ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದೇಶದ ಎಲ್ಲಾ ಶಾಲೆಗಳಲ್ಲಿ ಇನ್ನು ಆರು ತಿಂಗಳೊಳಗೆ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ನಿರ್ದೇಶನ ನೀಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲೇ ಈ ಬಗ್ಗೆ ಸುಪ್ರೀಂಕೋರ್ಟ್‌ಆದೇಶ ನೀಡಿದ್ದರೂ, ಇನ್ನೂ ಅನೇಕ ರಾಜ್ಯಗಳಲ್ಲಿ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು. ಈಗ ಕೋರ್ಟ್ ಮತ್ತೆ ಆರು ತಿಂಗಳ ಗಡುವನ್ನು ನೀಡಿದೆ. ಈ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲೂ ಸುಪ್ರೀಂಕೋರ್ಟ್ ನಿರ್ದೇಶನಗಳಿಗೇ ಕಾಯಬೇಕಾಗಿರುವಂತಹದ್ದು ದುರದೃಷ್ಟಕರ.

ನಮ್ಮ ಆಡಳಿತ ಯಂತ್ರದ ನಿಷ್ಕ್ರಿಯತೆಯನ್ನು ಇದು ಎತ್ತಿ ತೋರುತ್ತದೆ. ಸರ್ಕಾರಿ ಶಾಲೆಗಳಲ್ಲಿ, ಅದರಲ್ಲೂ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್ 18ರಂದು ನೀಡಿದ್ದ ನಿರ್ದೇಶನದಲ್ಲಿ ತಿಳಿಸಿತ್ತು.

ಮೂಲ ಸೌಕರ್ಯಗಳನ್ನು ಒದಗಿಸದೇ ಇರುವುದು ಸಂವಿಧಾನದ 21ಎ ವಿಧಿ ಅನ್ವಯ ನೀಡಲಾದ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕಿನ ಉಲ್ಲಂಘನೆ ಎಂಬಂತಹ ಸುಪ್ರೀಂಕೋರ್ಟ್‌ನ ಕಾಳಜಿಯನ್ನು ಸರ್ಕಾರಗಳು ಗಂಭೀರವಾಗಿಪರಿಗಣಿಸಬೇಕಾಗಿದೆ.
 
ಹೆಣ್ಣುಮಕ್ಕಳು ಶಾಲೆ ಬಿಡುವುದಕ್ಕೆ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲದಿರುವುದೇ ಮುಖ್ಯ ಕಾರಣವಾಗುತ್ತಿದೆ ಎಂಬುದನ್ನು ಇದೇ ಸಂದರ್ಭದಲ್ಲೇ ಕಾಕತಾಳೀಯವಾಗಿ ಬಿಡುಗಡೆಯಾಗಿರುವ ಸಮೀಕ್ಷೆಯೊಂದು ತಿಳಿಸಿದೆ.
 
ಮಕ್ಕಳ ಹಕ್ಕುಗಳ ಸಂಸ್ಥೆ `ಕ್ರೈ~ ಬಿಡುಗಡೆ ಮಾಡಿರುವ ಈ ವರದಿಯ ಪ್ರಕಾರ, ಹೆಣ್ಣುಮಕ್ಕಳು ಶಾಲೆಗಳಿಗೆ ಹೋಗಲು ಹಿಂಜರಿಯುವುದಕ್ಕೆ ಶಾಲೆಗಳಲ್ಲಿ ಶೌಚಾಲಯಗಳಿಲ್ಲದಿರುವುದೇ ಮುಖ್ಯ ಕಾರಣ.

ಇದೇ ಕಾರಣದಿಂದಲೇ ಋತುಮತಿಯರಾದ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗಳಿಗೆ ಕಳಿಸಲು ಕಡಿಮೆ ಆದಾಯ ಗುಂಪಿಗೆ ಸೇರಿದ  ಪೋಷಕರೂ ಹಿಂದೆಮುಂದೆ ನೋಡುತ್ತಾರೆ.

ನೈಸರ್ಗಿಕ ಕರೆಗಳಿಗಾಗಿ ಹತ್ತಿರದ ಹೊಲಗದ್ದೆಗಳು ಅಥವಾ ಮನೆಗೇ ಓಡಬೇಕಾದ ಮುಜುಗರಗಳಿಂದಾಗಿಯೇ ಹೆಣ್ಣುಮಕ್ಕಳು ಮಧ್ಯದಲ್ಲೇ ಶಾಲೆ ಬಿಡುತ್ತಿದ್ದಾರೆ ಎಂಬಂತಹ ಅಂಶ ಆತಂಕಕಾರಿ.

  ಭಾರತದಲ್ಲಿ 11ರಿಂದ 18ರ ವಯೋಮಾನಕ್ಕೆ ಸೇರಿದ 8.3ಕೋಟಿ ಹೆಣ್ಣುಮಕ್ಕಳಿದ್ದಾರೆ. 49.65 ಕೋಟಿಯಷ್ಟಿರುವ ಒಟ್ಟು ಮಹಿಳಾ ಸಂಖ್ಯೆಯಲ್ಲಿ ಇವರ ಪ್ರಮಾಣ ಶೇ 17ರಷ್ಟಾಗುತ್ತದೆ. ಪ್ರೌಢಶಿಕ್ಷಣ ಹಂತದಲ್ಲಿ ಈ ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಮಾಣ ತೀವ್ರವಾಗಿದೆ.

ಶಾಲೆ ದೂರದಲ್ಲಿರುವುದು, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದು, ಮನೆಯಲ್ಲಿ ಸಣ್ಣಮಕ್ಕಳ ಜವಾಬ್ದಾರಿ ಇತ್ಯಾದಿ ಕಾರಣಗಳ ಜೊತೆಗೇ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದೂ ಶಾಲೆ ಬಿಡಲು ಮುಖ್ಯ ಕಾರಣ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ.

ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 49,658 ಶಾಲೆಗಳಲ್ಲಿ 1762 ಶಾಲೆಗಳಲ್ಲಿ ಶೌಚಾಲಯಗಳಿಲ್ಲ. 2012ರ ಅಂತ್ಯದೊಳಗೆ `ಸಂಪೂರ್ಣ ಸ್ವಚ್ಛತೆ~ ಸಾಧಿಸುವ ಮಹತ್ವಾಕಾಂಕ್ಷೆಯ ಪ್ರಚಾರಾಂದೋಲನವೂ ಈಗ ರಾಷ್ಟ್ರದಲ್ಲಿ ಜಾರಿಯಲ್ಲಿದೆ.

ಹೀಗಿದ್ದೂ ಶೌಚಾಲಯಗಳು ನಿರ್ಮಾಣವಾಗದಿರುವುದು ಶೋಚನೀಯ. ನಿರ್ಮಾಣವಾದರೂ ಸ್ವಲ್ಪದಿನಗಳಲ್ಲೇ ನೀರಿನ ಕೊರತೆಯಿಂದ ನಿರ್ವಹಣೆ ಇಲ್ಲದೆ ಬಳಸದಂತಾಗುವುದೂ ವಾಸ್ತವ ಸತ್ಯ.

ಈ ನಿಟ್ಟಿನಲ್ಲಿ ಸೂಕ್ತ ಉಸ್ತುವಾರಿ ವಿಧಾನವನ್ನು ರೂಪಿಸದಿದ್ದಲ್ಲಿ ಶೌಚಾಲಯಗಳನ್ನು ನಿರ್ಮಿಸಿಯೂ ಪ್ರಯೋಜನವಿಲ್ಲ ಎಂಬಂತಹ ಸ್ಥಿತಿಯನ್ನು ತಪ್ಪಿಸಬೇಕಿದೆ. ನಿಜಕ್ಕೂ ಭಾರತದ ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ಶೌಚಾಲಯಗಳ ಕೊರತೆಯ ಕಥೆ ದೊಡ್ಡದೊಂದು ಕಪ್ಪು ಚುಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT