ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ನಡುವೆ ವಾಗ್ವಾದ; ಬೈಗುಳದ ಸುರಿಮಳೆ

Last Updated 15 ಸೆಪ್ಟೆಂಬರ್ 2011, 8:30 IST
ಅಕ್ಷರ ಗಾತ್ರ

ತುಮಕೂರು: ಉಸ್ತುವಾರಿ ಕಾರ್ಯದರ್ಶಿ ಮೌನವ್ರತ, ಮೂವರು ಶಾಸಕರ ನಡುವೆ ವಾಗ್ವಾದ, ಕೊನೆಮೊದಲಿಲ್ಲದ ಚರ್ಚೆ, ತಾತ್ವಿಕ ಅಂತ್ಯ ಕಾಣದ ಪ್ರಶ್ನೋತ್ತರಗಳು, ಅಧಿಕಾರಿಗಳಿಗೆ ಮಾತನಾಡಲೂ ಬಿಡದ ಶಾಸಕರು, ಮೌನ ಪ್ರೇಕ್ಷಕರಾದ ಉಸ್ತುವಾರಿ ಸಚಿವರು...

-ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಸರಳ ವಿವರಣೆಯಿದು. ಸುಮಾರು ಒಂದು ವರ್ಷದ ನಂತರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಹಲವು ಮಹತ್ವದ ನಿರ್ಣಗಳಿಗೆ ಸಾಕ್ಷಿಯಾಯಿತು.

ವಾಗ್ಯುದ್ಧ: 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ 12.17ಕ್ಕೆ ಶುರುವಾಯಿತು. ಧುಮುಧುಮು ಎನ್ನುತ್ತಲೇ ಸಭೆಗೆ ಬಂದ ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮೊದಲು ಗುಬ್ಬಿ ಶಾಸಕ ಶ್ರೀನಿವಾಸ್ ಅವರೊಂದಿಗೆ ನಂತರ ಪಾವಗಡ ಶಾಸಕ ವೆಂಕಟರಮಣಪ್ಪ ಅವರೊಂದಿಗೆ ವಾಗ್ವಾದ ನಡೆಸಿದರು.

ಒಂದು ಹಂತದಲ್ಲಿ ಶ್ರೀನಿವಾಸ್- ಸುರೇಶ್‌ಗೌಡ ಪರಸ್ಪರ ಬಲ ಪ್ರದರ್ಶನಕ್ಕೂ ಸಜ್ಜಾದರೂ. ಅಸಂವಿಧಾನಿಕ ಪದಗಳ ಬಳಕೆಯೂ ಧಾರಾಳವಾಗಿ ನಡೆಯಿತು. ಉಸ್ತುವಾರಿ ಸಚಿವರಿಗೆ ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲಿ ಸಾಕುಸಾಕಾಗಿತ್ತು.

ಸಭೆ ಆರಂಭವಾದ ತಕ್ಷಣ ಮೈಕು ಕೈಗೆ ಹಿಡಿದ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಈಚೆಗಷ್ಟೇ ಟ್ರ್ಯಾಕ್ಟರ್ ಕೆರೆಗೆ ಉರುಳಿ ಅಸುನೀಗಿದ ಸಂತ್ರಸ್ತರ ಕುಟುಂಬಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸಬೇಕೆಂದು ಕೋರಿದರು. ಮಧ್ಯಪ್ರವೇಶಿಸಿ ಮಾತನಾಡಿದ ಗುಬ್ಬಿ ಶಾಸಕ ಶ್ರೀನಿವಾಸ್, ಕಳೆದ ತಿಂಗಳು ಸಂಭವಿಸಿದ ಟ್ರ್ಯಾಕ್ಸ್ ಅಪಘಾತದಲ್ಲಿ ಅಸುನೀಗಿದ ಬಡವರಿಗೆ ಈವರೆಗೂ ಪರಿಹಾರದ ಹಣ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಸುಮ್ನೆ ಕೆಡಿಪಿ ಸಭೆಯಲ್ಲಿ ಕೂಗಿಕೊಂಡರೆ ಆಗುವುದಿಲ್ಲ. ಫೈಲ್‌ನ ಜತೆಗೆ ಬೆಂಗಳೂರಿಗೆ ಹೋಗಿ ಪರಿಹಾರ ಮಂಜೂರು ಮಾಡಿಸಿಕೊಂಡು ಬರಬೇಕು~ ಎಂದು ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದರು. `ನಾನು ಹೇಗೆ ಕೆಲಸ ಮಾಡಬೇಕು ಅಂತ ನಿನ್ನಿಂದ ಕಲೀಬೇಕಿಲ್ಲ. ಸಚಿವರಿಗೆ ನನ್ನ ಕ್ಷೇತ್ರದ ಸಮಸ್ಯೆ ವಿವರಿಸುತ್ತಿದ್ದೇನೆ. ನೀನು ಸುಮ್ನಿರು~ ಎಂದು ಶ್ರೀನಿವಾಸ್ ಖಾರವಾಗಿ ಪ್ರತಿಕ್ರಿಯಿಸಿದರು.

ಶಾಸಕರಾದ ಶಿವಣ್ಣ, ಜಯಚಂದ್ರ ಇಬ್ಬರನ್ನೂ ಕಷ್ಟಪಟ್ಟು ಸಮಾಧಾನಪಡಿಸಿದರು. `ಇಬ್ರೂ ಸುಮ್ನಿರ‌್ತೀರೋ ಇಲ್ವೋ...~ ಎಂದು ಶಾಸಕ ವೆಂಕಟರಮಣಪ್ಪ ಗದರಿಸಿದ ಮೇಲೆ ವಾಗ್ಯುದ್ಧಕ್ಕೆ ತೆರೆಬಿತ್ತು.

ರಾಜಕೀಯ ಬೇಡ: ಕೆಡಿಪಿ ಸಭೆಯಲ್ಲಿ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ವಿವರಿಸಬೇಕು. ಇಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಲಹೆ ನೀಡಬೇಕು. ಪಕ್ಷ ಬಿಟ್ಟು ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅಭಿವೃದ್ಧಿ ಕನಸನ್ನು ನನಸು ಮಾಡಲು ಹೆಚ್ಚು ಒತ್ತು ನೀಡಬೇಕೆಂದು ಉಸ್ತುವಾರಿ ಸಚಿವ ನಿರಾಣಿ ಕಿವಿಮಾತು ಹೇಳಿದರು.

ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು. ಸ್ವತಃ ಮುಖ್ಯಮಂತ್ರಿಗೆ ವಿವರಿಸಲಾಗುವುದು. ಸಮಸ್ಯೆಗಳನ್ನು ಪ್ರಸ್ತಾಪಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಹಾರವನ್ನೂ ಸೂಚಿಸಿದರೆ ಒಳಿತು ಎಂದರು.

ಎಚ್ಚರಿಕೆ: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸಿಸದಿರುವ ಬಗ್ಗೆ ಅನೇಕ ದೂರು ಬಂದಿವೆ. ಇನ್ನು ಮುಂದೆ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸಿಸಬೇಕು. ಮುಂಜಾನೆ ಕಚೇರಿಗೆ ತಡವಾಗಿ ಬರುವುದು, ಸಂಜೆ ಬೇಗನೇ ಹೊರಡುವ ಮನೋಭಾವ ಬಿಟ್ಟು ಕೆಲಸ ಮಾಡಬೇಕೆಂದು ಸಚಿವರು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದೆ. ಯಾವ ಹೋಬಳಿಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂಬ ಮಾಹಿತಿ ನೀಡಿದರೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಪಾವಗಡ, ಶಿರಾ ತಾಲ್ಲೂಕಿನ 5 ಗ್ರಾಮ ಪಂಚಾಯಿತಿಗಳು ಕೆಳಹಂತದ ಅಧಿಕಾರಿಯೊಬ್ಬರ ಕಣ್ತಪ್ಪಿನಿಂದಾಗಿ ಬೆಳೆವಿಮೆಯಿಂದ ವಂಚಿತವಾಗಿರುವ ಮಾಹಿತಿ ಇದೆ. ಈ ಕುರಿತು ವಿಮಾ ಕಂಪೆನಿಯೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುತ್ತೇನೆ ಎಂದರು.

ತಿಂಗಳಿಗೆ ಎರಡು ಸಲ ಜಿಲ್ಲೆಗೆ ಬರುತ್ತೇನೆ. ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಉಸ್ತುವಾರಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT