ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿಗೆ ಸಿಎಂ ವಿರೋಧ-ಆಕ್ರೋಶ

*ಮನೆಯಲ್ಲೇ ಬೆಚ್ಚಗೆ ಮಲಗಿದರು *ಅಧಿಕಾರಕ್ಕಾಗಿ ಕಾವೇರಿ ನೀರು ಬಿಟ್ಟರು *ಮುಜುಗರ ತಂದ ಸಿಎಂ ಹೇಳಿಕೆ
Last Updated 20 ಡಿಸೆಂಬರ್ 2012, 9:08 IST
ಅಕ್ಷರ ಗಾತ್ರ

ಕೋಲಾರ: ಶಾಶ್ವತ ನೀರಾವರಿಯಿಂದ ಬಯಲು ಸೀಮೆಗೆ ಯಾವುದೇ ಉಪಯೋಗವಿಲ್ಲ. ಇದರಿಂದ ಪರಿಸರ ನಾಶವಾಗಲಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ರಾಜ್ಯದ `ಮುಖ್ಯಮಂತ್ರಿ' ಬುಧವಾರ ದೃಢವಾಗಿ ಹೇಳಿದರು.

ಇದರಿಂದ ಕೆಂಡಾಮಂಡಲವಾದ `ವಿರೋಧ ಪಕ್ಷ'ದ ಸದಸ್ಯರು ಅಧಿವೇಶನ ಬಹಿಷ್ಕರಿಸಲು ಸಜ್ಜಾದರು. ನಂತರ ಮುಖ್ಯಮಂತ್ರಿ ಹೇಳಿಕೆಯಿಂದ ಅದಾಗಲೇ ಮುಜಗರಕ್ಕೊಳಗಾಗಿದ್ದ ಆಡಳಿತ ಪಕ್ಷದ ಸದಸ್ಯರು, ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಬರಬೇಕು. ತಾಂತ್ರಿಕವಾಗಿ ಕೆಲ ದೋಷ ಸರಿಪಡಿಸಿಕೊಳ್ಳಬೇಕು. ಅಲ್ಲಿವರೆಗೆ ಯೋಜನೆ ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಹೀಗೆ ನೀರಾವರಿ ಯೋಜನೆ ಕುರಿತು ಗಂಭೀರ ಚರ್ಚೆ ನಡೆದದ್ದು ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ. ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ (ಅಣಕು ಪ್ರದರ್ಶನ)ಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಪ್ರೌಢಶಾಲೆ ತರಗತಿ ವಿದ್ಯಾರ್ಥಿಗಳು ರಾಜ್ಯ, ಜಿಲ್ಲೆಯ ಪ್ರಸ್ತುತ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಿದರು.

ಶಾಶ್ವತ ನೀರಾವರಿಗೆ ವಿರೋಧ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸದನದ ಆಕ್ರೋಶಕ್ಕೆ ಬಲಿಯಾದರು. ವಿರೋಧ ಪಕ್ಷದ ಸದಸ್ಯರು ಮಾತನಾಡಿ, ಪರಮಶಿವಯ್ಯ ಯೋಜನೆ ಬಗ್ಗೆ ಎಲ್ಲ ರೀತಿಯಲ್ಲಿ ಅಧ್ಯಯನ ಮಾಡಿಯೇ ಮಂಡಿಸಿದ್ದಾರೆ.

ಈಗ ಸರ್ಕಾರ ವಿರೋಧಿಸುವುದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ನೀರಾವರಿ ಸಚಿವರು ಯೋಜನೆಗೆ ನಮ್ಮದು ಏನು ತಕರಾರು ಇಲ್ಲ ? ಹಣ ದೊರೆತರೆ ಮುಂಬರುವ ದಿನಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ನಂತರ ಬಡವರಿಗೆ ಮನೆ ವಿತರಣೆ, ಕಂಪ್ಯೂಟರ್ ಶಿಕ್ಷಣ, ಕನ್ನಡ ಶಾಲೆ, ಮೊಬೈಲ್ ಟವರ್ ದುಷ್ಪರಿಣಾಮ, ಬಸ್ ದರ ಏರಿಕೆ ಹೀಗೆ ಮೊದಲಾದ ವಿಷಯಗಳು ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಯಾದವು.

ಕನ್ನಡ ಶಾಲೆಗಳಿಗೆ ನೀಡಿರುವ ಕಂಪ್ಯೂಟರ್ ಹಾಳಾಗುತ್ತಿವೆ. ಒಂದೆಡೆ ಬಾರದ ವಿದ್ಯುತ್, ಇನ್ನೊಂದೆಡೆ ಬಳಕೆ ಮಾಡದಿರುವುದರಿಂದ ಮೂಲೆಗೆ ಎಸೆಯಬೇಕಾಗುತ್ತದೆ. ಇದರ ಬಗ್ಗೆ ಶಿಕ್ಷಣ ಸಚಿವರು ಏನು ಕ್ರಮ ಕೈಗೊಂಡಿದ್ದಿರಾ? ಎಂದು ಕೇಳಿದ ವಿರೋಧ ಪಕ್ಷದ ಸದಸ್ಯರಿಗೆ ಸಮರ್ಥ ಉತ್ತರ ನೀಡುವಲ್ಲಿ ಶಿಕ್ಷಣ ಸಚಿವರು ವಿಫಲವಾದರು.

ಇದರ ಜತೆಯಲ್ಲಿ ಶಿಕ್ಷಣ ಸಚಿವರಿಗೆ ಬಾಣದಂತೆ ಪ್ರಶ್ನೆಗಳು ತೇಲಿ ಬಂದವು. ಉತ್ತರ ನೀಡುವಷ್ಟರಲ್ಲಿ ಸಚಿವರು ಸುಸ್ತಾದರು. ಸದಸ್ಯರನ್ನು ಸಮಾಧಾನ ಮಾಡುವಷ್ಟರಲ್ಲಿ ಸಭಾಧ್ಯಕ್ಷರು ಹೈರಾಣಾದರು.

ಆರೋಗ್ಯ ಸಚಿವರು, ಸಾರಿಗೆ ಸಚಿವರು ಇಲಾಖೆಯಲ್ಲಿನ ಅವ್ಯವಸ್ಥೆ ಸರಿಪಡಿಸುತ್ತಿಲ್ಲ ಎಂದು ಟೀಕೆಗೆ ಒಳಗಾದರು. ಮನೆ ವಿತರಣೆ ಅನರ್ಹರಿಗೆ ಆಗುತ್ತಿದೆ. ವಸತಿ ಸಚಿವರು ಏನು ಮಾಡುತ್ತಿದ್ದೀರಿ ? ಚಳಿಯಲ್ಲಿ ಜನ ನಡುಗುತ್ತಿದ್ದಾರೆ. ನೀವು ಮಾತ್ರ ಬೆಚ್ಚಗೆ ಮನೆಯಲ್ಲಿ ಮಲಗಿ ಎಂದು ಹೇಳಿ ಸಭೆಯಲ್ಲಿ ನಗೆ ಉಕ್ಕಿಸಿದರು.

ಲೋಪ: ಕಳೆದ ವರ್ಷ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಷ್ಟು ಈ ಸಲ ಆಕರ್ಷಣೀಯವಾಗಿರಲಿಲ್ಲ. ಇದಕ್ಕೆ ಕಾರಣ ಪೂರ್ವ ನಿಗದಿತ ಪ್ರಶ್ನೆ ಕೇಳದಿರುವುದು. ಸಮವಸ್ತ್ರ ಧರಿಸದೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಸದನದ ನಿಲುವುಗಳನ್ನು ವಿದ್ಯಾರ್ಥಿಗಳು ಪದೇ ಪದೇ ಮುರಿದರು. ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಇನ್ನಷ್ಟು ಸ್ಪರ್ಧೆ ಕುರಿತು ಅರಿವು ನೀಡುವ ಅಗತ್ಯವಿತ್ತು ಎಂಬ ಮಾತುಗಳು ಕೇಳಿಬಂದವು.

ಶಾಸನ ರಚನಾ ಇಲಾಖೆ ಉಪಕಾರ್ಯದರ್ಶಿ ಶ್ರೀಧರ್, ಶಿಕ್ಷಣ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ, ಡಿಡಿಪಿಐ ಪದ್ಮನಾಭ, ವಿಷಯ ಪರೀವಿಕ್ಷಕ ಅಶೋಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT