ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸಂಗಮೇಶ್ವರ ವಿರುದ್ಧ ಪ್ರಕರಣ ದಾಖಲು

Last Updated 20 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಭದ್ರಾವತಿ: ಗ್ರಾಮಾಂತರ ಪೊಲೀಸ್  ವೃತ್ತ ನಿರೀಕ್ಷಕರ ಜತೆ ಅನುಚಿತ  ವರ್ತನೆ ನಡೆಸಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದ  ಮೇಲೆ ಶಾಸಕ ಬಿ.ಕೆ. ಸಂಗಮೇಶ್ವರ  ವಿರುದ್ಧ ಹಳೇನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಗ್ರಾಮಾಂತರ ಪೊಲೀಸರು ಮಂಗಳವಾರ ಸಂಜೆ ಹಲವು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ತಂದಿದ್ದರು.

ಇದರ ಕುರಿತು ವಿಚಾರ ಮಾಡಲು ಠಾಣೆಗೆ ಆಗಮಿಸಿದ ಶಾಸಕ ಬಿ.ಕೆ. ಸಂಗಮೇಶ್ವರ ಹಾಗೂ ಅವರ ಬೆಂಬಲಿಗರು ಪಿಎಸ್‌ಐ ತಿಮ್ಮಪ್ಪ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇರುವಾಗಲೇ ಸಿಪಿಐ ಪರಶುರಾಮಪ್ಪ ಅವರ ಜತೆ ಮಾತಿನ ಚಕಮಕಿ ನಡೆಸಿದರು.

ಈ ಘಟನೆ ಕುರಿತಂತೆ ಮೇಲಧಿಕಾರಿಗಳ ಜತೆ ಚರ್ಚೆ ನಡೆಸಿದ ಸಿಪಿಐ ಪರಶುರಾಮಪ್ಪ ಅವರು ಬುಧವಾರ ಬೆಳಗಿನ ಜಾವ ಹಳೇನಗರ ಠಾಣೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ, ತಾ.ಪಂ ಉಪಾಧ್ಯಕ್ಷ ಶಾಂತಕುಮಾರ್ ಸೇರಿದಂತೆ 15ರಿಂದ 20ಮಂದಿಯ ವಿರುದ್ಧ ದೂರು ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಹಾಜರು
ಸದರಿ ದೂರಿನ ಮೇಲೆ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ವಿಚಾರ ತಿಳಿದು ಶಾಸಕ ಬಿ.ಕೆ. ಸಂಗಮೇಶ್ವರ ಬುಧವಾರ ವಕೀಲರೊಂದಿಗೆ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.

ಇದನ್ನು ಸ್ವೀಕರಿಸಿದ ನ್ಯಾಯಾಲಯ ಮಧ್ಯಾಹ್ನ ಹಾಜರಾಗುವಂತೆ ಸೂಚನೆ ನೀಡಿತು. ಇದರ ನಂತರ ಶಾಸಕರು ಮೊದಲೇ ನಿಗದಿಯಾಗಿದ್ದ ರಸ್ತೆ ಅಭಿವೃದ್ಧಿಯ ಗುದ್ದಲಿಪೂಜೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದರು.

ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ಎಚ್.ಡಿ. ಆನಂದಕುಮಾರ್ ಶಾಸಕರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಈ ಹಂತದಲ್ಲಿ ಎರಡೂ ಕಡೆಯ ವಾದ ಕೇಳಿದ ನ್ಯಾಯಾಧೀಶ ಗಿರೀಶ್ ಭಟ್ ಅರ್ಜಿ ಮೇಲಿನ ಆದೇಶವನ್ನು ಗುರುವಾರಕ್ಕೆ ನಿಗದಿಪಡಿಸಿ ಆರೋಪಿಯು ಅಂದು ಹಾಜರಿರುವಂತೆ ಆದೇಶಿಸಿದರು.

ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೆರೆದಿದ್ದ ಶಾಸಕರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿರಾಳರಾಗಿ ಕೋರ್ಟ್ ಆವರಣದಿಂದ ಹೊರ ಹೋದ ದೃಶ್ಯ ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಗುರುವಾರದ ಆದೇಶ ಕುರಿತಂತೆ ಕೆಲವರು ವಕೀಲರ ಜತೆ ಚರ್ಚೆ ನಡೆಸಿದರು.

ಪೊಲೀಸ್ ದರ್ಬಾರ್
`ಕ್ಷೇತ್ರದಲ್ಲಿ ಪೊಲೀಸರ ದರ್ಪ, ದೌರ್ಜನ್ಯ, ದರ್ಬಾರು ಹೆಚ್ಚಿದೆ. ಸಾಮಾನ್ಯ ನಾಗರಿಕರು, ಠಾಣೆಗೆ ಹೋಗುವುದೇ ದುಸ್ತರವಾಗಿದೆ. ಇದನ್ನು ಕೇಳಲು ಹೋದರೆ ನಮ್ಮ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ~ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಮಾಧ್ಯಮದವರ ಮುಂದೆ ದೂರಿದರು.

ನ್ಯಾಯಾಲಯಕ್ಕೆ ಹಾಜರಾದ ವೇಳೆ ಎದುರಾದ ಪತ್ರಕರ್ತರ ಜತೆ ಮಾತನಾಡಿದ ಅವರು, `ನಾನು ಯಾವುದೇ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿಲ್ಲ. ನಾಗರಿಕರ ರಕ್ಷಣೆಗೆ ಬದ್ಧವಾಗಿ ಅವರ ಹಿತ ಕಾಪಾಡಲು ಠಾಣೆಗೆ ತೆರಳಿದ್ದು ಇಷ್ಟೆಲ್ಲಾ ಘಟನೆಗೆ ಕಾರಣವಾಗಿದೆ. ಇದರ ಹೊರತು ನಾನು ಯಾವುದೇ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT