ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಮಕ್ಕಳ ಸೆಳೆಯಲು ಅಮೃತ ಭೋಜನ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಗದಗ: ಇಲ್ಲಿನ ನರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಮಾಸ ಪೂರ್ತಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿಯನ್ನು ನೀಡುವ ವಿನೂತನ ಕಾರ್ಯಕ್ರಮ ಪ್ರಾರಂಭವಾಗಿದೆ.

ಅಕ್ಷರ ದಾಸೋಹದ ಅಡಿಯಲ್ಲಿ ಮಧ್ಯಾಹ್ನ ನೀಡುವ ಅನ್ನ-ಸಾಂಬಾರ್ ಜೊತೆಗೆ ಒಂದೊಂದು ದಿನ ಒಂದೊಂದು ರೀತಿ ಸಿಹಿ ನೀಡಲಾಗುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸುಗಳಾದ ಗೋಧಿ ಹುಗ್ಗಿ, ಶೇಂಗಾ ಹೋಳಿಗೆ, ಶೇಂಗಾ ಉಂಡಿ ಮಾತ್ರವಲ್ಲದೇ ಶಾವಿಗೆ ಪಾಯಸ, ಮೈಸೂರು ಪಾಕ್, ಜಿಲೇಬಿ ಮುಂತಾದ ಸಿಹಿಯನ್ನು ಮಕ್ಕಳಿಗೆ ಕೊಡಲಾಗುತ್ತದೆ.

ಸಿಹಿಯೂಟ ನೀಡುವುದಕ್ಕೆ `ಅಮೃತ ಭೋಜನ~ ಎಂದು ಹೆಸರು ಇಡಲಾಗಿದೆ. ಇದನ್ನು ಶಿಕ್ಷಕರೇ ಸ್ವಯಂ ಪ್ರೇರಿತರಾಗಿ ಪ್ರಾರಂಭಿಸಿದ್ದಾರೆ. ಪ್ರತಿದಿನ ಒಬ್ಬರು ಶಿಕ್ಷಕರು ಸಿಹಿಯೂಟದ ಖರ್ಚನ್ನು ವಹಿಸಿಕೊಳ್ಳುತ್ತಾರೆ. ಅಂದಾಜು 600 ರೂಪಾಯಿ ವೆಚ್ಚವಾಗುತ್ತದೆ. ಜೊತೆಗೆ ಎಸ್‌ಡಿಎಂಸಿ ಅಧ್ಯಕ್ಷರು- ಸದಸ್ಯರೂ ಕೂಡಾ ಕೈ ಜೋಡಿಸಿದ್ದಾರೆ.

ತಮ್ಮೂರಿನ ಶಾಲೆಯಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿರುವುದನ್ನು ಗಮನಿಸಿದ ಗ್ರಾಮದ ಮುಖಂಡರು ತಾವೇ ಶಾಲೆಗೆ ಬಂದು ಒಂದು ದಿನದ ಸಿಹಿಯೂಟವನ್ನು ತಾವು ನೀಡುವುದಾಗಿ ತಿಳಿಸಿ, ಹೆಸರನ್ನು ಬರೆಯಿಸಿ ಹೋಗಿದ್ದಾರೆ. ಇದರಿಂದಾಗಿ ಶ್ರಾವಣ ಮಾಸದ ದಿನವೆಲ್ಲ ದಾನಿಗಳಿಂದ ಭರ್ತಿಯಾಗಿದೆ. ಅಲ್ಲದೇ ಇನ್ನು ಅನೇಕ ಜನರು ಬಂದು  ಸಿಹಿಯೂಟದ ಸೇವಾರ್ಥ ಮಾಡಿಸುವುದಾಗಿ ಕೇಳಿಕೊಳ್ಳುತ್ತಿದ್ದಾರೆ.

ಅಮೃತ ಭೋಜನ ಯೋಜನೆ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಕಳಕಣ್ಣನವರ, `1ರಿಂದ 7ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 178 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇವರಲ್ಲಿ ಪ್ರತಿದಿನ 30ರಿಂದ 40 ಮಕ್ಕಳು ಗೈರು ಹಾಜರಾಗುತ್ತಿದ್ದರು.

ಆದ್ದರಿಂದ ಶಾಲೆಯ ಶಿಕ್ಷಕರೆಲ್ಲ ಸಭೆ ಸೇರಿ ಶಾಲೆಯಲ್ಲಿ ಸಂಪೂರ್ಣ ಹಾಜರಾತಿ ತರುವುದು ಹೇಗೆ ಎಂದು ಯೋಚನೆ ಮಾಡಿ, ಕೊನೆಗೆ ಅಮೃತ ಭೋಜನವನ್ನು ಜಾರಿಗೆ ತರಲು ನಿರ್ಣಯಿಸಲಾಯಿತು. ಈಗ ದಿನವೂ ಯಾವ ಮಕ್ಕಳು ತಪ್ಪಿಸಿಕೊಳ್ಳುತ್ತಿಲ್ಲ. ಎಲ್ಲರೂ ಕಡ್ಡಾಯವಾಗಿ ಬರುತ್ತಿದ್ದಾರೆ~ ಎಂದರು.

`ಸಿಹಿ ಎಂದರೆ ಮಕ್ಕಳಿಗೆ ಇಷ್ಟ. ಪ್ರತಿ ದಿನ ಬೇರೆ-ಬೇರೆ ತರಹದ ಸಿಹಿ ನೀಡಿದರೆ ಮಕ್ಕಳು ಖಂಡಿತ ಶಾಲೆಗೆ ಬರುತ್ತಾರೆ ಎನ್ನುವ ಆಶಾವಾದದಿಂದ `ಅಮೃತ ಭೋಜನ~ ಯೋಜನೆ ಪ್ರಾರಂಭ ಮಾಡಲಾಗಿದೆ. ಶನಿವಾರವೂ  ಬೆಳಿಗ್ಗೆ ತಿಂಡಿಯ ಜೊತೆ ಸಿಹಿಯನ್ನು ನೀಡಲಾಗುತ್ತದೆ.  ದಿನದಿಂದ ದಿನಕ್ಕೆ ದಾನಿಗಳು ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಶ್ರಾವಣ ಮಾಸ ಮುಗಿದ ನಂತರವೂ ಈ ಯೋಜನೆಯನ್ನು ಮುಂದುವರಿಸುವ ಆಲೋಚನೆ ಇದೆ~ ಎಂದು ಕಳಕಣ್ಣ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT