ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಾಂಗ ಸಭೆಗೆ ಬಿಎಸ್‌ವೈ ಬಣ ಆಗ್ರಹ

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಕುರಿತು ಮುಕ್ತವಾಗಿ ಚರ್ಚಿಸಲು ವಿಶೇಷವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಶಾಸಕರು ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಒತ್ತಾಯಿಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸೋಮವಾರ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ರಾತ್ರಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು.

ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಶೇಷ ಸಭೆಯ ನಡೆಸಬೇಕೆಂಬ ತಮ್ಮ ಹಿಂದಿನ ಬೇಡಿಕೆಯನ್ನು ಮತ್ತೆ ಮುಂದಿಟ್ಟರು. ಶಾಸಕರಾದ ಬಿ.ಪಿ.ಹರೀಶ್, ಎಸ್.ಆರ್.ವಿಶ್ವನಾಥ್, ಬಿ.ಸುರೇಶ್ ಗೌಡ, ಚಂದ್ರಶೇಖರ್ ಮಾಮನಿ ಮತ್ತಿತರರೂ ದನಿಗೂಡಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

`ನೀವು ಅಧಿಕಾರ ಸ್ವೀಕರಿಸಿದ ಬಳಿಕ ಒಮ್ಮೆಯೂ ಶಾಸಕಾಂಗ ಪಕ್ಷದ ಸಭೆ ನಡೆಸಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾದ ಹಲವು ವಿಷಯಗಳಿವೆ. ಅದಕ್ಕಾಗಿ ಶಾಸಕಾಂಗ ಪಕ್ಷದ ವಿಶೇಷ ಸಭೆ ಕರೆಯಿರಿ. ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವವರೇ ಸಚಿವರು, ಶಾಸಕರ ಕುರಿತು ಬಹಿರಂಗವಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ. ಶಾಸಕರ ಬೇಡಿಕೆಗಳೂ ಬಹಳಷ್ಟಿವೆ. ಈ ಎಲ್ಲದರ ಬಗ್ಗೆ ಮುಕ್ತವಾಗಿ ಚರ್ಚೆ ಆಗಬೇಕು. ಶೀಘ್ರದಲ್ಲಿ ಸಭೆ ಕರೆಯಿರಿ~ ಎಂದು ಈ ಗುಂಪು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ ಎನ್ನಲಾಗಿದೆ.

ಕ್ಷೇತ್ರದ ಅಭಿವೃದ್ಧಿ ವಿಷಯ, ಅಧಿಕಾರಿಗಳ ವರ್ಗಾವಣೆಯಲ್ಲಿ ಶಾಸಕರ ಶಿಫಾರಸಿಗೆ ಮಾನ್ಯತೆ ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಯಬೇಕಿದೆ. ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಶಾಸಕರ ಮಾತಿಗೆ ಸರ್ಕಾರದಲ್ಲಿ ಮಾನ್ಯತೆ ದೊರೆಯಬೇಕು. ಈ ಹಿನ್ನೆಲೆಯಲ್ಲಿ ತಡಮಾಡದೇ ಸಭೆ ಕರೆಯಬೇಕು ಎಂದು ಆಗ್ರಹಿಸಿದರು ಎಂದು ಗೊತ್ತಾಗಿದೆ.

ದಾಳಿ ಕುರಿತೂ ಪ್ರಸ್ತಾಪ: ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ರಾಜರಾಜೇಶ್ವರಿನಗರ ಶಾಸಕ ಎಂ.ಶ್ರೀನಿವಾಸ್, ಶಾಸಕರ ವಿರುದ್ಧ ಖಾಸಗಿ ದೂರುಗಳು ದಾಖಲಾಗುತ್ತಿರುವುದು, ಲೋಕಾಯುಕ್ತ ಪೊಲೀಸರ ದಾಳಿ, ತನಿಖೆ ಮತ್ತಿತರ ವಿಷಯ ಪ್ರಸ್ತಾಪಿಸಿದರು. ಸರ್ಕಾರದಿಂದ ಶಾಸಕರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂಬ ಅಸಮಾಧಾನವನ್ನೂ ಹೊರಹಾಕಿದರು.

ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮುಖ್ಯಮಂತ್ರಿಯವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದು ಸೂಚಿಸಿದರು. ಈ  ಕುರಿತು ಪ್ರತ್ಯೇಕವಾಗಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು ಎಂದರು.

ಸಭೆಗೆ ಸಿದ್ಧ: ಸಿಎಂ
ಶಾಸಕರ ಬೇಡಿಕೆಗೆ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ ಸದಾನಂದ ಗೌಡ, `ಶಾಸಕಾಂಗ ಪಕ್ಷದ ಸಭೆ ಕರೆಯಲು ನಾನು ಸಿದ್ಧ. ಪರಿಷತ್ ಚುನಾವಣೆ ಮುಗಿದ ಬಳಿಕ ಪಕ್ಷದ ವರಿಷ್ಠರ ಅನುಮತಿ ಪಡೆದು ಸಭೆ ನಡೆಸುತ್ತೇನೆ. ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಕ್ರಮ ಕೈಗೊಳ್ಳುತ್ತೇನೆ. ವರ್ಗಾವಣೆ ಸೇರಿದಂತೆ ಯಾವುದೇ ವಿಷಯದಲ್ಲೂ ಸರ್ಕಾರ ಶಾಸಕರ ಮಾತನ್ನು ಕಡೆಗಣಿಸುವುದಿಲ್ಲ~ ಎಂದು ಭರವಸೆ  ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT