ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರೋಷನ್ ಬೇಗ್‌ಗೆ ನಿವೇಶನ:ಹಿಂಪಡೆಯಲು ಬಿಬಿಎಂಪಿಗೆ ಆದೇಶ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತಿಮ್ಮಯ್ಯ ರಸ್ತೆಯಲ್ಲಿ ಶಾಸಕ ರೋಷನ್ ಬೇಗ್ ಅವರ ಒಡೆತನದ ಕಂಪೆನಿಯ ವಶದಲ್ಲಿ ಇರುವ 10ಸಾವಿರ ಚದರ ಅಡಿ ನಿವೇಶನವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಬೇಗ್ ಅವರ ಒಡೆತನದ `ಡ್ಯಾನಿಷ್ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್~ಗೆ ಈ ನಿವೇಶನವನ್ನು 2007ರ ಫೆಬ್ರುವರಿ ತಿಂಗಳಿನಲ್ಲಿ ಅತಿ ಕಡಿವೆು ಬೆಲೆಗೆ ಮಾರಾಟ ಮಾಡಲಾದ ಕ್ರಮವನ್ನು ಪ್ರಶ್ನಿಸಿ ವಕೀಲ ಎ.ವಿ.ಅಮರನಾಥನ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.


`ಇದು ಬಿಬಿಎಂಪಿ ಜಾಗ. ಆದರೆ ಈ ಜಾಗವನ್ನು ಸರ್ಕಾರವು ಬೇಗ್ ಅವರಿಗೆ ನೀಡುವಂತೆ ಶಿಫಾರಸು ಮಾಡಿತ್ತು . ಈ ರೀತಿ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಇದೊಂದೇ ಕಾರಣದಿಂದ ಅರ್ಜಿಯನ್ನು ನಾವು ಮಾನ್ಯ ಮಾಡುತ್ತಿದ್ದೇವೆ~ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಈ ನಿವೇಶನವನ್ನು ಬೇಗ್ ಅವರಿಗೆ ನೀಡುವ ಸಂಬಂಧ ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಪ್ರಕ್ರಿಯೆ ನಡೆದಿತ್ತು. ಕೊನೆಯದಾಗಿ ಎಚ್. ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾದ ನಂತರ ಅವರು ಜಮೀನು ಪರಭಾರೆ ಮಾಡಲು ಪಾಲಿಕೆಗೆ ಸೂಚಿಸಿದ್ದರು.

ಅರ್ಜಿದಾರರ ದೂರು:  `ಹತ್ತು ಕೋಟಿಗಿಂತಲೂ ಹೆಚ್ಚಿನ ಬೆಲೆಬಾಳುವ ಆಸ್ತಿಯನ್ನು ಕೇವಲ ರೂ 1.68 ಕೋಟಿ ಗೆ ಮಾರಾಟ ಮಾಡಲಾಗಿದೆ. `ಉರ್ದು ಕಮ್ಯುನಿಟಿ ಹಾಲ್~ ನಿರ್ಮಾಣಕ್ಕೆ ಈ ನಿವೇಶನ ತಮಗೆ ನೀಡುವಂತೆ ಪಾಲಿಕೆಗೆ 2006ರ ಡಿಸೆಂಬರ್ ತಿಂಗಳಿನಲ್ಲಿ ಕೋರಿಕೊಂಡಾಗ, `ಇದು ಪಾಲಿಕೆಯ ಜಾಗ. ಖಾಸಗಿ ವ್ಯಕ್ತಿಗಳಿಗೆ ನೀಡುವುದಿಲ್ಲ~ ಎಂದು ತಿಳಿಸಿದ್ದ ಪಾಲಿಕೆ ಅದನ್ನು ಬೇಗ್ ಅವರಿಗೆ ನೀಡಿದೆ~ ಎನ್ನುವುದು ಅರ್ಜಿದಾರರ ದೂರಾಗಿತ್ತು.

ಪಾಲಿಕೆಗೆ ಸೇರಿದ ಜಾಗವನ್ನು ಹರಾಜು ಮಾಡದೇ ಯಾರಿಗೂ ಕೊಡಬಾರದು ಎಂಬುದು 2003ರ ಜೂನ್ 2ರಂದು ಪಾಲಿಕೆಯೇ ಅಧಿಸೂಚನೆ ಹೊರಡಿಸಿದೆ. ಆದರೆ ತೀರಾ ಕಡಿಮೆ ಮೊತ್ತದಲ್ಲಿ ಶಾಸಕರಿಗೆ ನಿವೇಶನ ಮಾರಾಟ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಇದನ್ನು ಪೀಠ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT