ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ; ಬೆದರಿಕೆ

Last Updated 7 ಜನವರಿ 2012, 9:55 IST
ಅಕ್ಷರ ಗಾತ್ರ

ಕುಷ್ಟಗಿ: ಅನೇಕ ಹಗರಣಗಳಲ್ಲಿ ಸ್ವತಃ ಪಾಲ್ಗೊಂಡಿದ್ದರೂ ಪುರಸಭೆ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ಸದಸ್ಯರ ವಿರುದ್ಧ ಜನರನ್ನು ಎತ್ತಿಕಟ್ಟಿ ಪ್ರಚೋದಿಸುವಂಥ ಕೀಳು ಮಟ್ಟದ ರಾಜಕಾರಣದಲ್ಲಿ ನಿರತರಾಗಿರುವ ಶಾಸಕ ಅಮರೇಗೌಡ ಬಯ್ಯಾಪೂರ ತಮ್ಮ ವರ್ತನೆ ಬದಲಿಸಿಕೊಳ್ಳದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಪುರಸಭೆಯ ಹಲವು ಸದಸ್ಯರು ಶುಕ್ರವಾರ ಇಲ್ಲಿ ಹೇಳಿದರು.

ಪುರಸಭೆಯ ಹಣ ದುರುಪಯೋಗ ಪ್ರಕರಣದಲ್ಲಿ ಶಾಸಕರು ಅನಗತ್ಯವಾಗಿ ಸದಸ್ಯರನ್ನು ಎಳೆದು ತಂದು ರಾಜಕೀಯ ಬೆರೆಸುತ್ತಿದ್ದಾರೆ ಎಂಬುದನ್ನು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಬಯ್ಯಾಪೂರ ವಿರುದ್ಧ ವಾಗ್ದಾಳಿ ನಡೆಸಿದ ಸದಸ್ಯರು, ಸ್ವತಃ ನಾವೇ ಜಿಲ್ಲಾಡಳಿತಕ್ಕೆ ನೀಡಿದ ದೂರು ನೀಡಿದ ನಂತರ ತನಿಖೆ ಆರಂಭಗೊಂಡಿದೆ.

ಆದರೆ ಸದಸ್ಯರ ಮೇಲೂ ಕ್ರಮ ಜರುಗಿಸಬೇಕು, ಭ್ರಷ್ಟಾಚಾರದ ವಿರುದ್ಧ ಜನ ಸಿಡಿದೇಳಬೇಕು ಎಂದು ಶಾಸಕರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ತಮ್ಮ ಬಳಿ ದಾಖಲೆಗಳು ಇದ್ದರೆ ಸದಸ್ಯರು ಸಹಿತ ಯಾರೇ ಇರಲಿ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲು ಸರ್ಕಾರವನ್ನು ಒತ್ತಾಯಿಸುವಂತೆ ಸವಾಲು ಹಾಕಿದರು. ಪುರಸಭೆಯಲ್ಲಿನ ಭ್ರಷ್ಟಾಚಾರ ಗಮನಕ್ಕೆ ಬಂದಿದೆ ಎಂದರಾದರೂ ಒಂದು ಉದಾಹರಣೆಯನ್ನೂ ನೀಡದ ಸದಸ್ಯರನ್ನು ಈವರೆಗೂ ಮೌನವಾಗಿದ್ದೇಕೆ ಎಂದು ಕೇಳಿದರೆ, `ಅನೇಕ ತಿಂಗಳುಗಳಿಂದಲೂ ಸಭೆ ನಡೆದಿಲ್ಲ, ಕ್ಯಾಷ್‌ಬುಕ್ ಬರೆದಿಲ್ಲ, ವೋಚರ್‌ಗಳಿಲ್ಲದೇ ಮುನ್ಸಿಪಲ್ ಫಂಡ್‌ನಲ್ಲಿ ಅಧ್ಯ್ಷರ ಅನುಮೋದನೆ ಇಲ್ಲದೇ ಮುಖ್ಯಾಧಿಕಾರಿ ಸುಮಾರು 165 ಚೆಕ್‌ಳನ್ನು ಬೇಕಾಬಿಟ್ಟಿಯಾಗಿ ನೀಡಿದ್ದಾರೆ. ಪಟ್ಟಣದ ಎಲ್ಲರ ಕೈಗೂ ಬೇಕಾಬಿಟ್ಟಿಯಾಗಿ ಚೆಕ್‌ಗಳು ಬಂದಿದ್ದು ಹಣ ದುರುಪಯೋಗ ನಡೆದಿರುವ ಶಂಕೆ ಬಂದ ನಂತರ ಅದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ~ ಹಾಗಾಗಿ ಜಿಲ್ಲಾಡಳಿತ ಅವ್ಯವಹಾರ ನಡೆಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಿ ಎಂದು ಒತ್ತಾಯಿಸಿದರು.

`ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿನ ನೊಣದ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ~ ಎಂದು ಶಾಸಕರ ಬಗ್ಗೆ ಲೇವಡಿ ಮಾಡಿದ ಸದಸ್ಯರು, ಯಾವುದೇ ಉದಾಹರಣೆ ನೀಡಲಿಲ್ಲ, ಈ ಬಗ್ಗೆ ಪ್ರಶ್ನಿಸಿದಾಗ ಜ.10ರ ನಂತರ ಪ್ರಕರಣಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು.

ಶಾಸಕ ಮಾಡಿದ್ದೇನು: ಪುರಸಭೆಯ ವಿಷಯದಲ್ಲಿ ಶಾಸಕ ಬಯ್ಯಾಪೂರ ಹಸ್ತಕ್ಷೇಪ ನಡೆಸುತ್ತಿದ್ದಾರೆ, ಅಷ್ಟಕ್ಕೂ ಈ ಪಟ್ಟಣದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನು? ದೇವಸ್ಥಾನಗಳಿಗೆ ನಾಲ್ಕೈದು ತಗಡು ಕೊಟ್ಟಿದ್ದನ್ನು ಬಿಟ್ಟರೆ ಶಾಸಕರ ಅನುದಾನದಲ್ಲಿ ಒಂದು ರೂ ಕೊಟ್ಟಿಲ್ಲ, ಸರ್ಕಾರದಿಂದಲೂ ಯಾವುದೇ ಹಣ, ಸೌಲಭ್ಯಗಳನ್ನು ಮಂಜೂರು ಮಾಡಿಸಿಲ್ಲ, ಏಳೆಂಟು ವರ್ಷದಿಂದಲೂ ಸೂರಿಲ್ಲದವರಿಗೆ ಒಂದು ಮನೆ ಬಂದಿಲ್ಲ, ವಸತಿಗಾಗಿ ಜಮೀನು ಖರೀದಿಗೆ ಪುರಸಭೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪ್ರಸ್ತಾವನೆ ಮಂಜೂರಾತಿಗೆ ಪ್ರಯತ್ನಿಸಿಲ್ಲ ಎಂದರು. ಅಲ್ಲದೇ ಕ್ರಿಯಾಯೋಜನೆಯಲ್ಲಿ ಶೇ 30ರಷ್ಟು ತಾವು ಸೂಚಿಸುವ ಕಾಮಗಾರಿಗಳನ್ನು ಸೇರಿಸುವ ಬಯ್ಯಾಪೂರ ಅವರಿಗೆ ತಮ್ಮ ಆಪ್ತರಿಗೆ ಸೇರಿದ ವಿಜಯಚಂದ್ರಶೇಖರ, ಸ್ಕೌಟ್ಸ್‌ನಂಥ ಸಂಸ್ಥೆಗಳಿಗೆ ಮಾತ್ರ ಮೂಲಸೌಕರ್ಯ ಕಲ್ಪಿಸುವುದಕ್ಕೆ ನೆನಪಾಗುತ್ತದೆ ಎಂದು ಛೇಡಿಸಿದರು.

ಗೈರು: ಅಧ್ಯಕ್ಷೆ ಮೋದಿನಬಿ, ಜಂಬಣ್ಣ, ವೀರೇಶ ಬಂಗಾರಶೆಟ್ಟರ್, ವಸಂತ ಮೇಲಿನಮನಿ, ಶರಣಪ್ಪ ಕಂಚಿ, ಸುಭಾಸ್, ದೇವಮ್ಮ ತೋಟಮ್ಮ, ಗಂಗಮ್ಮ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT