ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆ ಮುಂದೆ ಧರಣಿ; ಆಲ್ಕೋಡ್

Last Updated 10 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ರಾಯಚೂರು:  ನಾರಾಯಣಪುರ ಬಲದಂಡೆ ಕಾಲುವೆ 95 ಕೀ.ಮಿಯಿಂದ 157ರವರೆಗೆ ವಿಸ್ತರಣೆ, ನಂದವಾಡಗಿ ಏತ ನೀರಾವರಿ ಯೋಜನೆ, ಲಿಂಗಸುಗೂರು ತಾಲ್ಲೂಕಿಗೆ ವರದಾನವಾದ 8ಎ,ಬಿ ಮತ್ತು ಸಿ ಕಾಲುವೆ ನಿರ್ಮಾಣ ಕಾಮಗಾರಿಯನ್ನು ರಾಜ್ಯ ಸರ್ಕಾರ ಶೀಘ್ರ ಆರಂಭಿಸಬೇಕು. ಇದೇ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಶಾಸಕರ ಮನೆ ಎದುರು ಧರಣಿ ನಡೆಸಲಾಗುವುದು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಹನುಮಂತಪ್ಪ ಆಲ್ಕೋಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ತೀರ್ಪು ಪ್ರಕಟಗೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೂ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆ ಕಾಮಗಾರಿಗೆ ಅನುಕೂಲವಾಗಿದೆ. ನಾರಾಯಣಪುರ ಬಲದಂಡೆ ಕಾಲುವೆ, 9ಎ, ನಂದವಾಡಗಿ ಏತ ನೀರಾವರಿ, ರಾಂಪುರ ಏತ ನೀರಾವರಿ ಯೋಜನೆ, 8ಎ,ಬಿ ಮತ್ತು ಸಿ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಂಡರೆ ಲಿಂಗಸುಗೂರು, ದೇವದುರ್ಗ, ಮಾನ್ವಿ ಮತ್ತು ಕೊನೆಯ ಭಾಗದ ರಾಯಚೂರು ತಾಲ್ಲೂಕಿನ ರೈತರ ಸ್ಥಿತಿ ಸುಧಾರಣೆ ಆಗುತ್ತದೆ ಎಂದರು.

ಇದಕ್ಕೆ ಈ ಭಾಗದ ಶಾಸಕರ ನಿರಂತರ ಒತ್ತಡದ ಅವಶ್ಯಕತೆ ಇದೆ. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಮುಖ್ಯಮಂತ್ರಿಗಳು ಮತ್ತು ಆಡಳಿತ ಯಂತ್ರದ ಮೇಲೆ ಒತ್ತಡ ಹೇರಬೇಕು. ಈ ಹಿಂದೆ ಮುಖ್ಯಮಂತ್ರಿ ಆಗುವ ಪೂರ್ವದಲ್ಲಿ ಯಡಿಯೂರಪ್ಪ ಅವರು ಲಿಂಗಸುಗೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾದ 6 ತಿಂಗಳಲ್ಲಿ ನಂದವಾಡಗಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಈಡೇರಿಲ್ಲ. ಅದನ್ನು ಆಡಳಿತ ಪಕ್ಷದ ಶಾಸಕರು ನೆನಪಿಸಬೇಕು ಎಂದು ಹೇಳಿದರು.

ನಂದವಾಡಗಿ ಏತ ನೀರಾವರಿ ಯೋಜನೆ ಸರ್ವೆ ಕಾರ್ಯವೂ ಪೂರ್ಣವಾಗಿದೆ. ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರು ನೀಡಿದ ಮಾಹಿತಿ ಪ್ರಕಾರ ಈ ಯೋಜನೆಗೆ 6.19 ಟಿಎಂಸಿ ಮಾತ್ರ ಕೃಷ್ಣಾ ನದಿಯಿಂದ ನೀರು ದೊರಕಿಸಲು ಅವಕಾಶವಿದೆ ಎಂಬ ವರದಿ ಇದೆ. ಆದರೆ ಈ ಯೋಜನೆಗೆ ಅಗತ್ಯವಿದ್ದುದು 14 ಟಿ.ಎಂ.ಸಿ. ಹೀಗಾಗಿ ಪೂರ್ಣ ಪ್ರಮಾಣದ ನೀರನ್ನೇ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ದೊರಕಿಸಬೇಕು. ಇಲ್ಲದೇ ಇದ್ದಲ್ಲಿ ಕಾಟಾಚಾರದ ಮತ್ತು ಕಣ್ಣೊರೆಸುವ ತಂತ್ರ ಇದಾಗುತ್ತದೆ. ಸರ್ಕಾರ ಈ ವಿಷಯದಲ್ಲಿ ಶೀಘ್ರ ದೃಢ ನಿರ್ಧಾರ ಕೈಗೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಸದ್ಯ ಜಿಪಂ ಸದಸ್ಯ ಎಚ್.ಬಿ ಮುರಾರಿ ಅವರು ನಂದವಾಡಗಿ ಏತ ನೀರಾವರಿ ಸಮಿತಿ ಮೂಲಕ ರೈತ ಜಾಗೃತಿ ಕಾಲ್ನಡಿಗೆ ಜಾಥಾ ಕೈಗೊಂಡಿರುವುದು ಸ್ವಾಗತಾರ್ಹ. ಈ ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಇದೆ. ಸದಾ ಒಂದಿಲ್ಲೊಂದು ಸಮಸ್ಯೆಯಲ್ಲೇ ಇರುವ ರೈತರನ್ನು ಕಾಲ್ನಡಿಗೆ ಜಾಥಾಕ್ಕೆ ಆಹ್ವಾನಿಸುವುದಕ್ಕಿಂತ ನೇರವಾಗಿ ಶಾಸಕರು, ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕಿತ್ತು ಎಂದು ತಿಳಿಸಿದರು.ಈ ಜಾಥಾದ ಬಳಿಕ ಸರ್ಕಾರ ಎಚ್ಚೆತ್ತು ಕಾಮಗಾರಿಗೆ ಮುಂದಾದರೆ ಸರಿ. ಇಲ್ಲದೇ ಇದ್ದಲ್ಲಿ ಶಾಸಕರ ಮನೆ ಎದುರು ನಿರಂತರ ಧರಣಿ ನಡೆಸಲಾ ಗುವುದು ಎಂದು ಹೇಳಿದರು. ಯುವ ಕಾರ್ಯಕರ್ತ ಬಾಬು, ಅಕ್ಬರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT