ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಾಶ್ವತ ನೀರಾವರಿ' ಎಂಬ ಮೂಗಿನ ಮೇಲೆ ತುಪ್ಪ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಯಲುಸೀಮೆ ಮರುಭೂಮಿಯಾಗಿ ಪರಿವರ್ತನೆ ಹೊಂದುವ ಸಾಧ್ಯತೆಗಳು ಗೋಚರಿಸುತ್ತಿವೆ. ಜನ, ಜಾನುವಾರುಗಳಿಗೆ ಕುಡಿಯಲು ಶುದ್ಧ ನೀರಿನ ತೀವ್ರ ಕೊರತೆ ಕಾಡುತ್ತಿದೆ. ಕಾವೇರಿ, ಕೃಷ್ಣಾ ಕಣಿವೆ ರೈತರಿಗಾಗಿ ಸದಾ ಕಣ್ಣೀರು ಸುರಿಸುವ ರಾಜಕಾರಣಿಗಳಿಗೆ ಇಲ್ಲಿನ ಜನರ ಬವಣೆ ಕಾಣುತ್ತಿಲ್ಲ...

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಒಳಗೊಂಡಂತೆ ಬಯಲುಸೀಮೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಎಂಬುದು ಮರೀಚಿಕೆಯಾಗಿದೆ. ಬಯಲುಸೀಮೆಗೆ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಸಮತೋಲನದ ನ್ಯಾಯ ಒದಗಿಸಿ, ಶಾಶ್ವತ ನೀರಿನ ವ್ಯವಸ್ಥೆ ಮಾಡುವಲ್ಲಿ ನಮ್ಮನ್ನಾಳಿದ ಎಲ್ಲ ಸರ್ಕಾರಗಳೂ ವಿಫಲವಾಗಿವೆ.

ಉತ್ತರ ಕರ್ನಾಟಕದ ಭಾಗಕ್ಕೆ ಕೃಷ್ಣಾ ಮತ್ತು ಇತರ ನದಿ ಪಾತ್ರಗಳಿಂದ ಒಟ್ಟು ಲಭ್ಯವಾಗಿರುವ ನೀರು 765.70 ಟಿಎಂಸಿ ಅಡಿ. ಇದರಿಂದ ಹೈದರಾಬಾದ್-ಕರ್ನಾಟಕದ ಶೇ 48ರಷ್ಟು ಭೂಭಾಗ ಹಾಗೂ ಮುಂಬೈ-ಕರ್ನಾಟಕದ ಶೇ 41ರಷ್ಟು ಭೂಭಾಗ ನೀರಾವರಿಗೆ ಒಳಪಟ್ಟಿದೆ. ಹಳೇ ಮೈಸೂರು ಪ್ರಾಂತ್ಯಕ್ಕೆ ಕಾವೇರಿ ಮತ್ತು ಇತರ ನದಿ ಪಾತ್ರಗಳಿಂದ ಒಟ್ಟು ಲಭ್ಯವಾಗಿರುವ ನೀರು 255.94 ಟಿಎಂಸಿ ಅಡಿ. ಇದರಿಂದ ಹಳೇ ಮೈಸೂರಿನ ಶೇ 22.25ರಷ್ಟು ಭೂಭಾಗ ನೀರಾವರಿಗೆ ಒಳಪಟ್ಟಿದೆ. ಆದರೆ ಬಯಲುಸೀಮೆ ಜಿಲ್ಲೆಗಳಿಗೆ ಸಿಕ್ಕ ನೀರಾವರಿ ಸೌಲಭ್ಯದ ಪ್ರಮಾಣ ದೊಡ್ಡ ಸೊನ್ನೆ. ಇದು ಯಾವ ನ್ಯಾಯ?

ಸರ್ಕಾರವು ಬಯಲುಸೀಮೆ ಪ್ರದೇಶದಲ್ಲಿ ಇರುವ ಬಹುತೇಕ ತಾಲ್ಲೂಕುಗಳನ್ನು `ಅಂರ್ತಜಲ ಅತಿಬಳಕೆ ವಲಯ' ಎಂದು ಘೋಷಿಸಿದೆ. ಈ ಭಾಗದ ಬಹುತೇಕ ಕೆರೆಗಳು, ತೆರೆದ ಬಾವಿಗಳು ಮತ್ತು ಸಾವಿರಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇಲ್ಲಿನ ಜನರು ಕುಡಿಯಲು ಶುದ್ಧ ನೀರಿನ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಫ್ಲೋರೈಡ್ ಅಂಶ ಅಧಿಕವಾಗಿರುವ ನೀರು ಕುಡಿದು ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ಜಲಸಂಪನ್ಮೂಲ ಇಲಾಖೆ, ಬಯಲುಸೀಮೆ ಭಾಗದ ಬೇಡಿಕೆ ಈಡೇರಿಸಬಲ್ಲ ಸಮಗ್ರ ಯೋಜನೆ ಜಾರಿಗೆ ಇನ್ನೂ ಮುಂದಾಗಿಲ್ಲ. ಇದು ಸರ್ಕಾರಗಳ ನಿಷ್ಕಾಳಜಿಗೆ ಹಿಡಿದ ಕನ್ನಡಿ.

ಶಾಶ್ವತ ಯೋಜನೆ ಜಾರಿಗೆ ಅಗತ್ಯವಾದ ತಾಂತ್ರಿಕ ವಿಚಾರಗಳಲ್ಲಿ ರಾಜಕೀಯ ಹಸ್ತಕ್ಷೇಪದಿಂದ ತರಾವರಿ ಯೋಜನಾ ವರದಿಗಳು ಹುಟ್ಟಿಕೊಳ್ಳುತ್ತಿರುವುದು ಈ ಭಾಗದ ಜನರ ದೌರ್ಭಾಗ್ಯವೇ ಸರಿ.

ಜಿ.ಎಸ್.ಪರಮಶಿವಯ್ಯನವರ ವರದಿಯನ್ನು ಸರ್ಕಾರ ಒಪ್ಪಿ 13 ವರ್ಷಗಳಾಗಿದೆ. ಆಳುವ ಪಕ್ಷ ಬದಲಾದ ಬಳಿಕ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಲಾಗಿತ್ತು. ಎತ್ತಿನಹೊಳೆಯಿಂದ ನೀರು ಹರಿಸಿ ಈ ಭಾಗದ ಕೆರೆಗಳನ್ನು ತುಂಬಿಸುವ ಭರವಸೆಯನ್ನು ಸಹ ಸರ್ಕಾರ ಕೊಟ್ಟಿತ್ತು. ಭೌಗೋಳಿಕವಾಗಿ ಅತ್ಯಂತ ಎತ್ತರದ ಈ ಪ್ರದೇಶಕ್ಕೆ ನೀರು ಹರಿಸುವ ವಿಷಯವಾಗಿ ಪರಮಶಿವಯ್ಯನವರ ವರದಿ ಆಧಾರದ ಮೇಲೆ `ಇಸ್ರೊ' ಅಂಗಸಂಸ್ಥೆಯಾದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ (ಎನ್‌ಆರ್‌ಎಸ್‌ಎ) ಅತ್ಯಾಧುನಿಕ ತಂತ್ರಜ್ಞಾನದಿಂದ ಸಮೀಕ್ಷೆ ಮಾಡಿದೆ. ಪಶ್ಚಿಮವಾಹಿನಿ ನದಿಗಳಿಂದ ಬಯಲುಸೀಮೆಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಬಹುದು ಎಂದು ಅದು ದೃಢಪಡಿಸಿದೆ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಮಗ್ರ ಯೋಜನಾ ವರದಿ ತಯಾರಿಕೆ ಆಮೆಗತಿಯಲ್ಲಿ ಸಾಗಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಸಮೀಕ್ಷೆ ಮಾಡಿದ ಎನ್‌ಆರ್‌ಎಸ್‌ಎ ವರದಿ ಮೇಲೆ ಇನ್ನಷ್ಟು ತಾಂತ್ರಿಕ ಅಧ್ಯಯನ ನಡೆಸಬೇಕಾಗಿತ್ತು. ದುರದೃಷ್ಟವಶಾತ್ ಆ ವರದಿಯೇ `ಕಾಣೆ'ಯಾಗಿದೆ.

ಮಲೆನಾಡು, ಕರಾವಳಿ ಪ್ರದೇಶದಲ್ಲಿ ಅತಿಯಾದ ಮಳೆಯಾಗಿ ಬೆಳೆ, ರಸ್ತೆಗಳು ಹಾಳಾಗಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿ ಅವು ಬರಪೀಡಿತವಾಗಿವೆ. ಮಳೆಗಾಲದ ಸ್ಥಿತಿಯೇ ಹೀಗಾದರೆ ಬೇಸಿಗೆ ಬಂದರೆ ಗತಿಯೇನು? ಇದೇ ಸ್ಥಿತಿ ಮುಂದುವರಿದರೆ ಬಯಲುಸೀಮೆ ಮರುಭೂಮಿಯಾಗಿ ಪರಿವರ್ತನೆ ಹೊಂದುವ ಆತಂಕ ವ್ಯಕ್ತವಾಗಿದೆ.

ನಮ್ಮ ರಾಜಕಾರಣಿಗಳಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತವೆ. ಅವರಿಗೆ ಕಾವೇರಿ, ಕೃಷ್ಣಾ ಕಣಿವೆ ರೈತರ ಮೇಲೆ ಅಪಾರವಾದ ವ್ಯಾಮೋಹ. ಕಬ್ಬು, ಭತ್ತ, ಅಡಿಕೆ, ಹತ್ತಿ, ತೆಂಗು, ದಾಳಿಂಬೆ ಬೆಳೆಗಾರರ ಮೇಲೆ ಅದಮ್ಯವಾದ ಪ್ರೀತಿ. ಆದರೆ ಇಡೀ ರಾಜ್ಯಕ್ಕೆ ಹಣ್ಣು, ಹಾಲು, ಮಾವು, ಹೂವು, ರೇಷ್ಮೆ ಜೊತೆಗೆ ದಿನನಿತ್ಯ ತರಕಾರಿ ಬೆಳೆದು ಕಳುಹಿಸುತ್ತಿರುವ ನಮ್ಮ ಮೇಲೇಕೆ ಈ ಅಸಡ್ಡೆ? ಬಯಲುಸೀಮೆ ಭಾಗದ ಶಾಸಕರು, ಪ್ರತಿಷ್ಠೆ ಬಿಟ್ಟು ಕೆರೆಗಳನ್ನು ತುಂಬಿಸಬಲ್ಲ ಸಮಗ್ರ ಯೋಜನೆಗಾಗಿ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹೇರಬೇಕಾಗಿದೆ. 

ರಾಜ್ಯದ ಮಧ್ಯಭಾಗದ 9 ಜಿಲ್ಲೆಗಳ 43 ತಾಲ್ಲೂಕುಗಳ 10,509 ಗ್ರಾಮಗಳಲ್ಲಿ 9000ಕ್ಕೂ ಹೆಚ್ಚು ಕೆರೆಗಳಿವೆ. ಪಶ್ಚಿಮವಾಹಿನಿ ನದಿಗಳಿಂದ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ 2,500 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರಿನ ಪೈಕಿ 120 ಟಿಎಂಸಿ ಅಡಿ ನೀರನ್ನು ಈ ಕೆರೆಗಳಿಗೆ ವರ್ಷದಲ್ಲಿ ಎರಡು ಬಾರಿ ಹರಿಸುವ ಯೋಜನೆ ಪರಮಶಿವಯ್ಯನವರ ಪರಿಕಲ್ಪನೆ. ಈ ಯೋಜನೆ ಅನುಷ್ಠಾನಕ್ಕೆ ತಂದರೆ ಬಯಲುಸೀಮೆ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ. ಸುಮಾರು 2 ಕೋಟಿ ಜನ ಮತ್ತು 1 ಕೋಟಿ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ. ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇಲ್ಲವಾದಲ್ಲಿ ಕೃಷಿಯನ್ನೇ ನಂಬಿರುವ ಈ ಭಾಗದ ಜನರ ಜೀವನ ಅತ್ಯಂತ ದುಸ್ತರವಾಗಲಿದೆ. ಲಕ್ಷಾಂತರ ಎಕರೆ ಕೃಷಿಯೋಗ್ಯವಾದ ಫಲವತ್ತಾದ ಭೂಮಿ ಈಗಾಗಲೇ ಬಂಜರಾಗಿದೆ. ಈ ಭಾಗದ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದ ಹೈನುಗಾರಿಕೆ ಸಹ ಸಂಕಷ್ಟದಲ್ಲಿದ್ದು, ಕೃಷಿಕರ ಕಷ್ಟ ಹೇಳತೀರದಾಗಿದೆ.

ಬಯಲುಸೀಮೆಗೆ ಕುಡಿಯುವ ನೀರಿಗಾಗಿ ಖಾಸಗಿ ಸೇವಾ ಸಂಸ್ಥೆಯಾದ ಇ.ಐ. ಟೆಕ್ನಾಲಜೀಸ್, ಎತ್ತಿನಹೊಳೆ ಯೋಜನೆಯನ್ನು ರೂಪಿಸಿಕೊಟ್ಟಿದ್ದು, ಈ ಯೋಜನೆಯಿಂದ ಲಭ್ಯವಾಗುವ ನೀರು ಕೇವಲ ಏಳೆಂಟು ಟಿಎಂಸಿ ಅಡಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದೇ ಕಾರಣದಿಂದ, ಈ ಯೋಜನೆಯು ಕಾರ್ಯಗತವಾದರೂ ಪರಮಶಿವಯ್ಯನವರ ವರದಿ ಆಧಾರಿತ ಯೋಜನೆಯನ್ನು ಸಹ ಜಾರಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ.

ನೀರಾವರಿ ತಜ್ಞ ಕೆ.ಸಿ.ರೆಡ್ಡಿಯವರು ಸಿದ್ಧಪಡಿಸಿರುವ ಭದ್ರಾ ಮೇಲ್ದಂಡೆಯಿಂದ 3 ಟಿಎಂಸಿ ಅಡಿ ನೀರು ಹರಿಸುವ ಯೋಜನೆ, ಎತ್ತಿನಹೊಳೆಯಿಂದ ಏಳೆಂಟು ಟಿಎಂಸಿ ಅಡಿ ನೀರು ಹರಿಸುವ ಯೋಜನೆ ಸೇರಿದಂತೆ ಇನ್ನೂ ಹಲವು ಯೋಜನೆಗಳು ಸರ್ಕಾರದ ಮುಂದಿದ್ದು, ಇವೆಲ್ಲವುಗಳ ಮೂಲ ಪರಮಶಿವಯ್ಯನವರ ಪರಿಕಲ್ಪನೆಯಾದ ಪಶ್ಚಿಮವಾಹಿನಿ ನದಿಗಳ ತಿರುವಾಗಿದೆ. ಪಶ್ಚಿಮ ವಾಹಿನಿ ನದಿಗಳಿಂದ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಬಳಸಿಕೊಂಡರೆ ತಪ್ಪೇನು?

ರಾಜ್ಯದ ಎಲ್ಲ ನದಿಗಳ ನೀರಿನ ಹಂಚಿಕೆಯಲ್ಲಿ ವ್ಯಾಜ್ಯಗಳಿದ್ದು, ಯಾವುದೇ ತಂಟೆ ತಕರಾರಿಲ್ಲದ ನಮ್ಮದೇ ಆದ ಪಶ್ಚಿಮವಾಹಿನಿ ನದಿಗಳ ನೀರನ್ನು ಶೇಖರಣೆ ಮಾಡಿ ಬಯಲುಸೀಮೆಗೆ ಹರಿಸುವುದು ತಾಂತ್ರಿಕ ಸವಾಲಾಗಿದೆ. ಈ ತಾಂತ್ರಿಕ ಸವಾಲಿನ ಬಗ್ಗೆ ತಜ್ಞ ಎಂಜಿನಿಯರುಗಳಿಂದ ಮತ್ತು ಪರಿಣತರಿಂದ ಸಮಗ್ರ ಅಧ್ಯಯನ ಮಾಡಿಸದೇ, ಬರೀ ಜನಪ್ರಿಯ ತಾತ್ಕಾಲಿಕ ಯೋಜನೆಗಳ ಬಗ್ಗೆ ಒಲವು ತೋರಿಸುತ್ತಿರುವುದು ಬಯಲುಸೀಮೆ ಜನರಿಗೆ ಬಗೆದ ಅನ್ಯಾಯವಾಗಿದೆ.

ಬಯಲುಸೀಮೆ ಜನರನ್ನು ಸಂಕಷ್ಟಗಳಿಂದ ಪಾರು ಮಾಡಲು ಸರ್ಕಾರ ಈಗಲಾದರೂ ದೃಢ ನಿರ್ಧಾರ ಕೈಗೊಳ್ಳಬೇಕು. ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ನುರಿತ ಎಂಜಿನಿಯರುಗಳಿಗೆ ಯೋಜನೆಯನ್ನು ಕಾಲಮಿತಿಯೊಳಗೆ ಪೂರೈಸುವ ಸ್ಪಷ್ಟ ಆದೇಶ ಮತ್ತು ಅದಕ್ಕೆ ಬೇಕಾದ ರಾಜಕೀಯರಹಿತ ಸಹಕಾರ ಕೊಡಬೇಕಾಗಿದೆ. ನಾಲ್ಕಾರು ಯೋಜನೆಗಳ ಬದಲು ಬೆಂಗಳೂರು ಸೇರಿದಂತೆ ಬಯಲುಸೀಮೆ ಬೇಡಿಕೆಯನ್ನು ಪೂರೈಸಬಲ್ಲ ಸಮಗ್ರ ಯೋಜನೆ ರೂಪಿಸಬೇಕು. 13 ವರ್ಷಗಳಿಂದ ನಡೆದಿರುವ, `ಶಾಶ್ವತ ನೀರಾವರಿ ಯೋಜನೆಗೆ ಬದ್ಧ' ಎಂಬ ಸುದೀರ್ಘ ನಾಟಕಕ್ಕೆ ತೆರೆ ಎಳೆಯಬೇಕಾಗಿದೆ. ಅಂತಹ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT