ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲೂ ಕಲಿಯುವುದಿದೆ...

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಠ್ಯ ದಲ್ಲಿ ಲೈಂಗಿಕ ಶಿಕ್ಷಣ-----

ಮಕ್ಕಳು ಲೈಂಗಿಕತೆ ಕುರಿತು ಹೇಗೆ ತಿಳಿಯುತ್ತಾರೆ? ಬಹುಶಃ ಸುತ್ತಮುತ್ತಲ ಪ್ರಾಣಿಪಕ್ಷಿಗಳೇ ಅವರ ಪ್ರಥಮ ಗುರುಗಳು. ಜೊತೆಗೆ ಸಮವಯಸ್ಕರಿಂದ ಅರೆಭಯ, ಅರೆ ಕುತೂಹಲದ ಗುಟ್ಟಿನ ಪಿಸುಮಾತಿನಲ್ಲಿ ಸ್ವಲ್ಪ ತಿಳಿಯುತ್ತಾರೆ.
ಟಿವಿ-ಸಿನಿಮಾ ದೃಶ್ಯಗಳನ್ನು ನೋಡಿ ಕೆಲವನ್ನು ಊಹಿಸಿಕೊಳ್ಳುತ್ತಾರೆ. ಅಂತರ್ಜಾಲದಲ್ಲಿ ಅವಶ್ಯವಿರುವುದಕ್ಕಿಂತ ಹೆಚ್ಚೇ ಮಾಹಿತಿ ಸಿಗುತ್ತದೆ. ಆದರೆ ಇದ್ಯಾವುವೂ ಒಪ್ಪಿತವಾದದ್ದು ಮತ್ತು ಅಲ್ಲದ್ದು ಯಾವುದೆಂದು ವಿವರಿಸುವುದಿಲ್ಲ.
 
ರೋಗ ಮುಕ್ತ ಸ್ವಸ್ಥ ದೇಶವನ್ನು ನಿರ್ಮಿಸಬೇಕಾದಲ್ಲಿ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳಲ್ಲಿ ಅಳವಡಿಸಿ, ಎಳೆಯ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿಯುವ ಮಕ್ಕಳನ್ನು ಸರಿದಾರಿಗೆ ಕರೆತರಬೇಕಾದ ಗುರುತರ ಜವಾಬ್ದಾರಿ ಸರ್ಕಾರ, ಶಿಕ್ಷಣ ಇಲಾಖೆ, ಶಿಕ್ಷಕರು ಮತ್ತು ಪಾಲಕರದ್ದಾಗಿದೆ.

                                          -------

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೋ ಬೇಡವೋ ಎಂಬ ಪ್ರಶ್ನೆ. ಈ ಸಮಸ್ಯೆ ಮನುಷ್ಯ ಪ್ರಾಣಿಯನ್ನು ಹೊರತುಪಡಿಸಿ ಪ್ರಕೃತಿಯ ಯಾವ ಜೀವಿಗೂ ತಲೆದೋರಿರಲಾರದು. ಸಂತತಿ ಮುಂದುವರಿಕೆಗೆ ಅನಿವಾರ್ಯವಾದ ಲೈಂಗಿಕತೆಯ ಬಗೆಗೆ ಪ್ರಾಥಮಿಕ ಅರಿವು ತಂತಾನೇ ಮೂಡುತ್ತದೆ ಎನ್ನುವುದು ನಿಸರ್ಗವಾದಿಗಳ (ನ್ಯಾಚುರಲಿಸ್ಟರ) ವಾದ.
 
ಆದರೆ ನಿಸರ್ಗ ಸಹಜ ನಗ್ನತೆ ಮರೆಮಾಚಿ ಮನುಷ್ಯ ಬಟ್ಟೆ ತೊಟ್ಟ ದಿನವೇ ಕಾಮದ ಕುರಿತು ದುಷ್ಟ ಕುತೂಹಲವೂ, ಲೈಂಗಿಕ ಶಿಕ್ಷಣದ ಅಗತ್ಯವೂ ಹುಟ್ಟಿರಬಹುದು. ಕಾಮಶಾಸ್ತ್ರ ಕುರಿತು ಗ್ರಂಥ ಬರೆದ, ಅನಾದಿ ಕಾಲದಿಂದ ವೇಶ್ಯಾವೃತ್ತಿ ಪೋಷಿಸಿಕೊಂಡು ಬಂದ, ಪುರುಷಾರ್ಥಗಳಲ್ಲಿ ಕಾಮವನ್ನು ಸೇರಿಸಿದ ನಾವು, ಮಕ್ಕಳಿಗೆ ಲೈಂಗಿಕತೆಯ ಬಗೆಗೆ ತಿಳಿಸುವುದಿಲ್ಲ. ಅಥವಾ `ಒಳ್ಳೆಯ ಮಕ್ಕಳಾಗುವುದೆಂದರೆ ಲೈಂಗಿಕತೆಯ ಕಡೆ ಗಮನ ಹರಿಸದೇ ಇರುವುದು~ ಎಂದೇ ಭಾವಿಸಿದ್ದೇವೆ.
 
ಆದರೆ ಮನುಷ್ಯ ಸಂಬಂಧಗಳು, ನೈತಿಕತೆ, ಲೈಂಗಿಕತೆಯ ಕಲ್ಪನೆಗಳು ಈಗ ಬದಲಾಗಿದ್ದು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ. 
ಮಕ್ಕಳು ಲೈಂಗಿಕತೆ ಕುರಿತು ಹೇಗೆ ತಿಳಿಯುತ್ತಾರೆ? ಬಹುಶಃ ಸುತ್ತಮುತ್ತಲ ಪ್ರಾಣಿಪಕ್ಷಿಗಳೇ ಅವರ ಪ್ರಥಮ ಗುರುಗಳು.
 
ಜೊತೆಗೆ ಸಮವಯಸ್ಕರಿಂದ ಅರೆಭಯ, ಅರೆ ಕುತೂಹಲದ ಗುಟ್ಟಿನ ಪಿಸುಮಾತಿನಲ್ಲಿ ಸ್ವಲ್ಪ ತಿಳಿಯುತ್ತಾರೆ. ಟಿವಿ-ಸಿನಿಮಾ ದೃಶ್ಯಗಳನ್ನು ನೋಡಿ ಕೆಲವನ್ನು ಊಹಿಸಿಕೊಳ್ಳುತ್ತಾರೆ.

ಅಂತರ್ಜಾಲದಲ್ಲಿ ಅವಶ್ಯವಿರುವುದಕ್ಕಿಂತ ಹೆಚ್ಚೇ ಮಾಹಿತಿ ಸಿಗುತ್ತದೆ. ಆದರೆ ಇದ್ಯಾವುದೂ ಒಪ್ಪಿತವಾದದ್ದು ಮತ್ತು ಅಲ್ಲದ್ದು ಯಾವುದೆಂದು ವಿವರಿಸುವುದಿಲ್ಲ. ಭಾರತೀಯ ತಾಯ್ತಂದೆಯರು ಮಕ್ಕಳಿಗೆ ದೈಹಿಕ ಬದಲಾವಣೆ ಕುರಿತು ಹೇಳಬಹುದೇ ಹೊರತು, ತಿರುಗಿ ಬರುವ ಪ್ರಶ್ನೆಗಳ ಮುಜುಗರಕ್ಕೆ ಲೈಂಗಿಕತೆ-ಆಮಿಷಗಳ ಕುರಿತು ಮುಕ್ತವಾಗಿ ಮಾತನಾಡಲಾರರು.

ಮಕ್ಕಳು ಹೇಗೆ ಹುಟ್ಟುತ್ತಾರೆಂಬ ಸರಳ ಪ್ರಶ್ನೆಗೆ `ಹೊಟ್ಟೆ ಒಡೆದು~ ಎಂದೋ, `ದೇವರು ಪಕ್ಕ ಇಟ್ಟು ಹೋಗುತ್ತಾನೆ~ ಎಂದೋ ಹಾರಿಕೆಯ ಸುಳ್ಳು ಉತ್ತರ ಕೊಡುವವರು ಸರಿ-ತಪ್ಪು, ಸುರಕ್ಷಿತ-ಅಸುರಕ್ಷಿತ ಲೈಂಗಿಕತೆಯ ಆರೋಗ್ಯಪೂರ್ಣ ಪಾಠ ಹೇಳಿಯಾರೆ? 
ಬೇಡವೆಂದಿದ್ದರ ಕಡೆಗೇ ಮನಸ್ಸು ಎಳೆಯುವ ಹದಿಹರೆಯದ ಮಕ್ಕಳಿಗೆ, ಲೈಂಗಿಕತೆ ಬಗೆಗೆ ಯಾರು, ಯಾವಾಗ ಹೇಳಬೇಕೆಂದು ನಿರ್ಧರಿಸುವುದು ಕಷ್ಟ.
 
ಪ್ರೌಢಶಾಲೆಯ ಮಕ್ಕಳಿಗೆ ಲೈಂಗಿಕತೆ ಕುರಿತು ಸ್ವಲ್ಪ ತಿಳಿದಿರುತ್ತದೆ. ಅವರಿಗೆ ತಿಳಿದ ಮಾಹಿತಿಗಳು ಸರಿಯೇ ತಪ್ಪೇ ಎಂಬುದು ಶಾಲಾ ಪಠ್ಯಕ್ರಮದಲ್ಲಿ, ಶಿಕ್ಷಕರ ಬೋಧನೆಯಲ್ಲಿ ತಿಳಿಯುವಂತಿರಬೇಕು. ಆದರೆ ಈಗ ಶಾಲೆಗಳಲ್ಲಿ ವರ್ಷದ ಕೊನೆಯವರೆಗೆ ಸಂತಾನೋತ್ಪತ್ತಿ ವಿಷಯದ ಪಾಠಗಳನ್ನು ಮಾಡದೇ ಕೊನೆಗೆ `ನೀವೇ ಓದಿಕೊಳ್ಳಿ~ ಎಂದು ಹೇಳುವುದೇ ಹೆಚ್ಚು.
 
ಮಕ್ಕಳು ಉಸಿರು ಬಿಗಿಹಿಡಿದು ಈ ಪಾಠ, ಮಾಹಿತಿಗಾಗಿ ಕಾಯುತ್ತಿರುತ್ತಾರೆ. ಋತು ಚಕ್ರ, ಸೃಷ್ಟಿಯ ಕುರಿತು ನೂರಾರು ಪ್ರಶ್ನೆಗಳಿರುತ್ತವೆ. ದೇಹದ ಮೇಲೆ ಹಿಡಿತ ಸಾಧಿಸಲಾಗದ, ಸಮಾಜದ ಹಿಡಿತದಿಂದ ಬಿಡಿಸಿಕೊಳ್ಳಲು ಚಡಪಡಿಸುವ ಹದಿವಯಸ್ಸಿನ ಮಕ್ಕಳು ಕುತೂಹಲದಲ್ಲಿ ನಿಗಿನಿಗಿ ಉರಿಯುತ್ತಿರುತ್ತಾರೆ.
 
ಉಳಿದೆಲ್ಲ ವಿಷಯ ಬೋಧಿಸಿದಷ್ಟೇ ಸಹಜವಾಗಿ ಈ ವಿಷಯವನ್ನೂ ಹೇಳಿದಲ್ಲಿ ಮಕ್ಕಳು ಖಂಡಿತ ಕೇಳಿಸಿಕೊಳ್ಳುತ್ತಾರೆ. ಅದಕ್ಕಾಗಿ ಶಿಕ್ಷಕರಿಗೆ ಪೂರ್ವ ತಯಾರಿ, ಮಕ್ಕಳ ಮೇಲೆ ಹಿಡಿತ, ಗಾಂಭೀರ್ಯ ಎಲ್ಲವೂ ಬೇಕಾಗುತ್ತದೆ. ಕೆಲವೆಡೆ ಹೆಣ್ಣು-ಗಂಡು ಮಕ್ಕಳನ್ನು ಬೇರೆಬೇರೆ ಕೂರಿಸಿ ಈ ಪಾಠಗಳನ್ನು ಒಂದು ಪಿರಿಯಡ್‌ನಲ್ಲಿ ಮುಗಿಸುತ್ತಾರೆ.
 
ಹೆಣ್ಣುಮಕ್ಕಳನ್ನು ಬೇರೆ  ಕರೆದುಕೊಂಡು ಹೋಗಿ ಶಿಕ್ಷಕಿ ಹೇಳುವುದಾದರೂ ಏನು? ಋತುಸ್ರಾವ, ಸ್ರಾವದ ಸಮಯದ ಸ್ವಚ್ಛತೆ, ದೇಹದ ಅಂಗಾಂಗಗಳ ಬಗೆಗೇ ಹೊರತು ಲೈಂಗಿಕತೆ ಬಗೆಗೆ ಅಲ್ಲ. ಈಗ್ಗೆ ಕೆಲ ವರ್ಷಗಳಿಂದ ಪ್ರೌಢಶಾಲೆ ಮಕ್ಕಳಿಗೆ ಏಡ್ಸ್ ಕುರಿತು ಮಾಹಿತಿ ನೀಡಲಾಗುತ್ತಿದೆ.

ಸಂಪನ್ಮೂಲ ವ್ಯಕ್ತಿಯಾಗಿ ನಾನು ಹೋದ ಕಡೆಯೆಲ್ಲ ಶಿಕ್ಷಕರು, `ಸಂತಾನೋತ್ಪತ್ತಿ, ಲೈಂಗಿಕ ಅಂಗಗಳ ಕುರಿತು ನೀವೇ ಹೇಳಿಬಿಡಿ ಮೇಡಂ, ನಾವು ಚಾರ್ಟ್ ತೆಗೆದುಕೊಂಡು ಹೋದರೆ ಮಕ್ಕಳು ಗಲಾಟೆ ಮಾಡಿ ಪಾಠ ಮಾಡಲಿಕ್ಕೇ ಬಿಡಲ್ಲ~ ಎಂದು ಅಲವತ್ತುಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾದರೆ ಮಕ್ಕಳು ಲೈಂಗಿಕತೆಯ ಕುರಿತು ಅನುಮಾನ ನಿವಾರಿಸಿಕೊಳ್ಳುವುದು ಯಾವಾಗ?

ಮಕ್ಕಳಲ್ಲಿ ಲೈಂಗಿಕ ಕ್ರಿಯೆ ಪ್ರಯೋಗದ ಕುತೂಹಲ ಇರುತ್ತದೆ. ಅದು ಅಸುರಕ್ಷಿತವೆಂದು ಮತ್ತೆ ಹೇಳಬೇಕಿಲ್ಲ. ಇದು ಉಂಟು ಮಾಡುವ ಎರಡು ದೊಡ್ಡ ಅನಾಹುತಗಳೆಂದರೆ ಲೈಂಗಿಕ ರೋಗಗಳ ಸೋಂಕು ಮತ್ತು ಗರ್ಭಧಾರಣೆ.
 
ಹದಿವಯಸ್ಸಿನ ಎಳೆ ಹುಡುಗಿಯರು ಪಾಲಕರಿಗೆ ತಿಳಿಸದೆ ಹೆದರುತ್ತ ಗರ್ಭಪಾತದ ಸಲುವಾಗಿ ಆಸ್ಪತ್ರೆ ಅಲೆಯುವುದು, ಆತ್ಮಹತ್ಯೆಗೆ ಪ್ರಯತ್ನಿಸುವುದು ಮತ್ತು ಸೋಂಕಿಗೊಳಗಾಗುವುದನ್ನು ನೋಡುವಾಗ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಗೊತ್ತಿದ್ದರೆ ಈ ಅನಾಹುತಗಳು ತಪ್ಪುತ್ತಿದ್ದವೇನೋ ಎನಿಸುತ್ತದೆ. ದೈಹಿಕ ಆರೋಗ್ಯ ಹಾಗೂ ಅಕಾಡೆಮಿಕ್ ಸಾಧನೆಗಳಿಗೂ ಅಡ್ಡ ಬರುವುದರಿಂದ ಈ ಕುರಿತ ತಿಳಿವಳಿಕೆ ಕೊಡುವುದು ಅಗತ್ಯವಾಗಿದೆ.

ಇದು ಏಡ್ಸ್ ಯುಗ. ಮುಕ್ತ, ಸ್ವಚ್ಛಂದ ಕಾಮ ಉದ್ಯಮವಾಗಿ, ಏಡ್ಸ್ ಸೋಂಕು ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಎಚ್‌ಐವಿ ಸೋಂಕು ಹೊಂದಿದವರ ಸಂಖ್ಯೆ 3.33 ಕೋಟಿ. ಅದರಲ್ಲಿ 15 ವರ್ಷಕ್ಕಿಂತ ಕೆಳಗಿನ 25 ಲಕ್ಷ ಮಕ್ಕಳು ಸೋಂಕಿತರು. ಪ್ರತಿ ವರ್ಷ 26 ಲಕ್ಷ ಜನ ಹೊಸದಾಗಿ ಸೋಂಕಿತರೆಂದು ಪತ್ತೆಯಾಗುತ್ತಿದ್ದು ಅವರಲ್ಲಿ 3.7 ಲಕ್ಷ ಸೋಂಕಿತರು 15 ವರ್ಷದೊಳಗಿನ ಮಕ್ಕಳು. 2009ರಲ್ಲಿ ಏಡ್ಸ್‌ನಿಂದ ಸತ್ತವರು 18 ಲಕ್ಷ. ಅದರಲ್ಲಿ 2.6 ಲಕ್ಷ ಮಕ್ಕಳು.

ಅತಿ ಹೆಚ್ಚು ಎಚ್‌ಐವಿ  ಸೋಂಕು ಹೊಂದಿದವರಲ್ಲಿ  ಭಾರತ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕವೊಂದರಲ್ಲೇ 15,000 ಎಚ್‌ಐವಿ ಇರುವ ಮಕ್ಕಳಿದ್ದಾರೆ. ನಿಜವಾದ ಸಂಖ್ಯೆ ಅದಕ್ಕಿಂತ ಬಹಳ ಹೆಚ್ಚಿದೆ. ಕೆಲ ಮಕ್ಕಳು ತಾಯಿಯಿಂದ, ಉಳಿದವರು ಲೈಂಗಿಕ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಎಚ್‌ಐವಿ  ಗುಣವಾಗಬೇಕಾದರೆ ಕನ್ಯೆಯೊಂದಿಗೆ ಸಂಭೋಗ ಮಾಡಬೇಕೆಂಬ ತಪ್ಪು ಕಲ್ಪನೆಯಿಂದ ವೇಶ್ಯಾವಾಟಿಕೆಗಳಲ್ಲಿ ಎಳೆಯ ಬಾಲೆಯರ ಬೇಡಿಕೆ ಹೆಚ್ಚಿದೆ.

ಬಾಲಕಿಯರ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಎಚ್‌ಐವಿ ವೈರಸ್ಸಿಗೆ ವ್ಯಾಕ್ಸೀನ್ ಕಂಡುಹಿಡಿಯುವುದು ಸಾಧ್ಯವಾಗಿಲ್ಲ. ಈ ಕಾಯಿಲೆಯ ಹತೋಟಿ ಎಂದರೆ ಸುರಕ್ಷಿತ ಲೈಂಗಿಕತೆಯ ಬಗೆಗೆ ಅರಿವು ಮೂಡಿಸುವುದು.

ಈ ಎಲ್ಲ ಕಾರಣಗಳಿಂದ ಮಕ್ಕಳಿಗೆ ಪಠ್ಯಕ್ರಮದಲ್ಲಿ ಲೈಂಗಿಕ ಮಾಹಿತಿ ಸೇರಿಸಿ, ಸೋಂಕು ರೋಗಗಳ ಬಗ್ಗೆ ಅರಿವು ಮೂಡಿಸಿ, ಸುರಕ್ಷಿತ ಲೈಂಗಿಕ ಕ್ರಿಯೆಯ ಬಗೆಗೆ ತಿಳುವಳಿಕೆ ಕೊಡಬೇಕಿದೆ. 110 ಕೋಟಿ ಜನರ ದೇಶದಲ್ಲಿ ಆರೋಗ್ಯಪೂರ್ಣ ಲೈಂಗಿಕತೆಯ ಕುರಿತು ಹೇಳಬೇಕಾದ ಅನಿವಾರ್ಯತೆ ಈಗ ಹುಟ್ಟಿದೆ.  

  ಇವೆಲ್ಲ ಶಾಲೆಗೆ ಹೋಗುವ ಮಕ್ಕಳ ಕುರಿತಾಯಿತು. ಶಾಲೆಯ ಮೆಟ್ಟಿಲು ಹತ್ತದ, ಹೈಸ್ಕೂಲು ಕಟ್ಟೆ ಏರದವರಿಗೆ ಲೈಂಗಿಕ ಶಿಕ್ಷಣ ನೀಡುವುದು ಹೇಗೆ? ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಜವಾಬ್ದಾರಿಯುತ ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಬ್ಲೂ ಫಿಲಂ ನೋಡುವ ಆರೋಪಕ್ಕೊಳಗಾಗುತ್ತಾರೆ. ಇಂಥ ಘಟನೆಗಳು ಎಳೆಯರಿಗೆ ಯಾವ ಸಂದೇಶ ಕಳಿಸುತ್ತವೆ? ಲೈಂಗಿಕತೆ ಕುರಿತ ರೋಚಕ, ತಪ್ಪು ಮಾಹಿತಿ ಪ್ರಸಾರ ಮಾಡುವ ಮಾಧ್ಯಮಗಳ ಮೇಲೆ ಯಾವ ನಿಯಂತ್ರಣವಿದೆ? 

ಅಂದರೆ, ಲೈಂಗಿಕ ಶಿಕ್ಷಣ ಕೇವಲ ಶಾಲೆಯಲ್ಲಿ ಕಲಿತು ಮುಗಿಯುವ ಪಾಠವಲ್ಲ. ಅದು ಮನೆಯಲ್ಲೂ, ಶಾಲೆಯಲ್ಲೂ, ಮಾಧ್ಯಮಗಳಲ್ಲೂ ನಿರಂತರ ದೊರೆಯಬೇಕಾದ ಆರೋಗ್ಯಪೂರ್ಣ ಲೈಂಗಿಕತೆಯ ಮಾಹಿತಿ.

   ಲೈಂಗಿಕ ಶಿಕ್ಷಣ ಹೀಗಿರಲಿ
* ಎಸ್ಸೆಸ್ಸೆಲ್ಸಿ ತನಕದ ಎಲ್ಲ ವಿದ್ಯಾರ್ಥಿಗಳಿಗೆ ಮಾನವ ಸಂತಾನೋತ್ಪತ್ತಿ, ಲೈಂಗಿಕ ಅಂಗಾಂಗಗಳು, ಅವುಗಳ ಕಾರ್ಯ, ಲೈಂಗಿಕ ರೋಗಗಳ ಬಗೆಗೆ ಪರಿಚಯಾತ್ಮಕವಾಗಿ ವಿಜ್ಞಾನದ ಜೀವಶಾಸ್ತ್ರದಲ್ಲಿ ತಿಳಿಸಬೇಕು.

* ಸಹಜ ಮತ್ತು ಅಸಹಜ ಲೈಂಗಿಕ ವರ್ತನೆಗಳು, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬೇಡದ ಗರ್ಭ ಧರಿಸುವಿಕೆ, ಅದರ ಅಪಾಯಗಳು, ಆರೋಗ್ಯ ಮತ್ತು ಶಿಕ್ಷಣದ ಮೇಲಾಗುವ ಪರಿಣಾಮಗಳ ಕುರಿತು ಹೇಳಬೇಕು.

* ಲೈಂಗಿಕತೆ ಪಾಪವಲ್ಲ. ಅಸಹ್ಯಕರವಲ್ಲ. ಆದರೆ ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯೊಂದಿಗೆ ಹೊಂದಬೇಕೆಂದು ತಿಳಿಸಬೇಕು. ಅಲ್ಲದೆ ಆರೋಗ್ಯಪೂರ್ಣ ಲೈಂಗಿಕತೆ, ನೈತಿಕತೆಯ ಕುರಿತೂ ಹೇಳಬೇಕು.

* ಜವಾಬ್ದಾರಿಯುತ ಕುಟುಂಬ ಜೀವನ, ಜನಸಂಖ್ಯಾ ಸ್ಫೋಟ, ವಿವಾಹಪೂರ್ವ ಲೈಂಗಿಕತೆಯ ಅಪಾಯಗಳು, ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಕಾದ ಅವಶ್ಯಕತೆ, ವಯಸ್ಕ ಪುರುಷರ ಆಮಿಷಗಳಿಗೆ, ಭಯಕ್ಕೆ ಬಲಿಯಾಗದಂತೆ ಹುಡುಗಿಯರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಾಗಿರುವುದರ ಕುರಿತೂ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT