ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೆ ಒದಗಿಸದ ಮೂಲಸೌಕರ್ಯ: ಕಾರ್ಯದರ್ಶಿ ಹಾಜರಿಗೆ ಆದೇಶ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: 2011ರ ಅಂತ್ಯದ ಒಳಗೆ ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಕುಡಿಯುವ ನೀರು ಪೂರೈಕೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದಾಗಿ ಹೈಕೋರ್ಟ್ ಮುಂದೆ ವಾಗ್ದಾನ ಮಾಡಿದ್ದ ಸರ್ಕಾರ, ಕೆಲಸ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದೆ!

ಸೌಕರ್ಯಗಳನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಲಾಗಿದೆ ಎಂಬ ಬಗ್ಗೆ ಪ್ರಮಾಣ ಪತ್ರವನ್ನೂ ಇದುವರೆಗೆ ಸಲ್ಲಿಸದ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಮುಂದಿನ ವಿಚಾರಣೆ ವೇಳೆ ಅವರು ಖುದ್ದು ಹಾಜರು ಇರುವಂತೆ ಸೋಮವಾರ ಆದೇಶಿಸಿದೆ.

ಮೂಲ ಸೌಕರ್ಯಗಳನ್ನು ಒದಗಿಸಿ ಆ ಕುರಿತು ಕಾರ್ಯದರ್ಶಿಗಳು ಸೋಮವಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಆದರೆ ಸರ್ಕಾರದ ಪರ ವಕೀಲರು `ಅಧೀನ ಕಾರ್ಯದರ್ಶಿಗಳು ಪ್ರಮಾಣ ಪತ್ರ ಸಲ್ಲಿಸಲಿದ್ದಾರೆ~ ಎಂದು ಹೇಳಿದರು. ಈ ಮಾತನ್ನು ಕೇಳಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರಿದ್ದ ವಿಭಾಗೀಯ ಪೀಠ ತೀವ್ರ ಅಸಮಾಧಾನಗೊಂಡಿತು.

`ಇಂತಹ ಮಹತ್ವದ ವಿಷಯದ ಬಗ್ಗೆ ಇಷ್ಟೊಂದು ಬೇಜವಾಬ್ದಾರಿಯೇ, ಕಾರ್ಯದರ್ಶಿಗಳು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಾವು ಆದೇಶಿಸಿದ್ದೇವೆ. ಆದರೆ ಅಧೀನ ಕಾರ್ಯದರ್ಶಿಗಳು ಅದನ್ನು ಸಲ್ಲಿಸುತ್ತಾರೆ ಎಂದರೆ ಏನರ್ಥ~ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಈ ಬಗ್ಗೆ ಕಾರ್ಯದರ್ಶಿಗಳ ಬಾಯಿಂದಲೇ ಕೇಳಿ ತಿಳಿಯಲು ಇಚ್ಛಿಸಿದರು. ಈ ಹಿನ್ನೆಲೆಯಲ್ಲಿ ಹಾಜರಿಗೆ ಆದೇಶಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಲು ಕೋರಿ ವಕೀಲ ಎ.ವಿ.ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಸಂವಿಧಾನದ ಪ್ರಕಾರ 6ರಿಂದ 14 ವರ್ಷದ ವಯೋಮಾನದವರಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಆದರೆ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ ಎನ್ನುವುದು ಅರ್ಜಿದಾರ ವಕೀಲರ ಆರೋಪ.

ರಾಜ್ಯದಲ್ಲಿನ 3,685 ಕಿರಿಯ ಪ್ರಾಥಮಿಕ, 1,787 ಹಿರಿಯ ಪ್ರಾಥಮಿಕ ಮತ್ತು 2,500 ಪ್ರೌಢಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಇದೆ. 11,013 ಕಿರಿಯ, 5,119 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯ ಇಲ್ಲ. 4,048 ಕಿರಿಯ ಹಾಗೂ 1,371 ಹಿರಿಯ ಪ್ರಾಥಮಿಕ  ಹಾಗೂ 1,100 ಪ್ರೌಢಶಾಲೆಗಳಲ್ಲಿ ಕುಡಿಯುವ ನೀರಿನ ಸೌಕರ್ಯ ಇಲ್ಲ ಎಂಬಿತ್ಯಾದಿ ಮಾಹಿತಿಯನ್ನು ಅವರು ಕೋರ್ಟ್‌ಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT