ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳು ಮತ್ತು ಬೇಸಿಗೆ ಶಿಬಿರ

Last Updated 24 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಅನುಭವದಿಂದ ಹೇಳುವುದಾದರೆ ಶಾಲೆ ನಡೆಸುವುದಕ್ಕಿಂತ ರಜಾ ಕಾಲದ ಶಿಬಿರಗಳನ್ನು ನಡೆಸುವುದೇ ಉತ್ತಮ. ಪ್ರಸಿದ್ಧಿ, ಹಣ, ಸನ್ಮಾನ ಮತ್ತು ಹೆತ್ತವರ ಪ್ರೀತ್ಯಾದರ ಸಿಕ್ಕುವುದು ಅದರಲ್ಲೇ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ತರಗತಿಗಳಿಗಿಂತ ಮುಕ್ತ ವಾತಾವರಣದಲ್ಲಿ ಜರುಗುವ ಶಿಬಿರಗಳೇ ಮಕ್ಕಳಿಗೆ ಚೇತೋಹಾರಿಯಾಗಿರುತ್ತವೆ.

ನಗೆ, ಕೇಕೆ, ಹಾಡು, ಆಟ, ನಾಟಕ, ಕ್ರಾಫ್ಟ್, ಗೊಂಬೆ ತಯಾರಿ, ಹೀಗೆ ಅನೇಕ ಚಟುವಟಿಕೆಗಳ ಮೂಲಕ ನಲಿದಾಡುವ ಮಕ್ಕಳನ್ನು ಕಂಡು ಹೆತ್ತವರಿಗೆ ಹಿಗ್ಗೋ ಹಿಗ್ಗು. ಇಂತಹ ಶಿಬಿರಗಳಲ್ಲೇ ಮಕ್ಕಳ ನಿಜವಾದ ಪ್ರತಿಭೆ ಅರಳುವುದು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ.

ಇದು ನಿಜವೇ ಎಂಬುದು ಚಿಂತಿಸಬೇಕಾದ ಪ್ರಶ್ನೆ. ರಜಾ ಕಾಲದ ಶಿಬಿರಗಳ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಶಾಲೆಗಳನ್ನು ಟೀಕಿಸುವುದೊಂದು ಪರಿಪಾಠ. ಮುಖ್ಯ ಅತಿಥಿಗಳಿಂದ ಹಿಡಿದು ಎಲ್ಲರೂ ಶಾಲೆಗಳ ಉಸಿರುಗಟ್ಟಿಸುವ ವಾತಾವರಣವನ್ನು ತೆಗಳುತ್ತ ಶಿಬಿರವನ್ನು ಹೊಗಳುವವರೇ.

ಅಂದರೆ ಭಾಗವಹಿಸುವ ವಿದ್ಯಾರ್ಥಿಗಳ ಮನಸ್ಸಿನಲ್ಲಿಯೂ ಶಾಲೆಗಳೆಂದರೆ ಅಪ್ರಯೋಜಕ ಸ್ಥಾನಗಳು, ಶಿಬಿರಗಳೇ ಸೃಜನಶೀಲ ಸ್ಥಾನಗಳೆಂಬ ಭಾವನೆ ತುಂಬಿ ಬಿಡುತ್ತಾರೆ. ಇದು ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮನೋಭೂಮಿಕೆಯಲ್ಲ. ಶಿಬಿರಗಳು ಶಾಲೆಯ ಕಲಿಕೆಗೆ ಪೂರಕವೆಂದು ಹೇಳಬೇಕೇ ಹೊರತು ಶಾಲೆಗಳನ್ನು ಬಂಧನವೆಂಬಂತೆ ಚಿತ್ರಿಸುವ ಪರಿಪಾಠ ಹಾನಿಕರವೆಂಬುದನ್ನು ಮನಗಾಣಬೇಕಾದ ಸನ್ನಿವೇಶ ಈಗ ಇದೆ.

ಒಂದು ವೇಳೆ ಶಿಬಿರಗಳೇ ಜೀವಂತಿಕೆಯ ತಾಣಗಳಾದರೆ ಅವುಗಳನ್ನೇ ಶಾಲೆಗಳಾಗಿ ಏಕೆ ಮಾಡಬಾರದು? ಕಲಿಕೆಯನ್ನೂ ಅಲ್ಲೇ ಏಕೆ ಮುಂದುವರಿಸಬಾರದು? ಶಿಬಿರದ ಮೆಥಡ್‌ನಲ್ಲೇ  ಪಾಠಗಳನ್ನೂ ಕಲಿಸಬಹುದಲ್ಲ? ಒಮ್ಮೆ ಮಕ್ಕಳಿಗೂ ಹೆತ್ತವರಿಗೂ ಹಿತವಾಗಲಿ ನೋಡೋಣ.

ವಾಸ್ತವಿಕವಾಗಿ ಶಾಲೆಗಳೇ ಶಿಬಿರಗಳ ಜೀವ ಪೋಷಕಗಳು. ಶಾಲೆಗಳ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವದ ತಿರುಳನ್ನು ಗಟ್ಟಿಮಾಡುವ ಕೆಲಸ ಮಾಡುತ್ತವೆ. ದಿನಾಲೂ ಓದಬೇಕು, ಮನನ ಮಾಡಿ ಕಲಿಯಬೇಕು, ಬರೆಯಬೇಕು, ಅಕ್ಷರಗಳನ್ನು ಸುಂದರವಾಗಿಸಿಕೊಳ್ಳಬೇಕು, ಪ್ರಶ್ನೋತ್ತರಗಳ ಅಭ್ಯಾಸ ಮಾಡಬೇಕು, ಕೆಲವೊಂದು ಮಾಹಿತಿಗಳನ್ನು ಬಾಯಿಪಾಠ ಮಾಡಬೇಕು, ಭಾಷೆಯನ್ನೂ ವ್ಯಾಕರಣವನ್ನೂ ಕಲಿಯಬೇಕು, ಲೆಕ್ಕಗಳ ಅಭ್ಯಾಸ ಮಾಡಬೇಕು, ವಿಜ್ಞಾನವನ್ನು ಮತ್ತು ಸಮಾಜ ಪಾಠಗಳನ್ನು ಅರ್ಥೈಸಿಕೊಳ್ಳಬೇಕು.

ಹೀಗೆ ಶಿಕ್ಷಣದ ಪ್ರಕ್ರಿಯೆಯಲ್ಲಿ ಕೆಲವೊಂದು ನಿಯಮಿತತೆ ಬೇಕಾಗುತ್ತದೆ. ಇದೆಲ್ಲವೂ ಆಗಬೇಕೆಂದು ಹೆತ್ತವರು ವರ್ಷವಿಡೀ ಪಟ್ಟು ಹಿಡಿಯುತ್ತಾರೆ. ಶಾಲೆಗಳಲ್ಲಿ ಶಿಕ್ಷಕರನ್ನು ಭೇಟಿಯಾಗಿ ತಮ್ಮ ಮಗುವಿನ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸುತ್ತಾರೆ. ಮಗುವಿಗೆ ಹೊಡೆಯಿರಿ, ಶಿಕ್ಷೆ ಕೊಡಿ ಎನ್ನುವ ಹೆತ್ತವರು ಅನೇಕರಿದ್ದಾರೆ.

ಮಗುವಿಗೆ ಶಿಕ್ಷಕರು ಹೇಳಿದರೇನೇ ಒಪ್ಪಿಗೆಯಾಗುವುದೆನ್ನುತ್ತಾರೆ. ಇಷ್ಟೆಲ್ಲ ಮಾಡುವಾಗ ಅದು ಕೆಲವು ಮಕ್ಕಳಿಗೆ ಬಂಧನವೋ, ಒತ್ತಡವೋ ಆಗಿ ಕಂಡರೆ ಅಚ್ಚರಿ ಇಲ್ಲ. ಇದಲ್ಲದೆ ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ಹೊಣೆಗಾರಿಕೆಯ  ಮೌಲ್ಯ ಮುಂತಾದುವನ್ನು ಬೆಳೆಸಬೇಕಾಗುತ್ತದೆ.
 
ಇದೆಲ್ಲ ಬೇಕಾದ್ದೇ ತಾನೇ? ಆದರೆ ಇಷ್ಟನ್ನು ಸೃಜನಾತ್ಮಕವಾಗಿ ಮಾಡುತ್ತಿರುವ ಶಿಕ್ಷಕರ ಬಗ್ಗೆ ಕೃತಜ್ಞತೆಯ ಮಾತನ್ನು ಹೇಳದ ಬಹುತೇಕ ಹೆತ್ತವರಿಗೆ ಶಿಬಿರಗಳನ್ನು ನಡೆಸುವವರೇ ಮಗುವಿನ ಉದ್ಧಾರಕರಾಗಿ ಕಾಣುತ್ತಾರೆ.

ಮಗು ಶಿಬಿರದಲ್ಲಿ ಎಷ್ಟೊಂದು ವಿಷಯಗಳನ್ನು ಉಸ್ಲಮಯವಾಗಿ ಕಲಿತಿದೆ ಎಂದು ಅಚ್ಚರಿ ಪಡುತ್ತಾರೆ. ಆದರೆ ವಾಸ್ತವಿಕವಾಗಿ ಅವೆಲ್ಲವೂ ಬದುಕಿನ ಗಿಡವನ್ನು ಗಟ್ಟಿಗೊಳಿಸುವ ಚಟುವಟಿಕೆಗಳಲ್ಲ. ಹಾಗೆಂದು ವಿದ್ಯಾರ್ಥಿಗೆ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುವ ಪೂರಕ ತಾಣಗಳೆಂಬುದರಲ್ಲಿ ಅನುಮಾನವಿಲ್ಲ.
 
ಅಂದರೆ ಶಾಲೆಗಳು ಮತ್ತು ಶಿಬಿರಗಳು ಪರಸ್ಪರ ಪೂರಕವೇ ಹೊರತು ಶಾಲೆಗಳನ್ನು ಟೀಕಿಸುವ ವಿದ್ಯಮಾನ ಸರಿಯಲ್ಲ. ಹಾಗಾಗಿ ಶಿಬಿರಗಳಲ್ಲಿ ರೋಚಕತೆಯನ್ನು ಕಾಣುವ ಹೆತ್ತವರು ಶಾಲೆಗಳಲ್ಲಿ ರಚನಾತ್ಮಕ ಕ್ರಿಯೆ ನಡೆಯುತ್ತಿರುವುದನ್ನು ಗೌರವಿಸಬೇಕು.ಶಾಲೆಗಳ ಶಿಕ್ಷಕರೂ ಶಿಬಿರಗಳ ಸಂಪನ್ಮೂಲ ವ್ಯಕ್ತಿಗಳಷ್ಟೇ ಪ್ರಾಮುಖ್ಯರೆಂಬುದನ್ನು ಅರ್ಥೈಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT