ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸಂಭಾಜಿ ಸದಸ್ಯತ್ವ ರದ್ದುಗೊಳಿಸಲು ಆಗ್ರಹ

Last Updated 7 ಡಿಸೆಂಬರ್ 2013, 8:46 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ ಅವರು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರ ಶಾಸಕ ಸದಸ್ಯತ್ವ ರದ್ದುಗೊಳಿಸಬೇಕು’ ಎಂದು ಮಾಜಿ ಶಾಸಕ ವಾಟಾಳ್‌ ನಾಗರಾಜ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಸಂಭಾಜಿ ಪಾಟೀಲ ಕನ್ನಡಿಗರಿಂದ ಆಯ್ಕೆಯಾಗಿ ನಾಡವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ಸ್ವತಃ ರಾಜೀನಾಮೆ ನೀಡಬೇಕು. ಇಲ್ಲಿದಿದ್ದರೆ ಸಭಾನಾಯಕರು ಅವರ ಶಾಸಕ ಸ್ಥಾನ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರದ ಶವಯಾತ್ರೆ ಮಾಡುವದಾಗಿ ಹೇಳಿಕೆ ನೀಡಿದ ಶಾಸಕ ಸಂಭಾಜಿಯವರ ಅಣುಕು ಶವಯಾತ್ರೆ ಯನ್ನು ಬೆಂಗಳೂರಿನಿಂದ ಬೆಳಗಾವಿಗೆ ತರುತ್ತಿದ್ದ ನಮ್ಮನ್ನು ಹಾವೇರಿಯಲ್ಲಿ ತಡೆದು ಬಂಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ನಮ್ಮನ್ನು ನಕ್ಸಲೀಯ ರಂತೆ ನೋಡುತ್ತಿರುವುದು ಸರಿಯಲ್ಲ. ಇನ್ನಾದರೂ ರಾಜ್ಯ ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳಬೇಕು. ಗಡಿನಾಡಿ ನಲ್ಲಿ ಕನ್ನಡ ಚಟುವಟಿಕೆಗಳನ್ನು ಗಟ್ಟಿ ಗೊಳಿಸಲು ಶ್ರಮಿಸಬೇಕು’ ಎಂದರು.

‘ಕರ್ನಾಟಕ ರಾಜ್ಯದ ವಿರುದ್ಧ ಹಗುರವಾಗಿ ಮಾತನಾಡಿದ ಶಾಸಕ ಸಂಭಾಜಿಯವರ ವಿರುದ್ಧ ಕ್ರಮ ಕೈಗೊ ಳ್ಳುವ ಕುರಿತು ಜಿಲ್ಲೆಯ ಯಾವೊಬ್ಬ ಶಾಸಕರು ಸದನದಲ್ಲಿ ಧ್ವನಿ ಎತ್ತದಿರು ವುದು ವಿಷಾದದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್‌, ‘ಬೆಂಗಳೂರಿನಲ್ಲಿ ನಡೆಯಲಿರುವ ಶಾಸನಸಭೆಗೆ ಸಂಭಾಜಿ ಪಾಟೀಲರಿಗೆ ಪ್ರವೇಶ ನೀಡದಂತೆ ಒತ್ತಡ ಹೇರಲಾಗು ವುದು’ ಎಂದು ಹೇಳಿದರು.

‘ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚೆಯಾಗದಿರುವುದು ದುರ್ದೈವ. ಇದರಿಂದಾಗಿ ಗಡಿನಾಡಿನಲ್ಲಿ ಸುವರ್ಣ ವಿಧಾನಸೌಧ ಕಟ್ಟಿರುವುದು ವ್ಯರ್ಥವಾದಂತಾಗಿದೆ. ಇದು ಗಡಿ ಭಾಗದ ಕನ್ನಡಿಗರಲ್ಲಿ ಭಾರೀ ನಿರಾಸೆ ಉಂಟು ಮಾಡಿದೆ’ ಎಂದರು.

ಡಾ. ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ‘ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಮಾಜಿ ಸಚಿವ ಉಮೇಶ ಕತ್ತಿಯವರು ರಾಜ್ಯವನ್ನು ವಿಭಜನೆ ಮಾಡುವ ಕುರಿತು ಹೇಳಿಕೆ ನೀಡಿರುವದು ಸರಿಯಲ್ಲ. ಕತ್ತಿಯವರು ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು. ಅಖಂಡ ಕರ್ನಾಟಕ ನಿರ್ಮಿಸಲು ಎಲ್ಲರೂ ಶ್ರಮಿಸಬೇಕು’ ಎಂದರು.

‘ಕೃಷ್ಣಾ ನದಿ ನೀರು ಹಂಚಿಕೆ ಕುರಿತು ಶಾಸಕ ವೈ.ಎಸ್‌.ವಿ.ದತ್ತ ನೀಡಿರುವ ಹೇಳಿಕೆ ಖಂಡನೀಯ. ಇದು ದತ್ತ ಅವರ ಮೂರ್ಖತನದ ಪರಮಾವಧಿಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ಗಡಿನಾಡಿನಲ್ಲಿ ಕನ್ನಡಿಗರ ವಿರುದ್ಧ ಕೆಲಸ ಮಾಡುತ್ತಿರುವ ಶಾಸಕ ಸಂಭಾಜಿ ಪಾಟೀಲರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಡಿನ ಬಗ್ಗೆ ಬದ್ಧತೆ ಇಲ್ಲ. ರಾಜ್ಯ ಸರ್ಕಾರವು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರಾಠಿ ಗರನ್ನು ಓಲೈಸುವಲ್ಲಿ ನಿರತವಾಗಿದೆ. ಇದು ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವದಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದರು.

ಕನ್ನಡ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌.ಕುಮಾರ, ಮಾಜಿ ಮೇಯರ್‌ ಸಿದ್ಧನಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT