ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಗೆ `ಮನೆ ಪ್ರವೇಶ' ಸಂಭ್ರಮ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ: ಘಮಘಮಿಸುವ ಮಲ್ಲಿಗೆ ಮತ್ತು ಕನಕಾಂಬರ ಹೂವುಗಳಿಂದ ಅಲಂಕೃತವಾಗಿದ್ದ ಸುವರ್ಣ ವಿಧಾನ ಸೌಧದಲ್ಲಿ ಬುಧವಾರ ಶಾಸಕರ ಪಾಲಿಗೆ `ಮನೆ ಪ್ರವೇಶ'ದ ಸಂಭ್ರಮ. ಥೇಟ್ ವಿಧಾನ ಸೌಧದಂತೆ ಕಂಡರೂ ಈ ಕಟ್ಟಡದಲ್ಲಿ ಒಳಗೆ ಏನೇನಿದೆ ಎಂಬುದನ್ನು ಕಣ್ಣಾರೆ ಕಾಣುವ ಕುತೂಹಲ.

ಉತ್ತರ ಕರ್ನಾಟಕದ ಶಾಸಕರಂತೂ `ನಮ್ ಸುವರ್ಣ ಸೌಧ ಇವತ್ತ ಖರೇವಂದ್ರ ಉದ್ಘಾಟನೆ ಆದ್ಹಂಗ ಆತು' ಎಂದು ಸಂಭ್ರಮಿಸುತ್ತಿದ್ದರು. ಹಲವು ಕಚೇರಿಗಳಲ್ಲಿ ವಿಶೇಷ ಪೂಜೆಗಳೂ ನಡೆದವು. `ಇಲ್ಲದ ರಗಳೆ ನಮಗೇಕೆ ಸಾರ್, ಪೂಜೆಯನ್ನು ತುಂಬಾ ಸಂಕ್ಷಿಪ್ತವಾಗಿ ಮಾಡಿದ್ದೇವೆ' ಎನ್ನುವುದು ಕೆಲ ಕಚೇರಿಗಳ ಸಿಬ್ಬಂದಿ ವಿವರಣೆಯಾಗಿತ್ತು.

ಎಲ್ಲೆಲ್ಲಿ ಏನೇನಿದೆ ಎಂಬುದನ್ನು ನೋಡಲು ಶಾಸಕರು ಗುಂಪು-ಗುಂಪಾಗಿ ಸೌಧವನ್ನು ಸುತ್ತುತ್ತಿದ್ದರು. ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಹಾಯಕರಿಗೆ ತಮ್ಮ `ಸಾಹೇಬರ' ಕಚೇರಿ ಹುಡುಕಲು ಆಗದೆ, ಸೌಧದ ಮೊಗಸಾಲೆಯಲ್ಲೇ ಗಿರಕಿ ಹೊಡೆಯುತ್ತಿದ್ದರು. ಮೊಬೈಲ್‌ಗಳು ಎಡೆಬಿಡದೆ ಮೊಳಗುತ್ತಿದ್ದವು. ಮಾರ್ಗಸೂಚಿ ಸಂದೇಶಗಳು ಸಿಕ್ಕರೂ ಕಚೇರಿ ಹುಡುಕಾಟಕ್ಕೆ ಪರಿತಾಪ ನಡೆದೇ ಇತ್ತು.

ಸಿಬ್ಬಂದಿ ವರ್ಗ ತಮ್ಮ ಕಚೇರಿ ಹುಡುಕಲು ಪರದಾಟ ನಡೆಸಿದರೆ, ಪ್ರೇಕ್ಷಕರು ಗ್ಯಾಲರಿ ಶೋಧಿಸಲು ತಿಣುಕಾಡಿದರು. ಅಲ್ಲಲ್ಲಿ ನಾಮಫಲಕಗಳನ್ನು ಹಾಕಲಾಗಿದ್ದರೂ ಅವುಗಳನ್ನು ಪತ್ತೆ ಹಚ್ಚುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.

ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಎಂ.ಸಿ. ನಾಣಯ್ಯ, `ಕೊನೆಗೂ ನಿಮ್ಮದೊಂದು ವಿಧಾನಸೌಧವನ್ನ ಬೇರೆ ಮಾಡಿಕೊಂಡು ಬಿಟ್ಟಿರಲ್ಲ' ಎಂದು ಉತ್ತರ ಕರ್ನಾಟಕದ ಶಾಸಕರನ್ನು ಕಾಡಿದರೆ, `ಇದೇ ಖುಷಿಯಲ್ಲಿ ಪಾರ್ಟಿ ಕೊಡಿಸ್ತೀವಿ ಬಿಡಿ ಸಾರ್' ಅವರು ಉತ್ತರಿಸುತ್ತಿದ್ದರು. ಅಕ್ಕ-ಪಕ್ಕದ ಜಿಲ್ಲೆಗಳ ಕೆಲವು ಶಾಸಕರು ತಮ್ಮ ಕುಟುಂಬದ ಸದಸ್ಯರನ್ನು ಸೌಧ ತೋರಿಸಲು ಕರೆತಂದಿದ್ದರು.

ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಧ್ಯಕ್ಷರ ಪೀಠಗಳಂತೂ ಮಲ್ಲಿಗೆ ಮಾಲೆಗಳಿಂದ ತುಂಬಿಹೋಗಿದ್ದವು. ಸಭಾಂಗಣದಲ್ಲಿ ಮಾಡಲಾಗಿದ್ದ ವ್ಯವಸ್ಥೆಗೆ ಎಲ್ಲ ಶಾಸಕರೂ ಮಾರು ಹೋಗಿದ್ದರು. ಆಧುನಿಕ ತಂತ್ರಜ್ಞಾನದ ಧ್ವನಿವರ್ಧಕ ಸೌಲಭ್ಯವೂ ಗಮನಸೆಳೆಯಿತು.

ಅವರೇ ಇರಲಿಲ್ಲ!
ಬೆಳಗಾವಿಯಲ್ಲಿ ಭವ್ಯ ಸುವರ್ಣಸೌಧ ನಿರ್ಮಾಣವಾಗಲು ಕಾರಣವಾಗಿದ್ದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ. ಸದ್ಯ ಕುಮಾರಸ್ವಾಮಿ ಸಂಸದರಾದರೆ, ಯಡಿಯೂರಪ್ಪ ಮಾಜಿ ಶಾಸಕ. ಹೀಗಾಗಿ ಇಬ್ಬರಿಗೂ ಈ ಸೌಧದ ಮೊದಲ ಕಲಾಪಕ್ಕೆ ಸಾಕ್ಷಿಯಾಗುವ ಅದೃಷ್ಟ ಸಿಗಲಿಲ್ಲ. 

ಮೊಳಗಿದ ವಂದೇ ಮಾತರಂ: ಸುವರ್ಣ ವಿಧಾನ ಸೌಧದಲ್ಲಿ `ಗೃಹ ಪ್ರವೇಶ'ದ ಸಂಭ್ರಮದ ದ್ಯೋತಕವಾಗಿ ವಂದೇ ಮಾತರಂ ಗೀತೆ ಮೊಳಗಿತು. ದೋತರ, ಜುಬ್ಬಾ ಹಾಗೂ ಗಾಂಧಿ ಟೋಪಿ ಧರಿಸಿದ್ದ ಉತ್ತರ ಕರ್ನಾಟಕದ ಜನ ಕುತೂಹಲದಿಂದ ಎರಡೂ `ಮನೆ'ಗಳ ಕಲಾಪವನ್ನು ವೀಕ್ಷಿಸಿದರು.

ಸೌಧವನ್ನು ಏನು ಮಾಡುವುದು?
ಕಲಾಪ ಮುಗಿದ ಮೇಲೆ ಸುವರ್ಣ ವಿಧಾನಸೌಧವನ್ನು ಏನು ಮಾಡಬೇಕು ಎನ್ನುವ ಪ್ರಶ್ನೆಯೂ ಹಲವರನ್ನು ಕಾಡಿತು. `ರೂ 389 ಕೋಟಿ ಖರ್ಚು ಮಾಡಿದ ಕಟ್ಟಡ ಅಧಿವೇಶನ ಮುಗಿದ ಮೇಲೆ ಹಾಳು ಸುರಿಯಬೇಕೇ' ಎನ್ನುವ ಪ್ರಶ್ನೆ ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಅವರನ್ನು ಕಾಡಿತು. ಈ ಪ್ರಶ್ನೆಯ ಬಾಣವನ್ನು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರತ್ತ ತೂರಿಬಿಟ್ಟರು ಕೂಡ.

`ಸರ್ಕಾರದ ಸಭೆ-ಸಮಾರಂಭಗಳನ್ನು ಈ ಕಟ್ಟಡದಲ್ಲಿ ನಡೆಸಲು ಚಿಂತನೆ ಮಾಡಿದ್ದೇವೆ. ವಿಭಾಗಮಟ್ಟದ ಕಚೇರಿಗಳನ್ನು ಇದೇ ಕಚೇರಿಗೆ ಸ್ಥಳಾಂತರಿಸುವ ಯೋಚನೆಯೂ ಇದೆ' ಎಂಬುದು ಉದಾಸಿ ಅವರ ಉತ್ತರವಾಗಿತ್ತು. ರಾಜ್ಯಮಟ್ಟದ ಕೆಲವು ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬುದು ಕಾಂಗ್ರೆಸ್ ಸದಸ್ಯರ ಆಗ್ರಹವಾಗಿತ್ತು. ಸೌಧ ಮಾತ್ರ ಮೊದಲ ಕಲಾಪ ಕಂಡ ಸಡಗರದಲ್ಲಿ ಮುಳುಗಿಹೋಗಿತ್ತು.

ಗೋಧಿ ಹುಗ್ಗಿ, ಕುಡಿಕೆ ಮೊಸರು...
ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಎಣಗಾಯಿ ಪಲ್ಯ, ಗೋಧಿ ಹುಗ್ಗಿ, ಕುಂದಾ, ಕುಡಿಕೆ ಮೊಸರು, ಜೊತೆಗೆ ಹಳೇ ಮೈಸೂರಿನ ರಾಗಿಮುದ್ದೆ, ಬಸ್ಸಾರು ...

ಬಾಯಲ್ಲಿ ನೀರೂರಿತೆ? ಇದು ವಿಧಾನ ಮಂಡಲ ಅಧಿವೇಶನದಲ್ಲಿ ಪಾಲ್ಗೊಂಡ ಶಾಸಕರಿಗೆ ಮೊದಲ ದಿನದ ಮಧ್ಯಾಹ್ನ ಊಟದ `ಮೆನು'. ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಚಿವರು-ಶಾಸಕರು ಹಾಗೂ ಬಫೆಟ್ ಹಾಲ್‌ನಲ್ಲಿ ಅಧಿಕಾರಿಗಳು, ಸಚಿವಾಲಯದ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿಯ ಊಟವನ್ನು ಹಳೇ ಮೈಸೂರು ಭಾಗದ ಶಾಸಕರೂ ಸೇರಿದಂತೆ ಗಣ್ಯರು ಬಾಯಿ ಚಪ್ಪರಿಸುತ್ತಾ ಸವಿದರು. ಕುಡಿಕೆಯಲ್ಲಿನ ಗಟ್ಟಿ ಮೊಸರು ಭಾರಿ ಬೇಡಿಕೆ ಗಿಟ್ಟಿಸಿತು.

ಬ್ಯಾಂಕ್ವೆಟ್ ಸಭಾಂಗಣದಲ್ಲಿ 350 ಜನರಿಗೆ ಆಸನ ಕಲ್ಪಿಸಲಾಗಿತ್ತು. ಒಟ್ಟಾರೆ 2,500 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. 16 ಬಾಣಸಿಗರು, 50 ಜನ ಸಹಾಯಕರು ಸುವರ್ಣ ವಿಧಾನಸೌಧದ ಆವರಣದಲ್ಲೇ ತಾತ್ಕಾಲಿಕವಾಗಿ ತೆರೆಯಲಾದ ಅಡುಗೆ ಕೋಣೆಯಲ್ಲಿ ಊಟವನ್ನು ಸಿದ್ಧಪಡಿಸಿದ್ದರು. ಬೆಳಗಾವಿಯ ಸಂಕಮ್ ಕೇಟರರ್ಸ್‌ ಸಂಸ್ಥೆ ಊಟದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT