ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ನುಗ್ಗಿದ ನೀರು: ರಜೆ ಘೋಷಣೆ

Last Updated 4 ಸೆಪ್ಟೆಂಬರ್ 2013, 5:32 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಮ್ಮರಚೇಡು ಗ್ರಾಮದ ಬಳಿಯ ಹಳ್ಳ ತುಂಬಿ ಹರಿದ ಪರಿಣಾಮ, ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿ ಪಾಠೋಪಕರಣ, ಪೀಠೋಪಕರಣ, ದಾಖಲೆಗಳಿಗೆ ತೀವ್ರ ಹಾನಿ ಸಂಭವಿಸಿದೆ.

ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಬೆಳಗಿನ ಜಾವ ಗ್ರಾಮದ ಅಂಚಿನಲ್ಲೇ ಇರುವ ಹಳ್ಳಕ್ಕೆ ಪ್ರವಾಹ ಬಂದಿದ್ದು, ಪಕ್ಕದಲ್ಲೇ ಇರುವ ಶಾಲೆಯ ಆವರಣದೊಳಗೆ ನೀರು ನುಗ್ಗಿದೆ. ಅಲ್ಲದೆ, ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ತುಂಬಿ ಹರಿದ ಪರಿಣಾಮ ಮಂಗಳವಾರ ಶಾಲೆಗೆ ರಜೆ ಘೋಷಿಸಲಾಯಿತು.

ಶಾಲೆಯಲ್ಲಿನ ಅನೇಕ ಕೊಠಡಿಗಳಲ್ಲಿ ನೀರು ನುಗ್ಗಿದ್ದು, ಕುರ್ಚಿ, ಟೇಬಲ್, ಪಾಠೋಪಕರಣಗಳು, ಮಕ್ಕಳ ದಾಖಲಾತಿ ಮತ್ತು ಹಾಜರಾತಿಗೆ ಸಂಬಂಧಿಸಿದ ದಾಖಲೆಗಳು ನೀರಿನಲ್ಲಿ ಮುಳುಗಿ ಕೊಂಚ ಪ್ರಮಾಣದ ಹಾನಿ ಉಂಟಾಗಿದೆ. ಕಂಪ್ಯೂಟರ್ ಮತ್ತಿತರ ಉಪಕರಣಗಳಿಗೂ ಧಕ್ಕೆ ಉಂಟಾಗಿದೆ ಎಂದು ಶಾಲೆಯ ಸಿಬ್ಬಂದಿ ತಿಳಿಸಿದರು.

ಶಾಲೆಯಲ್ಲಿ ಬಿಸಿಯೂಟ ಸಿದ್ಧಪಡಿಸಲು ಬಳಸುವ ಅಕ್ಕಿ, ಬೇಳೆ ಮತ್ತಿತರ ಆಹಾರ ಪದಾರ್ಥಗಳ ಚೀಲಗಳೂ ನೀರಲ್ಲಿ ಮುಳುಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ ಎಂದು ಅವರು ಹೇಳಿದರು.

ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಶಾಲೆಗೆ ತೆರಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಜೆ ನೀಡುವುದು ಅನಿವಾರ್ಯವಾಯಿತು ಎಂದು ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.

`ಶಾಲೆಯಲ್ಲಿನ ಪರಿಕರಗಳಿಗೆ ತೀವ್ರ ಹಾನಿ ಸಂಭವಿಸಿದೆ. ಆದರೂ ನನಗೆ ಗ್ರಾಮಕ್ಕೆ ಭೇಟಿ ನೀಡುವುದಕ್ಕೆ ಸಾಧ್ಯವಾಗಿಲ್ಲ. ನಾಳೆ ಅಥವಾ ನಾಳಿದ್ದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವೆ' ಎಂದು ಅವರು ಹೇಳಿದರು.

ಗ್ರಾಮಸ್ಥರಿಗೆ ತೀವ್ರ ತೊಂದರೆ: ಗ್ರಾಮದ ಅಂಚಿನಲ್ಲೇ ದೊಡ್ಡ ಹಳ್ಳ ಹರಿದಿದ್ದರೂ ದಾಟುವುದಕ್ಕೆ ಎತ್ತರದ ಸೇತುವೆ ಇಲ್ಲ. ಇದರಿಂದಾಗಿ, ಹಳ್ಳ ತುಂಬಿ ಹರಿದಾಗಲೆಲ್ಲ ಗ್ರಾಮದಿಂದ ಹೊರಗೆ ಹೋಗುವುದು ಅಸಾಧ್ಯವಾಗುತ್ತದೆ ಎಂದು ಕಮ್ಮರಚೇಡು ಗ್ರಾಮಸ್ಥರು ತೀವ್ರ ನೋವು ತೋಡಿಕೊಂಡರು.

ಈ ಕುರಿತು ಅನೇಕ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಿಗೂ, ಶಾಸಕರು, ಸಚಿವರಿಗೂ ಮನವಿ ಸಲ್ಲಿಸಿ ಸಕಾರ್ಧರದ ಗಮನ ಸೆಳೆಯಲಾಗಿದೆ. ಆದರೂ ಸೂಕ್ತ ರೀತಿಯ ಸೇತುವೆ ನಿರ್ಮಿಸಲಾಗಿಲ್ಲ ಎಂದು ಗ್ರಾಮದ ಅನೇಕರು ದೂರಿದರು.

ಹಳ್ಳ ತುಂಬಿ ಹರಿಯುವ ಸಮಯದಲ್ಲಿ ಗ್ರಾಮದಿಂದ ಹೊರಗೇ ಹೋಗುವುದು ಅಸಾಧ್ಯವಾಗಿ, ದೈನಂದಿನ ಚಟುವಟಿಕೆಗಳೆಲ್ಲ ಸ್ಥಗಿತಗೊಳ್ಳುತ್ತವೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ದೊಡ್ಡ ವಾಹನಗಳೂ ಹೊರ ಹೋಗದಂತ ಸ್ಥಿತಿ ಇರುತ್ತದೆ ಎಂದು ಅವರು ಅಳಲು ತೋಡಿಕೊಂಡರು. ಹಳ್ಳದ ಪಕ್ಕದಲ್ಲೇ ಇರುವ ಶಾಲೆಗೂ ನೀರು ನುಗ್ಗುವುದು ಸಾಮಾನ್ಯ ಸಂಗತಿ ಇದರಿಂದಾಗಿ ವಿದ್ಯಾರ್ಥಿಗಳಿಗೂ ತೊಂದರೆ ಎಂದು ಗ್ರಾಮಸ್ಥರಾದ ಅಂಜಿನಪ್ಪ, ವೆಂಕಟೇಶ ಮತ್ತಿತರರು ಹೇಳಿದರು.

ಶಾಲೆಯ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ ಶಿಕ್ಷಣ ಇಲಾಖೆಯ  ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ಕುರಿತು ಅರಿಯಬೇಕಿರುವ ಅಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಕೇವಲ 10 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಭೇಟಿ ನೀಡದಿದ್ದರೆ, ದೂರದ ಗ್ರಾಮಗಳಿಗೆ ಭೇಟಿ ನೀಡುತ್ತಾರಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಮಾಹಿತಿ ಇಲ್ಲ
`ಮಳೆಯಿಂದ ಸಮಸ್ಯೆ ಆಗಿರುವ ಕುರಿತು ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರೂ ನನ್ನ ಗಮನಕ್ಕೆ ತಂದಿಲ್ಲ' ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಇಂತಹ ಬೆಳವಣಿಗೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರೇ ಗಮನಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT