ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿ - ಸಿ.ಸಿ. ಪಾಟೀಲ

Last Updated 16 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ನರಗುಂದ:  ಸಚಿವ ಸ್ಥಾನ ಇಲ್ಲದಿದ್ದರೂ ಶಾಸಕನಾಗಿ ನರಗುಂದದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ನೀಲಿ ಚಿತ್ರ ವೀಕ್ಷಿಸಿದ ಆರೋಪಕ್ಕೆ ಒಳಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪ್ರಥಮ ಬಾರಿಗೆ  ಬುಧವಾರ ಪಟ್ಟಣಕ್ಕೆ ಆಗಮಿಸಿ ಅವರ ಅಭಿಮಾನಿ ಬಳಗ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಧಾನಸಭಾ ಸ್ಪೀಕರ್ ನೋಟಿಸ್‌ಗೆ ಗುರುವಾರ ಉತ್ತರ ನೀಡಲಿದ್ದು, ತಾವು ನಿರಪರಾಧಿ ಎಂದು ಅವರು ಹೇಳಿದರು.

ಸಚಿವ ಸ್ಥಾನ ಇಲ್ಲವಾದರೂ ಅಭಿವೃದ್ಧಿ ವೇಗಕ್ಕೆ ತಡೆಯುಂಟಾಗಲು ಅಸಾಧ್ಯ. ಆದ್ದರಿಂದ ನರಗುಂದ ಮತಕ್ಷೇತ್ರದ ಜನ ಎದೆಗುಂದ ಬೇಕಾಗಿಲ್ಲ. ನಿಮ್ಮೆಲ್ಲರ ಆಶಿರ್ವಾದ ದಿಂದ ನಾನು ಉತ್ತಮ ಸ್ಥಾನಮಾನ ಪಡೆದಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಇನ್ನು ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ನನ್ನ ಸ್ಥಿತಿ ಯಾರಿಗೂ ಬರದಿರಲಿ: ನನಗೆ ಬಂದಿರುವ ಈ ಸ್ಥಿತಿ ನನ್ನ ಶತ್ರುವಿಗೂ ಬರಬಾರದು. ವಿವಿಧ ಪಕ್ಷಗಳು ಕುಚೇಷ್ಟೆ ಮಾಡುವುದು ಸಹಜ. ಆದ್ದರಿಂದ ಮತಕ್ಷೇತ್ರದ ಜನ ತಾಳ್ಮೆಯಿಂದ ಇರಬೇಕು ಎಂದು ಸಚಿವ ಪಾಟೀಲ  ಭಾವುಕರಾಗಿ ನುಡಿದರು. ಇನ್ನು ಮುಂದೆ ನನ್ನನ್ನು `ಮಾಜಿ ಸಚಿವ~ ಎನ್ನದೇ  ಕೇವಲ ಶಾಸಕ ಎಂದು ಕರೆಯಿರಿ ಎಂದು ಮನವಿ ಮಾಡಿದರು. ನಾನು ಹುಟ್ಟಿದ್ದು ಬುಧವಾರ ಈಗ ಮತ್ತೇ ಅದೇ ಬುಧವಾರದಂದು ಅಪಾರ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕೃತಜ್ಞತೆ  ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ನರಗುಂದ ಘಟಕದ ಅಧ್ಯಕ್ಷ ಚಂದ್ರು ದಂಡಿನ, ಜಿ.ಪಂ. ಸದಸ್ಯ ಎಂ.ಎಸ್. ಪಾಟೀಲ, ಶಾರದಾ ಹಿರೇಗೌಡ್ರ, ಜಿ.ಪಂ. ಉಪಾಧ್ಯಕ್ಷ ಶಾಂತಾ ದಂಡಿನ, ಮಾಜಿ ಅಧ್ಯಕ್ಷೆ ಚಂಬವ್ವ ಪಾಟೀಲ, ವಸಂತ ಜೋಗಣ್ಣವರ ಬಿ.ಬಿ.ಐನಾಪುರ, ತಾ.ಪಂ. ಅಧ್ಯಕ್ಷ ಮಲ್ಲಪ್ಪ ಮೇಟಿ, ಶೋಭಾ ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಆರ್.ಎನ್.ಪಾಟೀಲ ಸೇರಿದಂತೆ ಮೊದಲಾದವರಿದ್ದರು.

ಸಾವಿರಾರು ಮಂದಿ ಭಾಗಿ: ಸಿ.ಸಿ.ಪಾಟೀಲರ ಬಹಿರಂಗ ಸಭೆಗೆ ನರಗುಂದ ಮತಕ್ಷೇತ್ರದ ವಿವಿಧ ಹಳ್ಳಿಗಳ ಮಹಿಳೆಯರು ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡಿದ್ದು ಕಂಡು ಬಂತು. ಕಾರ್ಯಕ್ರಮದ ಪ್ರಚಾರಾರ್ಥವಾಗಿ ಅಲ್ಲಲ್ಲಿ ಜಾಹೀರಾತು ಫಲಕಗಳು ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT