ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಆರೋಪಪಟ್ಟಿಗೆ ಅನುಮತಿ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಕಬಳಿಕೆ ನಡೆಸಿರುವುದು ಮತ್ತು ಸುಳ್ಳು ಮಾಹಿತಿ ನೀಡಿ ವಂಚಿಸಿದ ಆರೋಪದ ಮೇಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಮುನಿರಾಜು ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ವಿಧಾನಸಭೆ ಅಧ್ಯಕ್ಷ ಕೆ.ಜಿ.ಬೋಪಯ್ಯ ಸೋಮವಾರ ಅನುಮತಿ ನೀಡಿದ್ದಾರೆ.

ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದರು. ಬೆಳಿಗ್ಗೆಯಷ್ಟೇ ಸ್ಪೀಕರ್ ಅವರಿಂದ ಅನುಮತಿ ಪತ್ರ ಬಂದಿದೆ ಎಂಬ ಮಾಹಿತಿ ಪಡೆದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಆರೋಪಪಟ್ಟಿ ಸಲ್ಲಿಸಲು ಇದೇ 13ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದರು.

ಕಳೆದ ಅ. 31ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ, ಮುನಿರಾಜು ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಕಬಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ಡಿವೈಎಸ್‌ಪಿ ಮಂಜುನಾಥ್, ಮಾರ್ಚ್ 9ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಶಾಸಕ ಮುನಿರಾಜು, ರಾಮನಗರದ ಹಾಲಿ ಚುನಾವಣಾ ತಹಶೀಲ್ದಾರ್ ಕೆ.ರಂಗನಾಥಯ್ಯ, ಯಶವಂತಪುರ ಹೋಬಳಿ ಕಂದಾಯ ನಿರೀಕ್ಷಕ ಸುರೇಶ್ ಅಕ್ರಮ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದರು. ಎಲ್ಲ ಆರೋಪಿಗಳ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಕೋರಲಾಗಿದೆ ಎಂಬ ಮಾಹಿತಿಯನ್ನೂ ನ್ಯಾಯಾಲಯಕ್ಕೆ ನೀಡಿದ್ದರು.

ಸೋಮವಾರ ವಿಚಾರಣೆ ಆರಂಭವಾಗುವ ಕೆಲ ಕ್ಷಣಗಳ ಮುನ್ನ ಸ್ಪೀಕರ್ ಕಚೇರಿಯಿಂದ ಬಂದ ಅನುಮತಿ ಪತ್ರ ಲೋಕಾಯುಕ್ತ ಪೊಲೀಸರಿಗೆ ತಲುಪಿತು. ರಂಗನಾಥಯ್ಯ ಮತ್ತು ಸುರೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ನೀಡಿದ ಅನುಮತಿ ಪತ್ರವೂ ಕೈಸೇರಿತು. ಈ ಕುರಿತು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಡಿವೈಎಸ್‌ಪಿ, ನಿಯಮದ ಪ್ರಕಾರ ಆರೋಪಪಟ್ಟಿ ಸಿದ್ಧಪಡಿಸಿ, ಸಲ್ಲಿಸಲು ಕಾಲಾವಕಾಶ ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT