ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ,ಕಾಲೇಜುಗಳಲ್ಲೂ ಆಧಾರ್ ನೋಂದಣಿ!

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು `ಜನಸ್ನೇಹಿ'ಯಾಗಿ ಮಾಡುವ ಉದ್ದೇಶದಿಂದ ಪ್ರೌಢಶಾಲೆ - ಕಾಲೇಜುಗಳಲ್ಲೂ ನೋಂದಣಿ ಕೇಂದ್ರಗಳನ್ನು ತೆರೆಯಲು ಇ -ಆಡಳಿತ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಈಗಾಗಲೇ 3.43 ಕೋಟಿ ಜನರು ಆಧಾರ್ ಕಾರ್ಡ್‌ಗಾಗಿ ಹೆಸರು ನೋಂದಣಿ ಮಾಡಿಸಿದ್ದು, ಉಳಿದವರಿಗೆ ಹೆಸರು ನೋಂದಾಯಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಾಲಾ - ಕಾಲೇಜುಗಳಲ್ಲೂ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಇ - ಆಡಳಿತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲಾ - ಕಾಲೇಜುಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಆರು ಸಾವಿರ ಶಾಲಾ - ಕಾಲೇಜುಗಳಿದ್ದು, 20 ಕಡೆ ಈಗಾಗಲೇ ನೋಂದಣಿ ಕಾರ್ಯ ಶುರುವಾಗಿದೆ. ಉಳಿದ ಕಡೆಯೂ ಸದ್ಯದಲ್ಲೇ ಶುರುವಾಗಲಿದೆ. ಇದಾದ ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಮೌಂಟ್ ಕಾರ್ಮೆಲ್, ಎಂಇಎಸ್ ಕಾಲೇಜು ಸೇರಿದಂತೆ ಕೆಲವು ಕಡೆ ನೋಂದಣಿ ಕಾರ್ಯ ಆರಂಭವಾಗಿದೆ. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಸೇರಿದಂತೆ ವೃತ್ತಿಪರ  ಕೋರ್ಸ್‌ಗಳನ್ನು ಬೋಧಿಸುವ ಶಿಕ್ಷಣ ಸಂಸ್ಥೆಗಳಲ್ಲೂ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ರವೀಂದ್ರ ಕಲಾಕ್ಷೇತ್ರ, ಮಲ್ಲೇಶ್ವರದ ರೋಟರಿ ಭವನ, ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರ, ಕಂಠೀರವ ಕ್ರೀಡಾಂಗಣ, ಕೋರಮಂಗಲ ಕ್ರೀಡಾಂಗಣದಲ್ಲೂ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.ಶಾಲಾ - ಕಾಲೇಜುಗಳಲ್ಲಿ ಬೇಡಿಕೆ ಆಧರಿಸಿ 8-10 ದಿನಗಳ ಕಾಲ ನೋಂದಣಿ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಅವರ ತಂದೆ - ತಾಯಿ, ಪೋಷಕರು, ಕುಟುಂಬದವರು ಮಕ್ಕಳೊಂದಿಗೆ ಸಂಬಂಧಪಟ್ಟ ಶಾಲೆ ಅಥವಾ ಕಾಲೇಜಿಗೆ ತೆರಳಿ ಆಧಾರ್ ಕಾರ್ಡ್‌ಗೆ ಹೆಸರು ನೋಂದಾಯಿಸಬಹುದು.

ಇದುವರೆಗೆ 3.43 ಕೋಟಿ  (ಶೇ 56.19) ಜನರು ನೋಂದಣಿ ಮಾಡಿಸಿದ್ದು, 2.77 ಕೋಟಿ ಜನರಿಗೆ ಕಾರ್ಡ್ ವಿತರಿಸಲಾಗಿದೆ. ಎಂಟು ಏಜೆನ್ಸಿಗಳು ನಗರದಲ್ಲಿ 215 ಕೇಂದ್ರಗಳನ್ನು ತೆರೆದಿವೆ. ಈಗ ಎಲ್ಲೂ ಜನಸಂದಣಿ ಇಲ್ಲ. ಸುಲಭವಾಗಿ ಹೆಸರು ನೋಂದಾಯಿಸಬಹುದು. ಎಲ್ಲೆಲ್ಲಿ ನೋಂದಣಿ ಕೇಂದ್ರಗಳು ಇವೆ ಎಂಬುದನ್ನು ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ ಎಂದರು.

2014ರ ಜೂನ್ ಒಳಗೆ ಎಲ್ಲರಿಗೂ ಆಧಾರ್ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ. ಇದಕ್ಕೂ ಮೊದಲೇ ಅಂದರೆ ಮಾರ್ಚ್‌ನಲ್ಲೇ ಪೂರ್ಣವಾಗುವ ವಿಶ್ವಾಸವಿದೆ. ಹೆಸರು ನೋಂದಣಿ ಮಾಡಿಸಿದ ನಂತರ 60ರಿಂದ 90 ದಿನಗಳಲ್ಲಿ ಕಾರ್ಡ್ ನೀಡಲಾಗುತ್ತದೆ. ಅಡುಗೆ ಅನಿಲ ಸಬ್ಸಿಡಿ, ಸರ್ಕಾರದ ವಿವಿಧ ಸೌಲಭ್ಯಗಳು, ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ. ಆದ್ದರಿಂದ ಈಗಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ಮಾಡಿದರು.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,11,30,704 ಜನರಿದ್ದಾರೆ. ಎರಡು ಹಂತಗಳಲ್ಲಿ ಈಗಾಗಲೇ 3.43 ಕೋಟಿ ಜನರು ಹೆಸರು ನೋಂದಾಯಿಸಿದ್ದು, ತುಮಕೂರು ಮೊದಲ ಸ್ಥಾನದಲ್ಲಿದ್ದರೆ, ಹಾಸನ ಕೊನೆಯ ಸ್ಥಾನದಲ್ಲಿದೆ. ಆಧಾರ್ ನೋಂದಣಿ ಕುರಿತು ಜಾಹೀರಾತುಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ. ಆದರೂ, ಕೆಲವು ಜಿಲ್ಲೆಗಳಲ್ಲಿ ನೋಂದಣಿ ಪ್ರಕ್ರಿಯೆ ನೀರಸವಾಗಿದೆ ಎಂದರು.

ಬಹುತೇಕ ಪೂರ್ಣ: ತುಮಕೂರು ಮತ್ತು ಮೈಸೂರು ಜಿಲ್ಲೆಯಲ್ಲಿ ನೋಂದಣಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇದುವರೆಗೆ ಯಾರಾದರೂ ನೋಂದಣಿ ಮಾಡಿಸದೆ ಇದ್ದರೆ ಈಗಲೂ ನೋಂದಣಿಗೆ ಅವಕಾಶ ಇದೆ.

ಇದಕ್ಕಾಗಿ ಕಾಯಂ ಕೇಂದ್ರಗಳನ್ನು ತೆರೆಯಲಾಗಿದೆ. ಮಕ್ಕಳಿಗೆ ಐದು ವರ್ಷ ತುಂಬಿದ ನಂತರ ಬೆರಳಚ್ಚು ನೀಡಲು, ಈಗಾಗಲೇ ನೀಡಿರುವ ಕಾರ್ಡ್‌ನಲ್ಲಿ ಬದಲಾವಣೆಯ ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಈ ಕೇಂದ್ರಗಳನ್ನು ಸಂಪರ್ಕಿಸಬಹುದು.

ಕಾಯಂ ಕೇಂದ್ರ:2014ರ ಜೂನ್‌ಗೆ ಆಧಾರ್ ನೋಂದಣಿ ಕಾರ್ಯ ಪೂರ್ಣಗೊಂಡ ನಂತರ, ಎಲ್ಲ ಜಿಲ್ಲೆಗಳಲ್ಲಿ ಕಾಯಂ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆದರೆ ಈಗಿನಷ್ಟು ಪ್ರಮಾಣದಲ್ಲಿ ಕೇಂದ್ರಗಳು ಇರುವುದಿಲ್ಲ. ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕೇಂದ್ರಗಳನ್ನು ತೆರೆಯುವ ಸಾಧ್ಯತೆ ಇದೆ.

ಆಧಾರ್ ಗುರುತಿನ ಚೀಟಿ  ನೀಡುವ ಸಂಬಂಧ ಕೇಂದ್ರ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹಾಗೂ ರಾಜ್ಯ   ಸರ್ಕಾರದ ಇ - ಆಡಳಿತ ಇಲಾಖೆ ನಡುವೆ ಒಪ್ಪಂದ ಆಗಿದೆ. ಆ ಪ್ರಕಾರಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ.

ಆಧಾರ್ ನೋಂದಣಿ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 9243700100 ಸಂಪರ್ಕಿಸಬಹುದು. ನೋಂದಣಿ ಕೇಂದ್ರಗಳ ಮಾಹಿತಿ ಲಭ್ಯವಿರುವ ವೆಬ್‌ಸೈಟ್ ವಿಳಾಸ: www.ceguidkarnataka.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT