ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನತಜ್ಞ ಗಣೇಶ್‌ಗೆ ಸನ್ಮಾನ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕರ್ನಾಟಕ ಇತಿಹಾಸ ಕ್ಷೇತ್ರದಲ್ಲಿ ಇಂದು ಶಾಸನತಜ್ಞರೆಸಿಕೊಂಡಿರುವ ಕೆಲವೇ ಮಂದಿಯಲ್ಲಿ ಡಾ. ಕೈದಾಳ ರಾಮಸ್ವಾಮಿ ಗಣೇಶ್ ಅವರೂ ಒಬ್ಬರು. ತುಮಕೂರು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಕೈದಾಳದವರಾದ ಶಾಸನತಜ್ಞ ಕೆ. ಆರ್. ಗಣೇಶ್ ಅವರಿಗೆ 66 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಅವರ ಸ್ನೇಹಿತರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ.

ನಗರದ ಆಚಾರ‌್ಯ ಪಾಠ ಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ 37 ವರ್ಷ ಕನ್ನಡ ಉಪನ್ಯಾಸಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಶಾಸನಗಳ ಅಧ್ಯಯನ, ಛಂದಸ್ಸು ಹಾಗೂ ವ್ಯಾಕರಣಗಳ ಬಗ್ಗೆ ಅಪಾರವಾದ ಆಸಕ್ತಿ ಬೆಳೆಸಿಕೊಂಡವರು. ಅನೇಕ ಕಡೆ ಅತಿಥಿ ಉಪನ್ಯಾಸಕರಾಗಿ, ವಿದ್ವತ್‌ಗೋಷ್ಠಿಗಳಲ್ಲಿಯೂ ಭಾಗವಹಿಸಿ ಬೆಂಗಳೂರುವಿಶ್ವವಿದ್ಯಾಲಯದ ಮೌಲ್ಯಮಾಪನಾ ಕೇಂದ್ರದ ನಿರ್ದೇಶಕರಾಗಿ, ವ್ಯವಸ್ಥಾಪಕರಾಗಿ ಹಾಗೂ ಅಲ್ಲಿನ ಸ್ನಾತಕ ಅಧ್ಯಯನ ಮಂಡಳಿ ಸದಸ್ಯರಾಗಿ, ಹಂಪಿ ಕನ್ನಡ ಶಾಸನಶಾಸ್ತ್ರ ವಿಭಾಗದ ಅಧ್ಯಯನ ಮಂಡಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 1976ರಲ್ಲಿ ಅಧ್ಯಕ್ಷರಾಗಿದ್ದ ನಾಡೋಜ ಜಿ. ನಾರಾಯಣ ಅವರ ಮುಂದಾಲೋಚನೆಯಂತೆ ಡಾ. ಶೇಷಶಾಸ್ತ್ರಿ ಮತ್ತು ಡಾ. ದೇವರಕೊಂಡಾರೆಡ್ಡಿ ಅವರ ಸಾಥ್‌ನೊಂದಿಗೆ ಕಾಲೇಜು ಮೆಟ್ಟಿಲು ಹತ್ತದವರೂ ಶಾಸನಗಳ ಅಧ್ಯಯನದಲ್ಲಿ ಉತ್ಸಾಹ, ಆಸಕ್ತಿ ಹೊಂದುವಂತೆ ಶಾಸನ ತರಗತಿಗಳು ಪ್ರಾರಂಭವಾಗಲು ಕೈ ಜೋಡಿಸಿದವರಲ್ಲಿ ಕೆ. ಆರ್. ಗಣೇಶ್ ಪ್ರಮುಖರು. ಅಂದಿನಿಂದ ನಿರಂತರವಾಗಿ ನಡೆದು ಬಂದ ಶಾಸನಶಾಸ್ತ್ರ ತರಗತಿಗಳ ಪ್ರತಿಫಲವಾಗಿ ಇಂದು ಕರ್ನಾಟಕದಲ್ಲಿ ಅನೇಕರು ಶಾಸನಗಳ ಸಂಶೋಧನೆ ಅಧ್ಯಯನಗಳಲ್ಲಿ ತೊಡಗಿರುವುದನ್ನು ಕಾಣಬಹುದು.

ಡಾ. ಶೇಷಾದ್ರಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ `ಆಂಧ್ರಪ್ರದೇಶದ ಕನ್ನಡ ಶಾಸನಗಳು ಒಂದು ಅಧ್ಯಯನ' (1994) ಪ್ರಬಂಧವನ್ನು ಮಂಡಿಸಿ ಪಿಎಚ್.ಡಿ. ಪದವಿಯನ್ನು ಶ್ರೀಯುತರು ಗಳಿಸಿದ್ದಾರೆ. 2005ರಲ್ಲಿ ಸೇಡಂನಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಡಾ. ಬಾ. ರಾ. ಗೋಪಾಲ್ ದತ್ತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಎಂ.ಇ.ಎಸ್. ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಗಣೇಶ್ ತಮ್ಮ ವಿದ್ವತ್ತು, ಸರಳತೆ, ಸಜ್ಜನಿಕೆ ಹಾಗೂ ನಿಸ್ಪೃಹತೆಗಳಿಂದ ಕೂಡಿದ ವ್ಯಕ್ತಿತ್ವದಿಂದಾಗಿ ಅಸಂಖ್ಯಾತ ವಿದ್ಯಾರ್ಥಿಗಳ ಮತ್ತು ಮಿತ್ರರ ಸ್ನೇಹಸಂಪತ್ತನ್ನು ಗಳಿಸಿಕೊಂಡಿದ್ದಾರೆ. ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಯಶ ಪಡೆದಿರುವ ಅವರ ದೇಹಕ್ಕೆ ಮುಪ್ಪಾಗಿರಬಹುದು. ಆದರೆ ಈಗಲೂ ಕಾಲೇಜು ವಿದ್ಯಾರ್ಥಿಯಂತೆ ಲವಲವಿಕೆಯಿಂದ ಇದ್ದಾರೆ.

ಇಂದು (ಡಿ.18) ಸಂಜೆ ನಾಲ್ಕು ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಗಣೇಶ್ ಅವರೊಂದಿಗೆ ಸಂವಾದ ಕಾರ್ಯಕ್ರಮವಿದ್ದು, ಹಿರಿಯ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿಯವರಿಂದ ಶ್ರೀಯುತರಿಗೆ `ಕೈದಾಳ' ಎಂಬ ಅಭಿನಂದನಾ ಗ್ರಂಥದ ಸಮರ್ಪಣಾ ಸಮಾರಂಭ ನಡೆಯುತ್ತಿರುವುದು ವಿದ್ವತ್ ಲೋಕಕ್ಕೆ ಶೋಭೆ ನೀಡುತ್ತಿದೆ.

ಇಂದು (ಬುಧವಾರ) ಗಣೇಶ್ ಅವರಿಗೆ ಅಭಿನಂದನೆ ಹಾಗೂ `ಕೈದಾಳೆ' ಅಭಿನಂದನ ಗ್ರಂಥ ಲೋಕಾರ್ಪಣೆ. ಅಧ್ಯಕ್ಷತೆ- ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎಸ್.ವಿ. ವೆಂಕಟೇಶಯ್ಯ. ಗ್ರಂಥ ಸಮರ್ಪಣೆ- ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ. ಅಭಿನಂದನಾ ನುಡಿ- ಪ್ರೊ.ಜಿ. ಅಶ್ವತ್ಥನಾರಾಯಣ, ಡಾ.ನಾ. ಗೀತಾಚಾರ್ಯ. ಸ್ಥಳ-ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT