ್ಗಗಳ ಮುಖಂಡರು ಸಹಕಾರ ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು ಎಂದು ಶಾಸಕ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ವತಿಯಿಂದ ಕಸ್ತೂರ ಬಾ ವಸತಿ ಶಾಲೆಯ ಮಕ್ಕಳಿಗೆ ಉಚಿತ ಬಟ್ಟೆ ಹಾಗೂ ನೋಟ್‌ಬುಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಮಂತರ ಮಕ್ಕಳು ಶಿಕ್ಷಣ ಪಡೆಯುವುದು ಸುಲಭ. ಆದರೆ, ಬಡ ಮಕ್ಕಳು ಪ್ರತಿಭಾವಂತರಾದರೂ ನಾನಾ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ತಡೆಯಲು ಸರ್ಕಾರ ವಸತಿ ಶಾಲೆಗಳನ್ನು ನಿರ್ಮಿಸಿ ಬಡವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದು ನುಡಿದರು.

ರಾಜ್ಯದ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕಸ್ತೂರ ಬಾ ವಸತಿಶಾಲೆಗಳಿಗೆ ಸರ್ಕಾರ ತಿಂಗಳಿಗೆ ಕೋಟಿಗಟ್ಟಲೆ ಹಣವನ್ನು ವಿನಿಯೋಗಿಸುತ್ತಿದೆ. ಇದರ ಜತೆಗೆ ಸಮಾಜದ ಗಣ್ಯರು ಸಹಾಯಹಸ್ತ ಚಾಚುವ ಮೂಲಕ ಮಹತ್ವದ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಇಂತಹ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ತಮ್ಮ ಗುರಿಯನ್ನ ಸಾಧಿಸುವ ಮೂಲಕ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿಪಿಐ ಮಂಜುನಾಥ ತಳವಾರ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡುವ ಮೂಲಕ ಸಮಾಜದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಕಾರಣಕರ್ತರಾಗಬೇಕು ಎಂದು ಹೇಳಿದರು.

ಬಡಮಕ್ಕಳಲ್ಲಿ ಅತ್ಯುತ್ತಮ ಕೌಶಲಗಳು ಇರುತ್ತವೆ. ಇಂತಹ ಮಕ್ಕಳನ್ನು ತರಗತಿ ಕೋಣೆಗಳಲ್ಲಿ ಪಾಠ ಹೇಳುವ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವಂತೆ ಪ್ರೇರೇಪಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನೆಸ್ ಕ್ಲಬ್‌ನ ಪ್ರಾದೇಶಿಕ ಅಧ್ಯಕ್ಷೆ ಸುಲೋಚನಾ ಲಕ್ಷ್ಮಣ್ ಮಾತನಾಡಿದರು.

ಉದ್ಯಮಿ ಬಿ.ಕೆ. ರಾಜಶೇಖರಪ್ಪ ಮಕ್ಕಳಿಗೆ ಉಚಿತ ಬಟ್ಟೆ ಹಾಗೂ ನೋಟ್‌ಪುಸ್ತಕ ವಿತರಿಸಿದರು.
ತಾಲ್ಲೂಕು ಲಯನೆಸ್ ಕ್ಲಬ್‌ನ ಅಧ್ಯಕ್ಷೆ ಅನ್ನಪೂರ್ಣಾ ಪ್ರಕಾಶ್, ವಕೀಲ ಜಿ.ಆರ್. ಅಶ್ವತ್ಠ್ ನಾಯಕ, ಪ್ರಸಾದ್, ಎಪಿಎಂಸಿ ಸದಸ್ಯ ರಘುನಾಥ ಬಾಬು, ಉದ್ಯಮಿ ಎನ್.ಟಿ. ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT