ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಸೌಲಭ್ಯಕ್ಕೆ ಪಕ್ಷಾತೀತ ಹೋರಾಟ

Last Updated 4 ಮೇ 2012, 4:20 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಪಕ್ಷಾತೀತ ಹೋರಾಟ ಕೈಗೊಳ್ಳಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನಿರ್ಣಯ ಕೈಗೊಂಡರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಸ್ಥಾಪನೆ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಪ್ರೊ. ಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, ಮೂರು ರಾಜಕೀಯ ಪಕ್ಷಗಳ ಮುಖಂಡರು ಒಮ್ಮತದ ತೀರ್ಮಾನಕ್ಕೆಬಂದರು.

ಶಾಸಕ ಕೆ.ರಾಜು, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಸ್ಥಳೀಯ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರಮುಖ ನಿರ್ಣಯಗಳು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮಸಭೆ, ಮಕ್ಕಳ ಸಭೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಗಾಗಿ ನಿರ್ಣಯ ಕೈಗೊಳ್ಳುವಂತೆ ಚುನಾಯಿತ ಪ್ರತಿನಿಧಿಗಳಲ್ಲಿ ಅರಿವು ಮೂಡಿಸುವುದು. ಜಿಲ್ಲೆಯಾದ್ಯಂತ ಅಧ್ಯಯನ ಸಭೆಗಳನ್ನು ಆಯೋಜಿಸಿ ಜನತೆಯಲ್ಲಿ ಜಾಗೃತಿ ಮೂಡಿಸುವುದು.

ಜಿಲ್ಲೆಯ ಎಲ್ಲಾ ಕೆರೆ, ಕಟ್ಟೆ, ಜಲಾಶಯಗಳನ್ನು ತುಂಬಿಸುವ ಹಾಗೂ ಅಂತರ್ಜಲ ವೃದ್ಧಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರವನ್ನು ಒತ್ತಾಯಿಸುವುದು. ನೀರಾವರಿ ತಜ್ಞ ಡಾ.ಪರಮಶಿವಯ್ಯ ವರದಿ, ಎತ್ತಿನಹೊಳೆ, ಹೇಮಾವತಿ, ಭದ್ರಾ, ಯಗಚಿ, ಕಾವೇರಿ ಯೋಜನೆಗಳಿಂದಲೂ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾಕ್ಕೆ ಅಗತ್ಯ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ನಿರ್ಣಯಿಸಲಾಯಿತು.

ಶಾಸಕ ಕೆ.ರಾಜು ಮಾತನಾಡಿ, ನೀರಿನ ಸಮಸ್ಯೆಯಿಂದಾಗಿ ರೈತರು ವ್ಯವಸಾಯ ಚಟುವಟಿಕೆಗಳನ್ನು ತೊರೆದು ನಗರಗಳನ್ನು ಸೇರುತ್ತಿದ್ದಾರೆ. 800 ಅಡಿ ಆಳ ಕೊರೆದರು ನೀರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುದುವರೆದರೆ ಕುಡಿಯುವ ನೀರಿಗೂ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲ್ಲೂಕ ಪಂಚಾಯತಿ ಸದಸ್ಯ ಪ್ರಾಣೇಶ್, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ದಯನೀಯ ಪರಿಸ್ಥಿತಿ ಬಂದೊದಗಿದೆ. 20 ವರ್ಷಗಳ ಹಿಂದೆ ವ್ಯವಸಾಯ ಉದ್ದೇಶಕ್ಕಾಗಿ ನೀರಿಗಾಗಿ ಹೋರಾಟಗಳು ನಡೆದಿದ್ದವು. ಇಂದು ಕುಡಿಯುವ ನೀರಿಗಾಗಿ ಹೋರಾಟ ನಡೆಯುತ್ತಿದೆ. ವೈಜ್ಞಾನಿಕ ಚಿಂತನೆಗಳ ಮೂಲಕ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಲಿ ಎಂದರು.

ಸಾಫ್ಟ್‌ವೇರ್ ತಜ್ಞ ಕರಣ್ ಕುಮಾರ್ ಮಾತನಾಡಿ, ನಗರವಾಸಿಗಳು ತಮ್ಮ ಜೀವನ ಪದ್ಧತಿ ಬದಲಿಸಿಕೊಳ್ಳಬೇಕು. ನಿಸರ್ಗದ ಕೊಡುಗೆಯನ್ನು ಮಿತವಾಗಿ ಬಳಸಿಕೊಳ್ಳಬೇಕು. ಭಾರತದ ಜನಸಂಖ್ಯೆಯ ಪೈಕಿ ಶೇ 12ರಷ್ಟು ಜನತೆ ಮಾಸಿಕ 15 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಆದರೆ ಈ ವರ್ಗದ ನಾಗರಿಕರು ಗ್ರಾಮೀಣ ಬುದುಕಿಗೆ ಆಧಾರವಾಗಬೇಕು. ಶಿಕ್ಷಣ ಕ್ರಾಂತಿಯ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಎ.ಮಂಜು ಮಾತನಾಡಿ, ಹೋರಾಟಗಳು ಯಶಸ್ಸು ಕಾಣಲು ಸಮಾನ ಮನಸ್ಕರಲ್ಲಿ ಒಗ್ಗಟ್ಟಿನ ಅಗತ್ಯವಿದೆ. ಸೈದ್ಧಾಂತಿಕ ಹೋರಾಟಕ್ಕೆ ತಮ್ಮ ಬೆಂಬಲ ಇದೆ. ಆದರೆ ಇದು ಪಕ್ಷಾತೀತ ವಾಗಿರಬೇಕು. ಎತ್ತಿನ ಹೊಳೆ ಯೋಜನೆ ಮೂಲಕ ಜಿಲ್ಲೆಯ ಯಾವ್ಯಾವ ಕೆರೆಗೆ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿಯೇ ಇಲ್ಲ. ಬೈರಮಂಗಲ ಸುತ್ತಮುತ್ತು ಬೆಂಗಳೂರು ತ್ಯಾಜ್ಯದಿಂದಾಗಿ ಆಗುತ್ತಿರುವ ಅನಾಹುತಗಳನ್ನು ತಡೆಯಲು ಈ ನೀರು ಶುದ್ದೀಕರಣ ಘಟಕ ಶಾಶ್ವತ ನೀರಿಗಾಗಿ ನಡೆಯುವ ಹೋರಾಟದಲ್ಲಿ ಒಂದು ಅಂಶವಾಗಲಿ. ವೃಷಭಾವತಿ ನದಿಯನ್ನು ಶುದ್ಧೀಕರಿಸುವ ಎಲ್ಲಾ ಯೋಜನೆಗಳು ವಿಫಲವಾಗಿವೆ. ಬೆಂಗಳೂರಿನಿಂದ ಬರುವ ತ್ಯಾಜ್ಯಗಳು ರೈತರ ಭೂಮಿಯಲ್ಲಿ ಬರುತ್ತಿವೆ. ಇದರಿಂದ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಅಲ್ಲದೆ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ನೀರನ್ನು ಬಳಸುವ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಒಂದು ದಿನದ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿದ್ದ ಪ್ರೊ.ಮಲ್ಲಯ್ಯ ಮಾತನಾಡಿ, ಮಾನವನು ಪ್ರಕೃತಿಯ ಮೇಲೆ ಮಾಡುತ್ತಿರುವ ಅತ್ಯಾಚಾರದಿಂದ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೊದಲು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕು. ನಂತರ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಎಲ್ಲರೂ ಪಕ್ಷಾತೀತವಾಗಿ ಶ್ರಮಿಸಬೇಕು. ಪರಮಶಿವಯ್ಯನವರ ವರದಿಯನ್ನು ಜಾರಿಗೆ ತರಬೇಕು ಎಂದರು.

ಈ ದಿಸೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿಕೊಂಡು ಜಿಲ್ಲೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ಮೇ 5ರಂದು ಕನಕಪುರದಲ್ಲಿ, ಮೇ 7 ರಂದು ಮಾಗಡಿಯಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಮುಖಂಡರಾದ ದೊಡ್ಡವೀರಯ್ಯ, ಪಿ.ನಾಗರಾಜು, ಮರಿದೇವರು, ಚಿಕ್ಕಬೈರೇಗೌಡ, ಬಿ.ಜೆ.ಹೊನ್ನಶೆಟ್ಟಿ, ಬಿ.ಶ್ರೀಧರ್, ಜಿ.ಶಿವಣ್ಣ, ಎ.ಸಿ.ರಾಜಶೇಖರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT