ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ

Last Updated 6 ಜನವರಿ 2012, 8:55 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಒದಗಿಸುವಲ್ಲಿ ನೀರಾವರಿ ತಜ್ಞ ಡಾ. ಪರಮಶಿವಯ್ಯ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈಚೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ನಿವೃತ್ತ ಪ್ರಾಂಶುಪಾಲ ಮುನಿವೆಂಕಟರೆಡ್ಡಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರನ್ನು ಪಡೆಯುವುದು ಇಲ್ಲಿನ ಜನರ ಬಹು ದಿನಗಳ ಬೇಡಿಕೆ. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಡಾ. ಪರಮಶಿವಯ್ಯ ಅವರ ಮುಖ್ಯ ವರದಿಗೆ ಬದಲಾಗಿ ಎತ್ತಿನ ಹೊಳೆಯಿಂದ ಕುಡಿಯುವ ನೀರನ್ನು ಪೂರೈಸುವ ಯೋಜನೆ ಪ್ರಸ್ತಾವನೆಯನ್ನು ಅಧಿವೇಶನದಲ್ಲಿ ಪ್ರಕಟಿಸಲಾಗಿದೆ ಎಂದರು.

ಬರ ಪಿಡೀತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಒದಗಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಬಯಲು ಸೀಮೆ ಜಿಲ್ಲೆಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ನೀಡಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.  

ಇದು ತಡವಾದ ಪಕ್ಷದಲ್ಲಿ ನೀರಾವರಿ ಹೋರಾಟ ಸಮಿತಿಯಿಂದ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು. ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಕೊಟ್ರಗುಳಿ ವೆಂಕಟರಾಮರೆಡ್ಡಿ, ಬಿ.ಜಿ. ಸೈಯದ್ ಖಾದರ್, ಹಳೇಪೇಟೆ ಲಕ್ಷ್ಮಣರೆಡ್ಡಿ, ಮಂಜಲನಗರ ನಾರಾಯಣಸ್ವಾಮಿ, ಕರವೇ ಚಂದ್ರು, ರೈತ ಸಂಘದ ಜಿಲ್ಲಾ ಮುಖಂಡರಾದ ಬೈಚೇಗೌಡ, ತೆರ‌್ನಹಳ್ಳಿ ವೆಂಕಟೇಶಗೌಡ, ಗಾಂಡ್ಲಹಳ್ಳಿ ಸಿ. ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಮುತ್ತಕಪಲ್ಲಿ ಶ್ರೀನಿವಾಸ್, ಬೂರಗನಹಳ್ಳಿ ಚಲಪತಿ, ಗೌಡಹಳ್ಳಿ ಅಶ್ವತ್ಥ ಹಾಗೂ  ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ
ಮಾಲೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆ ಕಲ್ಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ವಿಫಲವಾಗಿದ್ದು, ತಾಲ್ಲೂಕಿನ ಪ್ರತಿ ಮನೆಯಿಂದ ಮಹಿಳೆಯರು ಖಾಲಿ ಕೊಡ ಹೊತ್ತು ತಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕೆಂದು ಹಿರಿಯ  ಭುವನಹಳ್ಳಿ ಚನ್ನಪ್ಪ ಆಗ್ರಹಿಸಿದರು.

ಅವಿಭಾಜ್ಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ  ಅನುಷ್ಠಾನದ ರೂಪರೇಷೆಗಳ ಬಗ್ಗೆ ಚರ್ಚಿಸಲು ಪಟ್ಟಣದ ಕೃಷಿಕ ಸಮಾಜ ಸಭಾಂಗಣದಲ್ಲಿ ಈಚೆಗೆ ಕರವೇ ರಾಜ್ಯ ಕಾರ್ಯದರ್ಶಿ ಎಸ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸುಮಾರು 30 ವರ್ಷಗಳಿಂದ ಜಿಲ್ಲೆಯಲ್ಲಿ ಜನ ಪ್ರತಿನಿಧಿಗಳಾಗಿ ಆಯ್ಕೆಯಾದ ಯಾವುದೇ ಪಕ್ಷದ ಸದಸ್ಯರು ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.  ಪ್ರಸ್ತುತ  ತಾಲ್ಲೂಕಿನಲ್ಲಿ 1200 ಅಡಿ ಕೊಳವೆ ಬಾವಿ ಕೊರೆದರೂ ನೀರು ದೊರಕುತ್ತಿಲ್ಲ. ದೊರಕಿದರೂ ಫ್ಲೋರೈಡ್ ಅಂಶದಿಂದ ಕೂಡಿದ್ದು, ಅಂಗವೈಕಲ್ಯ ಉಂಟಾಗುತ್ತಿದೆ.

ಇಲ್ಲಿನ ರೈತರು ಯಾವುದೇ ರೀತಿಯ ನೀರಿನ ಮೂಲಗಳಿಲ್ಲದೆ ವ್ಯವಸಾಯ ತೊರೆದು ಉಪ ಕಸಬುಗಳನ್ನು ಅವಲಂಬಿಸುತ್ತಿದ್ದಾರೆ. ಉದ್ಯಮಿಗಳು ನೀರಿನ ಕೊರತೆಯಿಂದ ಹೊಸ ಕೈಗಾರಿಕೆ ಪ್ರಾರಂಭಿಸಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಜನತೆ ಎಚ್ಚೆತ್ತುಕೊಂಡು ಸರ್ಕಾರದ ಗಮನ ಸೆಳೆಯಲು ಹೋರಾಟ ಹಮ್ಮಿಕೊಂಡಾಗ ಮಾತ್ರ ಶಾಶ್ವತ ನೀರಾವರಿ ಜಿಲ್ಲೆಗೆ ಸಿಗುವಂತಾಗುತ್ತದೆ ಎಂದರು.

ಕರವೇ ರಾಜ್ಯ  ಕಾರ್ಯದರ್ಶಿ ಎಸ್.ಪ್ರಕಾಶ್ ನೇತೃತ್ವದಲ್ಲಿ ಸಾಂಕೇತಿಕವಾಗಿ ತಹಶೀಲ್ದಾರ್ ಅಮರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶಾಶ್ವತ ನೀರಾವರಿ ಹೋರಾಟಗಾರ  ತ್ಯಾವನಹಳ್ಳಿ ಗೋಪಾಲಗೌಡ, ಸಾಹಿತಿ ವೇಣುಗೋಪಾಲ ವಹ್ನಿ, ಮಾ.ವೆಂ.ತಮ್ಮಯ್ಯ, ಕರವೇ ಕಾರ್ಯಾಧ್ಯಕ್ಷ ಬಡಗಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜು, ಸಂಚಾಲಕ ಎ.ಅಶ್ವಥರೆಡ್ಡಿ, ಚಾಕನಹಳ್ಳಿ ನಾಗರಾಜ್, ಉಪಾಧ್ಯಕ್ಷ ಮಂಜುನಾಥ ಗೌಡ, ಮುಖಂಡರಾದ ಮಲ್ಲಿಕಾರ್ಜುನಯ್ಯ, ಮುರಳೀಧರ್, ಮಹಿಳಾ ಘಟಕದ ಅನಂತ ಲಕ್ಷ್ಮೀ, ಮೈಲಾಂಡಹಳ್ಳಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT