ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ: ಉದ್ದೇಶ ಥರಾವರಿ

Last Updated 20 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಲವು ಚಟುವಟಿಕೆ ಕಾಣಿಸತೊಡಗಿದೆ. ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಮಾಜಸೇವಕರು ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಅಸ್ತಿತ್ವ ಸಾದರಪಡಿಸಬೇಕು ಮತ್ತು ಪ್ರಚಾರ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಅವರು ದಿಢೀರ್ ಹೋರಾಟದ ಮಾರ್ಗ ಕಂಡುಕೊಂಡಿದ್ದಾರೆ. ವರ್ಷಗಟ್ಟಲೆ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಎಂದಿಗೂ ನೇರವಾಗಿ ಪ್ರಸ್ತಾಪ ಮಾಡದ ಕೆಲವರು ಈಗ ಅದಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪ್ರತಿ ದಿನ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಭಿಮಾನಿ ಬಳಗದ ಸದಸ್ಯರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ರಾಜಕೀಯ ಮುಖಂಡರು ಮತ್ತು ಸಂಘ- ಸಂಸ್ಥೆಗಳ ಪ್ರತಿನಿಧಿಗಳು ನೋಡಿಕೊಳ್ಳುತ್ತಿದ್ದಾರೆ. 18 ದಿನ ಕಳೆದಿವೆ; ಸ್ಥಳೀಯ ಶಾಸಕರು ಹೊರತುಪಡಿಸಿದರೆ ಇತರ ತಾಲ್ಲೂಕಿನ ನಾಲ್ವರು ಶಾಸಕರು ಈವರೆಗೆ ಭಾಗವಹಿಸಿಲ್ಲ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ದಿನವೇ ಎಂ.ವೀರಪ್ಪ ಮೊಯಿಲಿ, `ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಐದು ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು~ ಎಂದು ಹೇಳಿದಾಗ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದರು. ಇನ್ನೇನು ಬರಪೀಡಿತ ಜಿಲ್ಲೆಯಲ್ಲಿ ನೀರಿನ ಹೊಳೆ ಹರಿಯಲಿದೆ ಎಂಬಂತೆ ಸಂಭ್ರಮಪಟ್ಟಿದ್ದರು.

ಆದರೆ, ಅದೇ ಸಚಿವರು ಈ ಹಿಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೊಡನೆ ಚರ್ಚಿಸಿದ ಬಳಿಕ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ, ರಾಜಕೀಯ ಮುಖಂಡರು ಮತ್ತು ಸಂಘ- ಸಂಸ್ಥೆಗಳಿಂದ ಕೆಲ ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. `ಜಿ.ಎಸ್.ಪರಮಶಿವಯ್ಯ ನೀರಾವರಿ ಯೋಜನೆ ಅನುಷ್ಠಾನ ಕಷ್ಟಸಾಧ್ಯ. ಸಕಲೇಶಪುರದಿಂದ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುವುದು~ ಎಂದು ವೀರಪ್ಪ ಮೊಯಿಲಿ ಪದೇ ಪದೇ ಹೇಳಿದಾಗಲೂ ಯಾವುದೇ ಪ್ರತಿಭಟನೆ ನಡೆಯಲಿಲ್ಲ.

`ಮೂರು-ನಾಲ್ಕು ವರ್ಷಗಳಿಂದ ವೀರಪ್ಪ ಮೊಯಿಲಿ ಎತ್ತಿನಹೊಳೆ ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಿದ್ದರೂ ಯಾರೂ ಚಕಾರವೆತ್ತಲಿಲ್ಲ. ಅವರೊಡನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು ಮತ್ತು ಜನಪ್ರತಿನಿಧಿಗಳು ಆಕ್ಷೇಪಿಸಲಿಲ್ಲ. ಬಾಗೇಪಲ್ಲಿ, ಗೌರಿಬಿದನೂರು ಮತ್ತು ಚಿಂತಾಮಣಿ ಶಾಸಕರು ಎತ್ತಿನಹೊಳೆ ಯೋಜನೆಗೆ ಪೂರಕವಾಗಿ ಮಾತನಾಡಿದರೂ ಯಾರೂ ಪ್ರತಿಭಟನೆ ನಡೆಸಿರಲಿಲ್ಲ.

ಎತ್ತಿನಹೊಳೆ ಯೋಜನೆ ನಮಗೆ ಬೇಡವೆಂದು ಯಾರೂ ನೇರವಾಗಿ ಹೇಳಲಿಲ್ಲ. ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತುದಿಗಾಲಲ್ಲಿ ಇರುವಾಗ, ಶಾಶ್ವತ ನೀರಾವರಿ ಯೋಜನೆ ಬೇಕೆಂದು  ಕೆಲವರು ಪಟ್ಟು ಹಿಡಿದಿದ್ದಾರೆ~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಶಿವಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಎತ್ತಿನಹೊಳೆ ಯೋಜನೆಗೆ ನೇರವಾಗಿ ವಿರೋಧ ವ್ಯಕ್ತಪಡಿಸದ ಕೆಲ ರಾಜಕೀಯ ಮುಖಂಡರು ಆಗ ಎತ್ತಿನಹೊಳೆ ಯೋಜನೆಯಿಂದ ಮಾತ್ರವಲ್ಲ ಆಲಮಟ್ಟಿ ಜಲಾಶಯದಿಂದಲೂ ಜಿಲ್ಲೆಗೆ ನೀರು ಬರಲಿ ಎಂದು ಹೇಳಿದ್ದರು. ಎರಡೂ ಯೋಜನೆಗಳಿಂದ ನೀರು ಬಂದರೂ ನಮಗೆ ಒಳ್ಳೆಯದೆ ಎಂದು ಹೇಳಿಕೊಂಡಿದ್ದರು.

ಎತ್ತಿನಹೊಳೆ ಯೋಜನೆ ಆರಂಭಗೊಳ್ಳಲಿ, ನಂತರ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಲಿದೆ ಎಂದು ಸರ್ಕಾರದ ಪರವಾಗಿ ಮಾತನಾಡಿದ್ದರು. ಆದರೆ ಈಗ ದಿಢೀರ್ ಎಚ್ಚೆತ್ತುಕೊಂಡಿರುವ ಕೆಲವರು ಪರಮಶಿವಯ್ಯ ವರದಿ ಜಾರಿಗೆ ಒತ್ತಾಯಿಸುತ್ತಿದ್ದಾರೆ~ ಎಂದು ಗುತ್ತಿಗೆದಾರ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

ಅಂತರ್ಜಲ ಮೊದಲು
ಚಿಕ್ಕಬಳ್ಳಾಪುರ: `ವಿವಿಧ ಸಂಘ-ಸಂಸ್ಥೆ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಕೈಗೊಂಡಿರುವ ಹೋರಾಟದ ಪ್ರಮುಖ ಹತ್ತು ಬೇಡಿಕೆಗಳಲ್ಲಿ ಮೊದಲನೇ ಸ್ಥಾನ ಅಂತರ್ಜಲ ಮರುಪೂರಣಕ್ಕೆ ಇದ್ದರೆ, ಕೊನೆಯ ಸ್ಥಾನ ಜಿ.ಎಸ್.ಪರಮಶಿವಯ್ಯ ವರದಿಗೆ ನೀಡಲಾಗಿದೆ. ಅಂತರ್ಜಲದ ಬಗ್ಗೆ ಎಂದಿಗೂ ಪ್ರಸ್ತಾಪ ಮಾಡದವರು ಈಗ ಒಮ್ಮಿಂದೊಮ್ಮೆಲೆ ಅಂತರ್ಜಲದ ಬಗ್ಗೆ ಮಾತನಾಡತೊಡಗಿದ್ದಾರೆ. ಹೀಗಾಗಿ ಪಟ್ಟಿಯಲ್ಲಿ ಪರಮಶಿವಯ್ಯ ವರದಿ ಬೇಡಿಕೆ ಕೊನೆ ಸ್ಥಾನದಲ್ಲಿದೆ~ ಎಂದು ನಿವೃತ್ತ ಶಿಕ್ಷಕ ಜಿ.ಎಸ್.ಲಕ್ಷ್ಮಿನಾರಾಯಣ ಹೇಳುತ್ತಾರೆ.

`ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಧರಣಿ ನಡೆಸಲಾಗುತ್ತಿದೆ. ಧರಣಿಯಲ್ಲಿ ಪಾಲ್ಗೊಳ್ಳಲು ಕೆಲ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಂಘ-ಸಂಸ್ಥೆ ಪ್ರತಿನಿಧಿಗಳು ಮತ್ತು ಅಭಿಮಾನಿಗಳ ಬಳಗದ ಸದಸ್ಯರು ಹೆಚ್ಚಾಗಿ ತಮ್ಮ ಮುಖಂಡರ ಗುಣಗಾನ ಮಾಡುತ್ತಾರೆ.

ಶಾಶ್ವತ ನೀರಾವರಿ ಯೋಜನೆ ಜಾರಿಯಾಗದಿದ್ದರೆ ಪ್ರಾಣವನ್ನು ಅರ್ಪಿಸಬೇಕಾಗುತ್ತದೆ ಎಂದು ಆವೇಶಭರಿತರಾಗಿ ಮಾತನಾಡುತ್ತಾರೆ ಹೊರತು ಯೋಜನೆ ಸಾಧಕ-ಬಾಧಕಗಳ ಬಗ್ಗೆ ಖಚಿತ ಮಾಹಿತಿ ಮತ್ತು ಅಂಕಿ-ಅಂಶವನ್ನು ಯಾರೂ ನೀಡುವುದಿಲ್ಲ~ ಎಂದು ಕಂದವಾರದ ಕೃಷ್ಣಪ್ಪ ಹೇಳುತ್ತಾರೆ.


ವಿರೋಧಿಸಬಾರದು

ಚಿಕ್ಕಬಳ್ಳಾಪುರ: ವಿವಿಧ ಸಂಘ- ಸಂಸ್ಥೆ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಪಕ್ಷಾತೀತವಾಗಿ ನಡೆಯುತ್ತಿದೆಯಾದರೂ ಯಾವುದೇ ಸಚಿವರು, ಶಾಸಕರನ್ನು ಮತ್ತು ಮುಖಂಡರನ್ನು ವಿರೋಧಿಸುವಂತಿಲ್ಲ. ಯಾರನ್ನೂ ಟೀಕಿಸದೆ ಮತ್ತು ಖಂಡಿಸದೆ ಹೋರಾಟ ನಡೆಸುವಂತೆ ಕೆಲ ರಾಜಕೀಯ ಮುಖಂಡರು ಷರತ್ತು ವಿಧಿಸಿದ್ದಾರೆ.

`ಶಾಶ್ವತ ನೀರಾವರಿ ಹೋರಾಟದ ಆರಂಭದ ದಿನಗಳಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ವಿರುದ್ಧ ಕೆಲವರು ಭಾಷಣಗಳನ್ನು ಮಾಡುತ್ತ ಟೀಕಿಸಿದರು. ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರೊಬ್ಬರು ವೀರಪ್ಪ ಮೊಯಿಲಿ ವಿರುದ್ಧ ಯಾವುದೇ ಕಾರಣಕ್ಕೂ ಆಕ್ರೋಶ ವ್ಯಕ್ತಪಡಿಸಬಾರದು. ಅವರನ್ನು ಖಂಡಿಸುವುದಾದರೆ ನಾವು ಹೋರಾಟದಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಮ್ಮ ಪಕ್ಷಗಳ ಮುಖಂಡರ ವಿರುದ್ಧ ಟೀಕೆ ಮಾಡಬಾರದು ಎಂದು ಬಿಜೆಪಿ,  ಜೆಡಿಎಸ್‌ನವರು ಷರತ್ತು ವಿಧಿಸಿದರು. ಹೀಗಾಗಿ ಯಾರನ್ನೂ ನೇರವಾಗಿ ವಿರೋಧ ಮಾಡದೆ ನಾವು ಹೋರಾಟ ಮಾಡುತ್ತಿದ್ದೇವೆ~ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT