ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಾಂಗದ ಶ್ರೇಷ್ಠತೆ: ಪ್ರಣವ್ ಕಾಳಜಿ

Last Updated 11 ಅಕ್ಟೋಬರ್ 2012, 17:00 IST
ಅಕ್ಷರ ಗಾತ್ರ

ಬೆಳಗಾವಿ:`ಶಾಸನ ರಚನೆ, ಆಡಳಿತ ನಿರ್ವಹಣೆ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಕುರಿತು ಚರ್ಚಿಸಿ ಜನರ ಕುಂದು ಕೊರತೆಗಳನ್ನು ನಿವಾರಿಸಲು ಮೀಸಲಿರಿಸಬೇಕಾದ ಸದನದ ಅಮೂಲ್ಯ ಸಮಯ ಹಾಳಾಗದಂತೆ ಎಚ್ಚರ ವಹಿಸಬೇಕು~ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಲಹೆ ನಿಡಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಗುರುವಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರು, ಆಮಂತ್ರಿತ ಗಣ್ಯರನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

`ಪ್ರಜಾಪ್ರಭುತ್ವ ಸರಿಯಾಗಿ ಕಾರ್ಯನಿರ್ವಹಿಸುವ ದೊಡ್ಡ ಹೊಣೆಯನ್ನು ನಮ್ಮ ಸಂವಿಧಾನ ಶಾಸಕಾಂಗಕ್ಕೆ ನೀಡಿದೆ. ಶಾಸಕಾಂಗ ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಿದೆ. ಈ ಜವಾಬ್ದಾರಿಯನ್ನು ನಿಭಾಯಿಸಲು ಶಾಸಕಾಂಗ ಮೇಲಿಂದ ಮೇಲೆ ಸಭೆ ಸೇರಬೇಕು. ಸಮಿತಿಗಳಿಂದಾಗುವ ಕಾರ್ಯವನ್ನು ಅದೇ ಮಟ್ಟದಲ್ಲಿ ನಿರ್ಣಯಿಸಬೇಕು. ಮುಖ್ಯ ವಿಷಯಗಳನ್ನು ಶಾಸಕಾಂಗ ಅಧಿವೇಶನಗಳಲ್ಲಿ ಚರ್ಚಿಸಿ ನಿರ್ಣಯ ಕೈಕೊಳ್ಳಬೇಕು.

`ವರ್ಷದಲ್ಲಿ ಕನಿಷ್ಠ  20 ರಿಂದ 25 ವಾರಗಳ ಕಾಲ ಮೇಲಿಂದ ಮೇಲೆ ಅಧಿವೇಶನ ನಡೆಸಬೇಕು. ಇತ್ತೀಚಿನ ಶಾಸಕಾಂಗಗಳು ಅತಿ ಕಡಿಮೆ ಅಂದರೆ ಕೆಲವೇ ದಿನಗಳ ಅಧಿವೇಶನ ನಡೆಸುತ್ತಿವೆ. ಈ ಅಲ್ಪ ಕಾಲದ ಅಧಿವೇಶನಗಳು ಮೇಲಿಂದ ಮೇಲೆ ಗಲಾಟೆಗಳಲ್ಲೇ ಮುಕ್ತಾಯಗೊಳ್ಳುತ್ತಿವೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಸದನದಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಪಕ್ಷದವರು ಆಡಳಿತ ನಡೆಸುತ್ತಾರೆ. ಪ್ರತಿಪಕ್ಷದವರು ಸರ್ಕಾರದ ತಪ್ಪುಗಳನ್ನು ವಿರೋಧಿಸುತ್ತಾರೆ, ಹಗರಣಗಳನ್ನು ಬಯಲಿಗೆಳೆಯುತ್ತಾರೆ ಅಥವಾ ಸರ್ಕಾರವನ್ನೇ ಹೊರಹಾಕುತ್ತಾರೆ ಎಂಬುದೇ ಪ್ರಜಾಪ್ರಭುತ್ವದ ಮೂಲ ತತ್ವ ಎನಿಸಿದೆಯಾದರೂ, ಕಲಾಪಕ್ಕೆ ಅಡಚಣೆ ಉಂಟುಮಾಡುವುದು ಪರಿಣಾಮಕಾರಿ ಸಂಸದೀಯ ಅಸ್ತ್ರವಲ್ಲ~ ಎಂದರು.

ಚುನಾಯಿತ ಸಂಸತ್ತು ಮತ್ತು ಶಾಸನ ಸಭೆ ಪ್ರಜಾಪ್ರಭುತ್ವದ ನೈಜ ರೂಪ. ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಸರ್ಕಾರ ಮುನ್ನಡೆಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ.  ಜನಪ್ರತಿನಿಧಿಗಳು  ಅನುಕರಣೀಯ, ಉತ್ತಮ ಹಾಗೂ ಜವಾಬ್ದಾರಿಯುತ ನಡವಳಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು. ತಾವು ಸಾರ್ವಜನಿಕರ ಧರ್ಮದರ್ಶಿಗಳು ಎಂಬುದನ್ನು ಶಾಸಕರು ಸದಾ ಕಾಲ ಸ್ಮರಿಸಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಮೊಟ್ಟಮೊದಲ ಆಯವ್ಯಯ ಕೇವಲ 293 ಕೋಟಿ ರೂಪಾಯಿ ಆಗಿತ್ತು. ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಮುನ್ನ ಕೇಂದ್ರ ಹಣಕಾಸು ಸಚಿವರಾಗಿ ತಾವು ಮಂಡಿಸಿದ ಆಯವ್ಯಯ 12 ಲಕ್ಷ ಕೋಟಿ ರೂಪಾಯಿ ಆಗಿತ್ತು.

ಭಾರತೀಯ ಸಂಸದೀಯ ವಿಶ್ಲೇಷಣಾ ವರದಿಗಳ ಪ್ರಕಾರ ಆಯವ್ಯಯದ ಮೇಲಿನ ಚರ್ಚೆಗೆ ಮೊದಲು ಶೇ. 60 ರಷ್ಟು ಸಮಯ ಬಳಕೆಯಾಗುತ್ತಿತ್ತು. ಆದರೆ ಇದೀಗ ಚರ್ಚಾ ಸಮಯದ ಅವಧಿ ಶೇ 10 ಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ನಾಗರಿಕ ಸ್ನೇಹಿ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ `ಸಕಾಲ~ ಕುರಿತೂ ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT