ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರನ್ನು ತರಾಟೆಗೆ ತೆಗೆದುಕೊಂಡ ರೈತರು

Last Updated 3 ಜುಲೈ 2013, 6:17 IST
ಅಕ್ಷರ ಗಾತ್ರ

ರಾಮನಗರ: ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುವ ಸಂಬಂಧ ಶಾಸಕರು ರಾಮನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ಜನಸ್ಪಂದನ' ಸಭೆಯಲ್ಲಿ ರೈತರು ಅಧಿಕಾರಿಗಳಿಂದ ತಮಗಾಗುತ್ತಿರುವ ತೊಂದರೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

`ಸಭೆಗಳಲ್ಲಿ ಜನರ ಮುಂದೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಶಾಸಕರು ಅತ್ತ ಹೋದ ಮೇಲೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕವಡೆ ಕಾಸಿನ ಬೆಲೆ ನೀಡುವುದಿಲ್ಲ. ಇದರಿಂದಾಗಿ ಸಭೆಗೆ ಬಂದು ನಮ್ಮ ಸಮಸ್ಯೆ ಹೇಳಿಕೊಳ್ಳಲು ಬೇಸರವಾಗುತ್ತಿದೆ' ಎಂದು ಹಲವು ರೈತರು ಶಾಸಕರ ಎದುರು ತಮ್ಮ ಅಸಮಾಧಾನ ಹೊರಹಾಕಿದರು.

ತಾಲ್ಲೂಕು ಕಚೇರಿಯಲ್ಲಿ ಪಹಣಿ ಪಡೆಯಲು, ಖಾತೆ ಮಾಡಿಸಲು, ಜಮೀನಿನ ಸರ್ವೆ ಮಾಡಿಸಲು, ಹೆಸರು ತಿದ್ದುಪಡಿ ಮಾಡಲು, ವಿವಿಧ ಇಲಾಖೆಗಳಿಂದ ಸರ್ಕಾರಿ ಸವಲತ್ತು ಪಡೆಯಲು, ವೃದ್ಧಾಪ್ಯ, ವಿಧವಾ ವೇತನ ಮಂಜೂ ರು ಮಾಡಿಸುವುದೂ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಲಂಚ ನೀಡಬೇಕಾಗಿದೆ. ಈ ಎಲ್ಲ ವಿಷಯಗಳು ಗೊತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿರುವುದು ಏಕೆ ? ಎಂದು ರೈತರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, `ಅಧಿಕಾರಿಗಳು ಹಣದ ಆಸೆಯಿಂದ ನಕಲಿ ಪಹಣಿಗಳನ್ನು ಸೃಷ್ಟಿಸಬಾರದು. ಈಗಾಗಲೇ ರೈತರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ತಾವು ಮಾಡುವ ಕೆಲಸನ್ನು ಶಾಸಕರ ಗಮನಕ್ಕೆ ತರಬೇಕು. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ಪಿಂಚಣಿ ಆಂದೋಲನವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಪಿಂಚಣಿ ರದ್ದಾಗಿರುವವರಿಗ ಹಾಗೂ ಅರ್ಹರಿಗೆ ಪಿಂಚಣಿಯನ್ನು ಮಾಡಿಕೊಡಬೇಕು' ಎಂದು ತಿಳಿಸಿದರು.

`ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಜತೆಗೆ ನಿಯಮಗಳ ಪ್ರಕಾರ ಕೆಲಸವನ್ನು ಮಾಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮುಖ್ಯತೆ ನೀಡಬೇಕು. ಸರ್ವೆ ಇಲಾಖೆಯ ಅಧಿಕಾರಿಗಳು ತಾವು ಸರ್ವೆ ಮಾಡುವ ಪಟ್ಟಿಯನ್ನು ಇಲಾಖೆಯ ನಾಮಫಲಕದಲ್ಲಿ ಪ್ರಕಟಿಸಬೇಕು ಎಂದು ಹಲವು ಬಾರಿ ಸೂಚಿಸಿದರೂ ಆ ಕೆಲಸ ಆಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ತಿಂಗಳ ಮೊದಲನೇ ಮಂಗಳವಾರ ಜನಸ್ಪಂದನ ಸಭೆ ಕರೆಯಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಎನ್. ಭಾನುಮತಿ, ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ತಹಶೀಲ್ದಾರ್ ವಿ. ಹನುಮಂತರಾಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT