ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಷೋಕಿ ಟೂರ್ನಿಗೆ ವಿದ್ಯುತ್ ಅಪವ್ಯಯ

Last Updated 22 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯುತ್ ಕೊರತೆಯಿಂದಾಗಿ ರೈತರ ಹಾಗೂ ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ, ಶಾಲಾ ಮಕ್ಕಳ ಓದಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಆದರೆ ಹೊನಲು ಬೆಳಕಿನ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿಗಾಗಿ 50 ಕಿಲೋ ವ್ಯಾಟ್ ವಿದ್ಯುತ್ ಅನ್ನು ನಿಯಮಿತವಾಗಿ ಸರಬರಾಜು ಮಾಡಲಾಗುತ್ತಿದೆ.

ಒಂದೆಡೆ ವಿದ್ಯುತ್ ಕೊರತೆ ಹಾಗೂ ಇನ್ನೊಂದೆಡೆ ಬರದಿಂದ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಆದರೆ ಬೆಳಗಾವಿ ನಗರದಲ್ಲಿ ಶಾಸಕ ಫಿರೋಜ್ ಸೇಠ ಅವರ ಹೆಸರಿನಲ್ಲಿ ಷೋಕಿಗಾಗಿ ಕಿಕ್ರೆಟ್ ಟೂರ್ನಿ ಆಯೋಜಿಸುವ ಮೂಲಕ ಅಮೂಲ್ಯವಾದ ವಿದ್ಯುತ್ ಅನ್ನು ಅಪವ್ಯಯ ಮಾಡಲಾಗುತ್ತಿದೆ.

ನಗರದ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಫೆ.19 ರಿಂದ ಆರಂಭವಾಗಿರುವ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಗಾಗಿ 15 ದಿನಗಳ ಕಾಲ ತಾತ್ಕಾಲಿಕ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. 50 ಕಿಲೋ ವ್ಯಾಟ್‌ಗಾಗಿ ಅನುಮತಿ ನೀಡಲಾಗಿದ್ದು, ಆಯೋಜಕರಿಂದ 33,750 ರೂಪಾಯಿ ಭರಿಸಿಕೊಳ್ಳಲಾಗಿದೆ.ರಾಜ್ಯದಾದ್ಯಂತ ಇರುವ ವಿದ್ಯುತ್ ಸಮಸ್ಯೆ ಜಿಲ್ಲೆಯಲ್ಲಿಯೂ ಇದೆ. ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿದೆ. ಪಂಪ್‌ಸೆಟ್‌ಗಳಿಗೆ `ತ್ರಿಫೇಸ್~ ವಿದ್ಯುತ್ ಸರಿಯಾಗಿ ನೀಡದ ಕಾರಣ ಬೆಳೆಗಳು ಒಣಗಿ ಹೋಗುತ್ತಿವೆ.

ಕುಡಿಯುವ ನೀರು ಪೂರೈಸುವ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಸರಿಯಾಗಿ ಸರಬರಾಜಾಗುತ್ತಿಲ್ಲ. ಪರೀಕ್ಷೆಗಳು ಹತ್ತಿರ ಬಂದಿದ್ದರೂ ಸಂಜೆ ವೇಳೆಯಲ್ಲಿ ಎರಡು ಗಂಟೆ ಕಾಲ  ವಿದ್ಯುತ್ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ.
ಮಕ್ಕಳಿಗೆ ಓದಲಿಕ್ಕೆ ವಿದ್ಯುತ್ ಒದಗಿಸಲು ಆಗುತ್ತಿಲ್ಲ. ಅಂತಹದರಲ್ಲಿ ಆಟಕ್ಕೆ ಬಳಸಲಾಗುತ್ತದೆ. ಜನರ ಹಿತದ ಬಗೆಗೆ ಚಿಂತನೆ ನಡೆಸದೇ ಓಟಿಗಾಗಿ ಟೂರ್ನಿ ಆಯೋಜಿಸಲಾಗಿದೆ. ಬೆಟ್ಟಿಂಗ್ ಸಹ ಜೋರಾಗಿ ನಡೆದಿದ್ದು, ಪ್ರತಿ ಬಾಲ್‌ಗೂ ಹಣ ಕಟ್ಟಲಾಗುತ್ತಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎನ್ನುತ್ತಾರೆ ಪಾಲಿಕೆ ಮಾಜಿ ಸದಸ್ಯ ಲತೀಫ್‌ಖಾನ್ ಪಠಾಣ.

ವಿದ್ಯುತ್ ಸಮಸ್ಯೆ ಇರುವುದು ನಿಜ. ಆದರೆ ಖಾಸಗಿ ಕಾರ್ಯಕ್ರಮವೊಂದಕ್ಕೆ ವಿದ್ಯುತ್ ಬೇಕು ಎಂದು ಅರ್ಜಿ ಸಲ್ಲಿಸಿದಾಗ ಅನಮತಿ ನೀಡಬೇಕಾಗುತ್ತದೆ ಎನ್ನುತ್ತಾರೆ ಹೆಸ್ಕಾಂ ಬೆಳಗಾವಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಟಿ.ಬಿ. ಮಜ್ಜಗಿ.

ಮೈದಾನ ದುರ್ಬಳಕೆ: ಇದು ಮೂಲತಃ ಪಕ್ಕದಲ್ಲಿಯೇ ಇರುವ ಸರ್ದಾರ್ ಪ್ರೌಢಶಾಲೆಗೆ ಸೇರಿದ ಮೈದಾನವಾಗಿದೆ. ಆ ಶಾಲೆಯ ಮಕ್ಕಳ ಉಪಯೋಗಕ್ಕಾಗಿ ಇದೆ. ಆದರೆ ಇಲ್ಲಿ ಆ ಶಾಲೆ ಮಕ್ಕಳಿಗಿಂತ ಖಾಸಗಿಯವರು ಆಯೋಜಿಸುವ ಕ್ರೀಡೆಗಳಿಗೇ ಹೆಚ್ಚಿಗೆ ಬಳಸಲಾಗುತ್ತದೆ.

ಸಂಚಾರ ಸಮಸ್ಯೆ: ನಗರದ ಹೃದಯಭಾಗದಲ್ಲಿರುವ ಮೈದಾನವನ್ನು ಕ್ರಿಕೆಟ್ ಟೂರ್ನಿ ಆಯೋಜನೆಗೆ ನೀಡುವುದರಿಂದ ಸಂಚಾರ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿದೆ. ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲ. ಹೀಗಾಗಿ ಕಾಲೇಜ್ ರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತದೆ.

ಬೆಟ್ಟಿಂಗ್: ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಜನರು ಸೇರಿರುತ್ತಾರೆ. ರಾಜಕಾರಣಿಗಳು ಇಲ್ಲಿ ಕ್ರಿಕೆಟ್ ಆಯೋಜಿಸಲು ಅದು ಒಂದು ಕಾರಣ. ಆದರೆ ಸಾಕಷ್ಟು ಜನರು ಕ್ರಿಕೆಟ್ ವೀಕ್ಷಣೆಗಿಂತ ಬೆಟ್ಟಿಂಗ್ ಆಡಲು ಆಗಮಿಸುತ್ತಾರೆ.

ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಅಧಿವೇಶನ ಹಾಗೂ ಹೊರಗಡೆ ಹೋರಾಟ ಮಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್ ಶಾಸಕರೇ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT