ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಆಸ್ತಿಯಲ್ಲಿ ಭಾರೀ ಹೆಚ್ಚಳ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಯನ್ನು ಬಯಸಿ ಚುನಾವಣಾ ಕಣದಲ್ಲಿರುವ 179 ಶಾಸಕರ ಸರಾಸರಿ ಆಸ್ತಿ ಮೌಲ್ಯದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿನ ಆಸ್ತಿ ವಿವರಗಳನ್ನು ಆಧರಿಸಿ `ಕರ್ನಾಟಕ ಚುನಾವಣಾ ಕಾವಲು ಸಮಿತಿ'ಯು ಸಿದ್ಧಪಡಿಸಿರುವ ವಿಶ್ಲೇಷಣಾ ವರದಿಯಿಂದ ಈ ಅಂಶ ಬಹಿರಂಗಗೊಂಡಿದೆ. ಸಮಿತಿ ವರದಿಯನ್ನು ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿತು.

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು 2008ರ ವಿಧಾನಸಭಾ ಚುನಾವಣೆ ಮತ್ತು 2013ರ ಚುನಾವಣೆಗೆ ನಾಮಪತ್ರದ ಜತೆಗೆ ಸಲ್ಲಿಸಿದ ಪ್ರಮಾಣಪತ್ರಗಳಲ್ಲಿನ ಆಸ್ತಿ ವಿವರವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ವಿವಿಧ ಪಕ್ಷಗಳ 179 ಶಾಸಕರ ಸರಾಸರಿ ಆಸ್ತಿಯು ರೂ. 10.59 ಕೋಟಿ ಆಗಿತ್ತು. ಈ ಬಾರಿ ಕಣದಲ್ಲಿರುವ ಅದೇ 179 ಶಾಸಕರ ಆಸ್ತಿಯು ಸರಾಸರಿ ರೂ.19.87 ಕೋಟಿಗೆ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಅತ್ಯಂತ ಹೆಚ್ಚು ಆಸ್ತಿ ಗಳಿಸಿದ ಶಾಸಕರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಮೊದಲಿಗರು.ಐದು ವರ್ಷಗಳಲ್ಲಿ ಅವರ ಆಸ್ತಿ  ರೂ.175.91 ಕೋಟಿ ಹೆಚ್ಚಾಗಿದೆ. 2008ರಲ್ಲಿ  ರೂ. 75.59 ಕೋಟಿ ಇದ್ದ ಅವರ ಆಸ್ತಿ, ಈಗ ರೂ. 251.50 ಕೋಟಿಗೆ ಏರಿಕೆಯಾಗಿದೆ.

ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ಆಸ್ತಿಯು ರೂ. 143.36 ಕೋಟಿ ಹೆಚ್ಚಾಗಿದೆ. 2008ರಲ್ಲಿ ಅವರ ಆಸ್ತಿಯ ಒಟ್ಟು ಮೊತ್ತ  ರೂ. 767.61 ಕೋಟಿಯಾಗಿತ್ತು. ಸದ್ಯ ಅವರ ಆಸ್ತಿ  ರೂ.910.98 ಕೋಟಿಯಾಗಿದೆ.

ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಅವರ ಆಸ್ತಿ  ರೂ.124.85 ಕೋಟಿ ಹೆಚ್ಚಾಗಿದೆ. 2008ರಲ್ಲಿ ರೂ. 61.54 ಕೋಟಿ ಇದ್ದ ಅವರ ಆಸ್ತಿ ಈಗ ರೂ. 186.40 ಕೋಟಿಗೆ ಹೆಚ್ಚಾಗಿದೆ.

ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಂದ ರೈ ಅವರ ಆಸ್ತಿ ಶೇ 211ರಷ್ಟು ಹೆಚ್ಚಳವಾಗಿದೆ. 2008ರಲ್ಲಿ  ರೂ. 1.71 ಲಕ್ಷವಿದ್ದ ಅವರ ಆಸ್ತಿ ಸದ್ಯ ರೂ. 3.62 ಕೋಟಿಗೆ ಏರಿಕೆಯಾಗಿದೆ. ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರ ಬಳಿ 2008ರಲ್ಲಿ ರೂ. 18.20 ಲಕ್ಷ ಮೌಲ್ಯದಲ್ಲಿತ್ತು. ಅವರ ಆಸ್ತಿ ಈಗ  ರೂ. 10.65 ಕೋಟಿಗೆ ಏರಿಕೆಯಾಗಿದೆ. ಅವರ ಬಳಿ ಇರುವ ಮೋಟಾರು ವಾಹನಗಳು, ಆಭರಣ ಮತ್ತು ಸ್ಥಿರಾಸ್ತಿಗಳ ಮೌಲ್ಯದ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ.

ನಗರದ ಸಿ.ವಿ.ರಾಮನ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ರಘು ಅವರ ಬಳಿ 2008ರಲ್ಲಿ ರೂ. 72.88 ಲಕ್ಷ ಮೌಲ್ಯದ ಆಸ್ತಿಇತ್ತು. ಅವರ ಆಸ್ತಿ ಸದ್ಯ ರೂ. 31.64 ಕೋಟಿಗೆ ಹೆಚ್ಚಾಗಿದೆ. ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರಮಗೌಡ ಆಲಗೋಡು ಕಾಗೆ ಅವರ ಆಸ್ತಿ 2008ರಲ್ಲಿ ರೂ. 8.60 ಲಕ್ಷ ಮೌಲ್ಯದಲ್ಲಿತ್ತು. ಈಗ ಅವರ ಆಸ್ತಿ  ರೂ. 3.32 ಕೋಟಿಗೆ ಹೆಚ್ಚಾಗಿದೆ. ಕೋಲಾರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರ ಬಳಿ 2008ರಲ್ಲಿ ಇದ್ದ ಆಸ್ತಿ ಮೌಲ್ಯ  ರೂ. 2.50 ಲಕ್ಷ. ಈಗ ಅವರ ಆಸ್ತಿ 66.43 ಲಕ್ಷಕ್ಕೆ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಚುನಾವಣಾ ಕಣದಲ್ಲಿರುವ ಬಿಜೆಪಿಯ 19, ಕಾಂಗ್ರೆಸ್‌ನ 8, ಜೆಡಿಎಸ್‌ನ 5, ಕೆಜೆಪಿಯ 3 ಮತ್ತು ಐದು ಮಂದಿ ಪಕ್ಷೇತರ ಅಭ್ಯರ್ಥಿಗಳ ಮೇಲೆ ಅಪರಾಧ ಮೊಕದ್ದಮೆಗಳು ದಾಖಲಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಐದು ವರ್ಷಗಳಲ್ಲಿ ಆಸ್ತಿ ಕಡಿಮೆಯಾದ ಶಾಸಕರು: 2008 ರಿಂದ 2013 ರ ಅವಧಿಯಲ್ಲಿ ತಮ್ಮ ಆಸ್ತಿ ಕಡಿಮೆಯಾಗಿದೆಯೆಂದು ಎಂಟು ಮಂದಿ ಶಾಸಕರು ಘೋಷಿಸಿಕೊಂಡಿದ್ದಾರೆ. ಆಸ್ತಿ ಕಡಿಮೆಯಾದ ಶಾಸಕರಲ್ಲಿ ಭದ್ರಾವತಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ ಅವರು ಮೊದಲಿಗರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್ವರ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 2008ರಲ್ಲಿ ರೂ. 5.33 ಕೋಟಿ ಇದ್ದ ಅವರ ಆಸ್ತಿ ಸದ್ಯ ರೂ. 1.66 ಕೋಟಿಗೆ ಇಳಿದಿದೆ.

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಅವರ ಬಳಿ 2008ರಲ್ಲಿ ರೂ. 7.85 ಕೋಟಿಯಿದ್ದ ಆಸ್ತಿ ಸದ್ಯ ರೂ. 3.59 ಕೋಟಿಗೆ ಇಳಿದಿದೆ. ಇಂಡಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಾರ್ವಭೌಮ ಬಗಲಿ ಅವರ ಬಳಿ 2008ರಲ್ಲಿ ಇದ್ದ ಆಸ್ತಿ ಮೌಲ್ಯ  ರೂ. 8.02 ಕೋಟಿ. ಸದ್ಯ ಅವರ ಆಸ್ತಿ  ರೂ. 3.94 ಕೋಟಿಯಾಗಿದೆ.

ವರದಿ ಬಿಡುಗಡೆಗೊಳಿಸಿ ಮಾತನಾಡಿದ ಸಮಿತಿಯ ಮುಖ್ಯಸ್ಥ ಪ್ರೊ.ತ್ರಿಲೋಚನ ಶಾಸ್ತ್ರಿ, `ತಮ್ಮ ಜನ ಪ್ರತಿನಿಧಿಗಳು ಎಷ್ಟು ಆಸ್ತಿಯನ್ನು ಹೊಂದಿದ್ದಾರೆ ಹಾಗೂ ಅವರ ವಿರುದ್ಧ ಎಷ್ಟು ಅಪರಾಧ ಮೊಕದ್ದಮೆಗಳಿವೆ ಎಂಬ ಮಾಹಿತಿ ಜನಸಾಮಾನ್ಯರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಈ ವಿವರಗಳನ್ನು ನೀಡಲಾಗಿದೆ ಎಂದರು.

ಶಾಸಕರು ತಾವೇ ಘೋಷಿಸಿಕೊಂಡ ಆಸ್ತಿ ಹಾಗೂ ಮೊಕದ್ದಮೆಗಳ ವಿವರನ್ನು ಒಂದೆಡೆ ತರುವ ಪ್ರಯತ್ನ ನಮ್ಮದು' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT