ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬೀಗ; ವಿದ್ಯಾರ್ಥಿಗಳ ಧರಣಿ

Last Updated 4 ಆಗಸ್ಟ್ 2013, 8:01 IST
ಅಕ್ಷರ ಗಾತ್ರ

ಸಿಂದಗಿ: ಶಾಲೆಯಲ್ಲಿ ಶಿಕ್ಷಕರಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ಪಾಲಕರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದರೆ ಇದಕ್ಕೆ ಬೆಂಬಲ ಎಂಬಂತೆ ವಿದ್ಯಾರ್ಥಿಗಳು ಶಾಲಾ ಬಯಲಲ್ಲಿ ಕುಳಿತು ಧರಣಿ ನಡೆಸಿದ ಘಟನೆ ಸಿಂದಗಿಯಲ್ಲಿ ಶನಿವಾರ ನಡೆದಿದೆ.

ನಗರದ ಕೇಂದ್ರ ಪುರಸ್ಕೃತ ಆರ್‌ಎಂಎಸ್‌ಎ ಯೋಜನೆಯ ಸರ್ಕಾರಿ ಆಂಗ್ಲ ಮಾಧ್ಯಮ ಆದರ್ಶ ವಿದ್ಯಾಲಯದಲ್ಲಿ ಇಂದು ಹಠಾತ್‌ನೇ ವಿದ್ಯಾರ್ಥಿಗಳು ಶಿಕ್ಷಕರು ಬೇಕು ಎಂದು ಘೋಷಣೆ ಕೂಗುತ್ತ ವರ್ಗ ಬಹಿಷ್ಕರಿಸಿ ಬಯಲಲ್ಲಿ ಧರಣಿ ನಡೆಸಿದರು. ಅದರಂತೆ ಪಾಲಕರು ಶಾಲೆಯತ್ತ ಧಾವಿಸಿ ಶಾಲಾ ಕೊಠಡಿಗಳಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖ ಮಲ್ಲು ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ  ಶೈಕ್ಷಣಿಕ ಯೋಜನೆಯಾಗಿರುವ ಆರ್‌ಎಂಎಸ್‌ಎ ಅಡಿಯಲ್ಲಿ ನಡೆಯುವ ಆದರ್ಶ ಆಂಗ್ಲ ಮಾಧ್ಯಮ ವಿದ್ಯಾಲಯ ಹೆಸರಿಗೆ ಮಾತ್ರ ಆದರ್ಶ ಎಂಬಂತಾಗಿದೆ. ಇಲ್ಲಿನ  ನಾಲ್ಕು ತರಗತಿಗಳಲ್ಲಿ 400 ವಿದ್ಯಾರ್ಥಿಗಳಿದ್ದಾರೆ. ಆದರೆ ಶಿಕ್ಷಕರು ಕೇವಲ ಇಬ್ಬರೇ ಅವರೂ ಕೂಡ ತಾತ್ಕಾಲಿಕ ನಿಯೋಜನೆ ಮೇರೆಗೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಲಿಯುವುದಾದರೂ ಏನು? ಎಂದು ಪ್ರಶ್ನಿಸಿದರು.

ಈ ವಿದ್ಯಾಲಯದ ಮುಖ್ಯಗುರು ಎಸ್.ಕೆ. ಗುಗ್ಗರಿ ಅತ್ಯಂತ ಸಮರ್ಥರಾಗಿದ್ದು, ಶಿಕ್ಷಕರ ಕೊರತೆಯ ಮಧ್ಯೆಯೂ ನಾಲ್ಕು ವರ್ಷಗಳ ಕಾಲ ಶಾಲೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಹೊರಟಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರು ಇವರನ್ನು ಇಲ್ಲಿ ನೇಮಕ ಮಾಡಿದ್ದಾರೆ. ಈಗ ಈ ಶಿಕ್ಷಕರನ್ನು ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಇಲ್ಲಿಂದ ಎತ್ತಂಗಡಿ ಮಾಡಿ ಬೇರೆ ಶಾಲೆಗೆ ವರ್ಗಾಯಿಸಿರುವುದು ಅನ್ಯಾಯದ ಪರಮಾವಧಿ ಎಂದು ಟೀಕಿಸಿದರು.

ಶಾಲಾ ವಿದ್ಯಾರ್ಥಿಗಳಾದ ಪ್ರದೀಪ ಗಂಟಿ, ವಿನಾಯಕ ಬೂದಿಹಾಳ, ಸಂಗಮೇಶ ಪಾಟೀಲ, ಹರೀಶ ತಾಳಿಕೋಟೆ, ಶಹಜಾಬಾನು ಲೋಣಿ, ಆಫ್ರಿನ್ ದಫೇದಾರ, ಶ್ವೇತಾ ಸಿಂದಗಿ, ಇಮ್ರಾನ್ ನಾಯ್ಕೋಡಿ, ಲಕ್ಷ್ಮೀ ವಾಲೀಕಾರ ಮಾತನಾಡಿ, ಶಿಕ್ಷಕ ಎಸ್.ಕೆ.ಗುಗ್ಗರಿ ಅವರನ್ನು ಶಾಲೆಗೆ ತರದಿದ್ದರೆ ನಾವ್ಯಾರೂ ಶಾಲೆ ಒಳಗೆ ಹೋಗುವುದಿಲ್ಲ. ಸೋಮವಾರ ವರೆಗೆ ಗಡುವು ನೀಡುತ್ತಿದ್ದೇವೆ. ಸೋಮವಾರ ಗುಗ್ಗರಿ ಸರ್ ಅವರನ್ನು ಶಾಲೆಗೆ ಕರೆ ತರದಿದ್ದರೆ ಶಾಲೆ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಬೆದರಿಕೆ ಹಾಕಿದರು.

ಸ್ಥಳಕ್ಕೆ ಧಾವಿಸಿದ ಗ್ರೇಡ್-2 ತಹಶೀಲ್ದಾರ ಮಾಳಗಿ ಹಾಗೂ ಶಿಕ್ಷಣ ಸಂಯೋಜಕ ನೀರಲಗಿ ಅವರಿಗೆ ಪಾಲಕರು ಮನವಿ ಪತ್ರ ಸಲ್ಲಿಸಿದರು.

ಸಾಹೇಬಪಟೇಲ್ ಮಾಲಿಪಟೇಲ, ಮಲ್ಲು ದೇಶೆಟ್ಟಿ, ಅಣ್ಣಾರಾಯ ಜಂಬಗಿ, ರವಿ ಮಂಗಳೂರ, ಆಶಾ ಕುಲಕರ್ಣಿ, ಫಾತೀಮಾ ದಫೇದಾರ, ನೂರಜಾನ್ ಲೋಣೊ, ಐ.ಸಿ.ಕುದರಿ, ಶಾಂತಮ್ಮ ಅಂಗಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT