ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರೊಂದಿಗೆ ಮುಖಂಡರ ವಾಗ್ವಾದ; ಗೊಂದಲ

Last Updated 6 ಜುಲೈ 2012, 7:35 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟಜಾತಿ, ವರ್ಗದ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರೊಬ್ಬರ ಮಾತಿನಿಂದ ಬೇಸರಗೊಂಡು ಶಾಸಕ ಸಿ.ಎಸ್. ಪುಟ್ಟೇಗೌಡ ಸಭೆಯಿಂದ ಹೊರನಡೆಯಲು ಮುಂದಾದ ಘಟನೆ ಗುರುವಾರ ನಡೆಯಿತು.

 ಪರಿಶಿಷ್ಟ ವರ್ಗದ ಏಳಿಗೆಗೆ ಮೀಸಲಿರುವ ಶೇ  22.75 ಅನುದಾನವನ್ನು ಗ್ರಾಮಪಂಚಾಯಿತಿ ಸಮರ್ಪಕ ಬಳಕೆಮಾಡುತ್ತಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯುತ್ತಿತ್ತು. ಆಗ ಮಾತನಾಡಿದ ದಲಿತ ಮುಖಂಡ ರಂಗಪ್ಪ, ಈ ಹಿಂದಿನಿಂದಲೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಪರಿಶಿಷ್ಟರ ಅಭಿವೃದ್ಧಿಗೆ ಶ್ರಮಿಸಿಲ್ಲ. ಕಾರ್ಯದರ್ಶಿಗಳ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳುತಿಲ್ಲ. ಆರು ತಿಂಗಳಿಂದ ಶಾಸಕರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಭೆ ಕರೆದಿಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಸಭೆ ಕರೆಯುವ ಅಧಿಕಾರ ಮೇಲಾಧಿಕಾರಿಗಳಿಗಿದೆಯೋ ಹೊರತು ನನಗಿಲ್ಲ  ಎಂದರು.

 ಆಗ ಮತ್ತೆ ರಂಗಪ್ಪ ಏನೋ ಮಾತನಾಡಲು ಮುಂದಾದರು. ಇದರಿಂದ ಮತ್ತಷ್ಟು ಸಿಟ್ಟಾದ ಶಾಸಕರು, ಎದ್ದು ನಿಂತು ನೀವೇ ಬಂದು ಈ ಸೀಟಿನಲ್ಲಿ ಕುಳಿತುಕೊಂಡು ಸಮಸ್ಯೆ ಬಗೆಹರಿಸಿ. `ನಾನು~ ಹೊರ ನಡೆಯುತ್ತೇನೆ ಎಂದು ಸಭೆಯಿಂದ ಹೊರನಡೆಯಲು ಮುಂದಾದರು. ಅಷ್ಟರಲ್ಲಿ ಕೆಲಮುಖಂಡರು ಅವರ ಮನವೊಲಿಸಿ ವಾಪಸ್ ಕರೆತಂದರು.

ದಲಿತ ಮುಖಂಡ ಸಿ.ಎನ್. ಮಂಜುನಾಥ್ ಮಾತ ನಾಡಿ, ಶಾಸಕರು ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಭೆಯಲ್ಲಿ ಈ ರೀತಿ ಗೊಂದಲ ನಿರ್ಮಾಣವಾಗುತ್ತದೆ ಎಂದರು.

 ಈ ಬಗ್ಗೆ ಕೂಲಂಕಶವಾಗಿ ಚರ್ಚಿಸಲು ಇನ್ನೂ 15ದಿನದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಗ್ರಾಮಪಂಚಾಯಿತಿ ವತಿಯಿಂದ ಪರಿಶಿಷ್ಟಜಾತಿ, ವರ್ಗದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವಾಗ ಹಣ ದುರುಪಯೋಗವಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳು, ಕಂಪ್ಯೂಟರ್ ತರಬೇತಿ ನೀಡುವ ಸಂಸ್ಥೆ ಶಾಮೀಲಾಗಿ ಹಣ ಲಪಟಾಯಿಸುತ್ತಿವೆ. ಇವರು ಪ್ರಮಾಣ ಪತ್ರ ವಿತರಿಸಿರುವ ಒಬ್ಬನೇ ಒಬ್ಬ ವ್ಯಕ್ತಿಯಿಂದ ಕಂಪ್ಯೂಟರ್ ಆಪರೇಟ್ ಮಾಡಿಸಲಿ ಎಂದು ಮುಖಂಡ ಅಲದಹಳ್ಳಿ ವೆಂಕಟೇಶ್ ಸವಾಲು ಹಾಕಿದರು.

 ಕಬ್ಬಳಿ ಗ್ರಾಮಪಂಚಾಯಿತಿ ವತಿಯಿಂದ ದಲಿತರಿಗೆ ಗುದ್ದಲಿಗಳನ್ನು ಮಾತ್ರ ವಿತರಿಸಲಾಗಿದೆ. ಇದನ್ನು ಕೊಳ್ಳಲು ದಲಿತರಿಗೆ ಸಾಮರ್ಥ್ಯವಿಲ್ಲವೇ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇದಕ್ಕೆ ಅನುಮೋದನೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮುಖಂಡ ಎನ್.ಬಿ. ಮಂಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

 ಕಬ್ಬಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಸದಸ್ಯರ ಮಾತನ್ನು ಕೇಳುತ್ತಿಲ್ಲ. ಸಭೆಗೆ ಗೈರು ಹಾಜರಾದ ಪಂಚಾಯಿತಿ ಅಭಿವೃದ್ಧಿ ಅವರನ್ನು ಕರೆಸುವಂತೆ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ನಿಂಗರಾಜಪ್ಪ ದೂರವಾಣಿ ಮೂಲಕ ಪಿಡಿಒ ಅವರನ್ನು ಸಂಪರ್ಕಿಸಿ ಸಭೆಗೆ ಆಗಮಿಸಬೇಕು ಎಂದು ಹೇಳಿದರಾದರು ಸಭೆ ಮುಗಿಯುವರೆಗೆ ಪಿಡಿಒ ಅತ್ತ ತಲೆ ಹಾಕಲಿಲ್ಲ.
 ಮೈಸೂರು ರಸ್ತೆಯಲ್ಲಿನ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದು ತರವಲ್ಲ. ಮಿನಿವಿಧಾನ ಸೌಧದ ಆವರಣದಲ್ಲಿ ಪ್ರತಿಮೆ ಅನಾವರಣ ಮಾಡುವುದು ಒಳಿತು ಎಂದು ಮುಖಂಡ ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಎನ್. ನಾಗೇಶ್, ಮೈಸೂರು ರಸ್ತೆಯಲ್ಲಿನ ವೃತ್ತದಲ್ಲಿ ಪ್ರತಿಮೆ ಪ್ರತಿಷ್ಟಾಪಿಸುವುದು ಶತಸಿದ್ಧ ಎಂದರು.
 ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ, ಪುರಸಭಾಧ್ಯಕ್ಷೆ ಗೀತ ಅವಿನಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಕುಂಟೆ, ತಹಶೀಲ್ದಾರ್ ಎಚ್.ಎಸ್. ಸತೀಶ್‌ಬಾಬು, ಸಮಾಜಕಲ್ಯಾಣಾಧಿಕಾರಿ ಡಾ. ಹೇಮಲತಾ, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್. ಬಸವರಾಜು, ಇನ್ಸ್‌ಪೆಕ್ಟರ್ ಎ. ಮಾರಪ್ಪ  ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT