ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಿಗೆ ಮಾನ್ಯತೆ ನೀಡದಿರಲು ಆಗ್ರಹ

Last Updated 6 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ದಾವಣಗೆರೆ: ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೆ, ಚಿತ್ರದುರ್ಗ ಜಿಲ್ಲಾ ಬಂಜಾರ (ಲಂಬಾಣಿ) ಯುವಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳಿಗೆ ಮಾನ್ಯತೆ ನೀಡಬಾರದು. ವಿವಾದಿತ ಸಂಸ್ಥೆ ಜತೆ ಶಿಕ್ಷಣ ಇಲಾಖೆ ಯಾವುದೇ ಪತ್ರ ವ್ಯವಹಾರ ನಡೆಸಬಾರದು ಎಂದು ಸಂಘದ ಸದಸ್ಯ ಆರ್‌.ನಿಂಗಾನಾಯ್ಕ ಒತ್ತಾಯಿಸಿದರು.

ಶಾಸಕ ಕೆ.ಶಿವಮೂರ್ತಿ ಅವರು ಶಿಕ್ಷಣ ಸಚಿವರ ದಾರಿ ತಪ್ಪಿಸಿ, ಶಾಲೆಗಳಿಗೆ ಮಾನ್ಯತೆ ಪಡೆಯಲು ಹವಣಿಸುತ್ತಿದ್ದಾರೆ. ಅವರು ನೀಡುವ ಸುಳ್ಳು ದಾಖಲೆಗಳನ್ನು ಇಲಾಖೆ ಅಧಿಕಾರಿಗಳು ಒಪ್ಪಬಾರದು. ಶಾಲೆಗಳಿಗೆ ಮಾನ್ಯತೆ ನೀಡಿದಲ್ಲಿ ಕಾನೂನಿನ ಆದೇಶ ಉಲ್ಲಂಘಿಸಿದಂತಾಗುತ್ತದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯಲ್ಲಿ ನಡೆಸಿದ ಎಲ್ಲ ಸಭೆಗಳು ಕಾನೂನು ಬಾಹಿರ ಹಾಗೂ ಶೂನ್ಯದಿಂದ ಕೂಡಿವೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಸಂಘದಲ್ಲಿದ್ದ 319 ಸದಸ್ಯರಲ್ಲಿ ಶಿವಮೂರ್ತಿ ಅವರ ಪುತ್ರ ಸೂರಜ್‌ ಎಲ್‌.ನಾಯ್ಕ ಹಾಗೂ ಅಶ್ವಿನಿಲಾಲ್‌ ಅವರು ಸದಸ್ಯರಲ್ಲದಿದ್ದರೂ ಕಾರ್ಯದರ್ಶಿ ಎಂದು ಹೇಳಿಕೊಂಡು ಆಡಳಿತ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ಸಂಘದ ಎಲ್ಲ ಸದಸ್ಯರನ್ನು ಕಡೆಗಣಿಸಿ ತನ್ನ ಕುಟುಂಬವನ್ನು ಕಾರ್ಯಕಾರಿ ಸಮಿತಿಯಲ್ಲಿ ಸೇರಿಸಿಕೊಂಡು ಸಮಾಜ ಕಡೆಗಣಿಸುವ ಕೆಲಸವನ್ನು ಶಿವಮೂರ್ತಿ ಮಾಡುತ್ತಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರೇ ಬೇರೆ. ಆದರೆ, ಅವರ ಭಾವಚಿತ್ರ ಬೇರೆ ಹಾಕಿ ಇಲಾಖೆ ಹಾಗೂ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾಜದ ಅಭಿವೃದ್ಧಿ ಹೆಸರಿನಲ್ಲಿ ಸ್ಥಾಪಿತವಾದ ಸಂಘವು ಕೆ.ಶಿವಮೂರ್ತಿ ಅವರ ಕುಟುಂಬದ ಆಸ್ತಿಯಾಗದೇ ಸಮಾಜದ ಎಲ್ಲ ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಮಂಡಳಿ ರಚನೆಯಾಗಬೇಕು. 2004ರಿಂದ ಸುಳ್ಳು ದಾಖಲೆ ಸೃಷ್ಟಿಸಿರುವ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು. ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಯಲ್ಲಿನ ನೌಕರರಿಗೆ ಈವರೆಗೂ ನಿಲುಗಡೆಯಾಗಿರುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಇಲಾಖೆಯಿಂದಲೇ ಕೊಡಿಸಬೇಕು. ಶಿವಮೂರ್ತಿ ಅವರ ವಶದಲ್ಲಿರುವ ನೌಕರರ ಸೇವಾ ಪುಸ್ತಕಗಳನ್ನು ನಿಷ್ಕ್ರಿಯಗೊಳಿಸಿ, ಶಾಲೆಗಳಲ್ಲಿರುವ ದಾಖಲೆ ಆಧರಿಸಿ ಹೊಸ ಸೇವಾ ಪುಸ್ತಕ ಪ್ರಾರಂಭಿಸಲು ಇಲಾಖೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಸದಸ್ಯ ಜಯಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT