ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗ ಬೀಗ ಜಡಿದು ಬೀದಿಗಿಳಿದ ವಿದ್ಯಾರ್ಥಿಗಳು...

Last Updated 14 ಸೆಪ್ಟೆಂಬರ್ 2013, 8:27 IST
ಅಕ್ಷರ ಗಾತ್ರ

ಕುರುಗೋಡು: ಮುಂದಿನ ವಾರದಿಂದ ಮೊದಲನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಳ್ಳುತ್ತಿದ್ದರು, ಶಿಕ್ಷಕರ ಕೊರತೆಯಿಂದ ಹಿಂದಿ, ಇಂಗ್ಲಿಷ್ ಒಂದು ಪಾಠನೂ ಮಾಡಿಲ್ಲ. ಈ ಪರಿಸ್ಥಿತಿಯಲ್ಲಿ ನಾವು ಹೇಗೆ ಪರೀಕ್ಷೆ ಬರೆಯಬೇಕು. ಶಿಕ್ಷಕರನ್ನು ನೇಮಿಸುವವರೆಗೆ ನಾವು ತರಗತಿ ಬಹಿಷ್ಕರಿಸುವುದಾಗಿ ಸಮೀಪದ ಎಮ್ಮಿಗನೂರಿನ ಜಡೇಶ್ ನಗರದ ವೇಣಿ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶಾಲೆ ಕೊಠಡಿಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಎಂಟನೇ ತರಗತಿ ಓದುತ್ತಿರುವ ಮಹಾಲಕ್ಷ್ಮಿ, ಶಾಂತಕುಮಾರಿ, ಕೆ.ಶಿವಶಂಕರ್ ಮೊದಲಾದವರು ಮಾತನಾಡಿ, ಇಲ್ಲಿ  ಒಂದರಿಂದ ಎಂಟರಯವರೆಗೆ ತರಗತಿಗಳಿದ್ದು 189 ವಿದ್ಯಾರ್ಥಿಗಳು ಓದುತ್ತಿದ್ದೇವೆ, ಇರೋ ನಾಲ್ಕು ಜನ ಶಿಕ್ಷಕರಲ್ಲಿ ಒಬ್ಬರು ಮುಖ್ಯ ಗುರುಗಳು. ಇವರು ಕಚೇರಿ ಕೆಲಸ ನಿಭಾಯಿಸಿದ್ರೆ ಉಳಿದ ಮೂವರು ಶಿಕ್ಷಕರು ಯಾರಿಗಂತ ಪಾಠ ಮಾಡ್ಬೇಕು. 8ನೇ ತರಗತಿಗೆ ಟೀಚರ್ ಸುರೇಶ್ ಒಬ್ಬರಿದ್ದು ಅವ್ರು ಎಲ್ಲಾನು ಮಾಡ್ಬೇಕು. ಅಲ್ಲದೆ ಬೇರೆ ತರಗತಿಗೆ ಪಾಠ ಹೇಳಬೇಕು. ಹಿಂದಿ, ಇಂಗ್ಲಿಷ್ ಶಿಕ್ಷಕರು ಇಲ್ಲ. ದೈಹಿಕ ಶಿಕ್ಷಣ ಶಿಕ್ಷಕರೂ ಇಲ್ಲ. ಬಿಇಒ ಅವರು ಶಿಕ್ಷಕರನ್ನು ಹಾಕ್ತೀವಿ ಅಂತಾ ಹೇಳ್ತ ಇದಾರೇ ಹೊರತು ಈತನಕೂ ಹಾಕಿಲ್ಲ. ಕುಡಿಯುವ ನೀರು ಸರಿ ಇಲ್ಲ. ನೀರು ಕುಡಿದ್ರೆ ಕೈಕಾಲು ನೋವು ಬರ್ತಿದೆ. ನಮ್ ಸಮಸ್ಯೆ ಕೇಳೋರಿಲ್ಲ. ಶಿಕ್ಷಕರನ್ನ ಹಾಕೋತನಕ ಸಾಲಿ ಒಳಗ ಹೋಗಾಂಗಿಲ್ಲ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಗೆ ಮುಂದಾದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆಶೋಕ್ ಕುಮಾರ್ ಸಿಂದಗಿ ಭೇಟಿ ನೀಡಿ ಬಳ್ಳಾರಿ ತಾಲೂಕಿನಲ್ಲಿ ಒಟ್ಟು 170 ಶಿಕ್ಷಕ ಹುದ್ದೆ ಖಾಲಿಯಿದ್ದು, ಸದ್ಯ 85 ಅತಿಥಿ ಶಿಕ್ಷಕರ ನೇಮಕಕ್ಕಾಗಿ ಆದೇಶ ದೊರೆತಿದ್ದು, ಈ ಅತಿಥಿ ಶಿಕ್ಷಕ ಹುದ್ದೆಗಾಗಿ ಒಟ್ಟು 161 ಅರ್ಜಿಗಳು ಬಂದಿವೆ. ಆಯ್ಕೆ ಪ್ರಕ್ರಿಯೆ ಜರುಗಿಸಬೇಕಿದೆ. ಆಯ್ಕೆ ಪ್ರಕ್ರಿಯೆ ಮಾನದಂಡ ಕುರಿತು ಗೊಂದಲದಲ್ಲಿರುವುದರಿಂದಾಗಿ ಮೇಲಾಧಿಕಾರಿಗಳ ಆದೇಶದನ್ವಯ ನೇಮಕ ಮಾಡಿಕೊಂಡ ತಕ್ಷಣ ಇಬ್ಬರು ಶಿಕ್ಷಕರನ್ನು ಇನ್ನೆರೆಡು ದಿನಗಳಲ್ಲಿ ನೇಮಕ ಮಾಡುವ ಭರವಸೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳು ಸುಳ್ಳು ಭರವಸೆ ಹೇಳುವುದನ್ನು ಬಿಟ್ಟು ಕೂಡಲೇ  ಅತಿಥಿ ಶಿಕ್ಷಕರನ್ನಾದರೂ ನೇಮಿಸಬೇಕಿದೆ. ತಪ್ಪಿದಲ್ಲಿ ಮಂಗ­ಳ­ವಾರ ಇದೇ 17ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ ಪ್ರತಿಭಟನೆ ನೀಡಿದರು. ನಂತರ ಹಿಂದಕ್ಕೆ ಪಡೆದರು.

ಮಾಜಿ ಅಧ್ಯಕ್ಷ ಶೆಕ್ಷಾವಲಿ, ಎಚ್.ಎಂ. ಸಣ್ಣ ಜಡೆಯ್ಯ, ಹಾಲಿ ಸದಸ್ಯ ಗಣೇಶ್, ಶಿವಪ್ಪ, ಮಾರೆಪ್ಪ, ಕರವೇ(ಗೌಡ) ಉಪಾಧ್ಯಕ್ಷ ಜಡೆಸಿದ್ದಯ್ಯ  ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT