ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಮಾನ್ಯತೆಗಾಗಿ ಅಣಕು ಶಂಕುಸ್ಥಾಪನೆ

ಶಿವಮೊಗ್ಗ: ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಪ್ರತಿಭಟನೆ
Last Updated 14 ಸೆಪ್ಟೆಂಬರ್ 2013, 5:56 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಲೇಜಿಗೆ ಶಾಶ್ವತ ಮಾನ್ಯತೆ ಕಲ್ಪಿಸಿಕೊಡುವುದು ಸೇರಿದಂತೆ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆ ನೀಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಶುಕ್ರವಾರ 10ನೇ ದಿನ ಪೂರೈಸಿದೆ.

ಕಾಲೇಜಿನಲ್ಲಿ ಬೋಧನಾ ಚಿಕಿತ್ಸಾ ಸಂಕೀರ್ಣ ಇಲ್ಲದಿರುವುದರಿಂದ ಭಾರತೀಯ ಪಶುವೈದ್ಯಕೀಯ ಪರಿಷತ್ ಮಾನ್ಯತೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಬೋಧನಾ ಚಿಕಿತ್ಸಾ ಸಂಕೀರ್ಣಕ್ಕೆ ಅಣುಕು ಶಂಕುಸ್ಥಾಪನೆ ನೆರವೇರಿಸಿದರು. ತಾವೇ ಗುದ್ದಲಿ ಪೂಜೆ ಸಲ್ಲಿಸಿ, ಸಾಂಕೇತಿಕವಾಗಿ ಕಾಮಗಾರಿ ಆರಂಭಿಸಿದರು.

ಸತತ ಪ್ರತಿಭಟನೆ ನಡೆಸಿದರೂ ವಿಶ್ವವಿದ್ಯಾಯಲಯ ಇದುವರೆಗೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರವೂ ನಿರ್ದಿಷ್ಟವಾಗಿ ಹೇಳಿಕೆ ನೀಡಿಲ್ಲ.ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಮಾನ್ಯತೆ ಹಾಗೂ ನೋಂದಣಿ ಸಂಖ್ಯೆ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಹೇಳಿದರು.

ಭಾರತೀಯ ಪಶುವೈದ್ಯಕೀಯ ಪರಿಷತ್ತು ಕಾಲೇಜಿಗೆ ಇದುವರೆಗೂ ಐದು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕುಂದುಕೊರತೆಗಳ ಪಟ್ಟಿ ಮಾಡಿದೆ. ಆದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾಲೇಜು ಬೀದರ್ ಪಶುವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟಿದ್ದು, ವಿ.ವಿ. ಕುಲಪತಿಗಳು ಒಂದು ದಿನವೂ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.


 ಈ ವರ್ಷದ ಮಾರ್ಚ್ ನಲ್ಲಿ ಕಾಲೇಜಿಗೆ ಮಾನ್ಯತೆ ಸಿಗಲಿದೆ ಎನ್ನುವ ಸುದ್ದಿ ಇತ್ತು. ಭಾರತೀಯ ಪಶುವೈದ್ಯಕೀಯ ಪರಿಷತ್ತು ಪಟ್ಟಿ ಮಾಡಿದ ಕಾಲೇಜಿನಲ್ಲಿ ಬೋಧಕರ, ಬೋಧಕೇತರ ಸಿಬ್ಬಂದಿಗಳ ಕೊರತೆ, ಕಟ್ಟಡ, ಬೋಧನಾ ಚಿಕಿತ್ಸಾ ಸಂಕೀರ್ಣ ಮತ್ತಿತರ ಕುಂದುಕೊರತೆಗಳಲ್ಲಿ ಒಂದನ್ನೂ ಇದುವರೆಗೂ ಪೂರೈಸಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ವಿದ್ಯಾಭ್ಯಾಸ ಮುಗಿಸಿದ ಹಿರಿಯ ವಿದ್ಯಾರ್ಥಿಗಳು ತಾವು ಪಡೆದ ಪದವಿಗೆ ಮಾನ್ಯತೆ ಇಲ್ಲದೆ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಪಶು ವೈದ್ಯಕೀಯ ಮಹಾವಿದ್ಯಾಲಯದ ಮಾನ್ಯತೆಗೆ ಅಗತ್ಯವಿರುವ ಸೌಲಭ್ಯ  ಕಲ್ಪಿಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನ ನೋಂದಣಿ ಸಂಖ್ಯೆ ನೀಡಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT