ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ: ತಲ್ಲಣ ಅರಿಯಿರಿ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಂದು ಸಾಮಾಜಿಕ ವಲಯದಲ್ಲಿ ಮೇಷ್ಟ್ರುಗಳು ಟೀಕೆಗೆ ಒಳಗಾದಷ್ಟು ಬೇರೆ ಯಾರೂ ಆಗಿರಲಾರರು. `ನಮ್ ಕಾಲದಲ್ಲಿ ಮೇಷ್ಟ್ರು ಹೇಗಿದ್ರು, ಈಗ ಬರೀ ಬಿಲ್ಲು-ಬೆಲ್ಲು ನೋಡ್ತಾರೆ' ಎಂದೋ; `ಪಾಪ ಮೇಷ್ಟ್ರು ಅವನಿಗೇನು ಗೊತ್ತು' ಎಂದೋ; `ಮೇಷ್ಟ್ರ ಕೆಲಸ ಆರಾಮಪ್ಪ, ಯಾವಾಗ ನೋಡಿದ್ರೂ ರಜೆ. ಪಾಠ ಮಾಡಿದ್ರೆ ಮಾಡಿದ್ರು, ಇಲ್ಲಾಂದ್ರೆ ಇಲ್ಲ.

ಹೇಳೋರೂ ಇಲ್ಲ, ಕೇಳೋರೂ ಇಲ್ಲ' ಎಂದೋ; `ಮೇಷ್ಟ್ರಂತೆ ಮೇಷ್ಟ್ರು, ಅವನೇನು ಹೇಳೋದು, ನಮಗೆ ಗೊತ್ತಿಲ್ವಾ?' ಎಂದೋ ಹೀಗೆ ಹತ್ತಾರು ವಿಧದಲ್ಲಿ ನಿಂದೆಗೆ, ನಿರ್ಲಕ್ಷ್ಯಕ್ಕೆ ತುತ್ತಾಗಿ ಬದುಕುತ್ತಿರುವವರು ಇಂದಿನ ಶಿಕ್ಷಕರು. ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರೆಂದರೆ ಏನೂ ಗೊತ್ತಿರದ, ಏನೂ ಕೆಲಸ ಮಾಡದ ವೇಸ್ಟ್ ಬಾಡಿಗಳೆಂದೇ ಬಿಂಬಿಸಲಾಗುತ್ತಿದೆ.

ಬಾಲ್ಯದಲ್ಲಿ ನನ್ನ ಮೇಲೆ ಗಾಢ ಪ್ರಭಾವ ಬೀರಿದವರು ನನ್ನ ಶಿಕ್ಷಕರು. ಶಾಲೆಯೇ ಪ್ರಪಂಚವಾಗಿದ್ದ ಆ ದಿನಗಳಲ್ಲಿ ನಮ್ಮ ಮೇಷ್ಟ್ರೇ ನಮಗೆ ಆದರ್ಶ. ಅವರಂತೆ ನಾವೂ ಮೇಷ್ಟ್ರರಾಗಬೇಕು ಎಂಬುದೇ ಭವಿಷ್ಯದ ಧ್ಯೇಯ. ಅಷ್ಟು ದಟ್ಟವಾಗಿತ್ತು ಆ ಪ್ರಭಾವ. ಇಂದು ಆ ಗುರಿಯನ್ನು ಸೇರಿಯಾಗಿದೆ. ಆದರೆ, ನನ್ನೊಳಗಿನ ಆ ಆದರ್ಶ ಶಿಕ್ಷಕತನ ಎಲ್ಲೋ ಕಳೆದುಹೋದ ಅನುಭವ. ನಮ್ಮ ಗುರುಗಳ ಬಗ್ಗೆ ನಮಗಿದ್ದ ಭಯ, ಪ್ರೀತಿ, ಗೌರವಗಳು ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಯಾಕಿಲ್ಲ? ಅಂದು ಶಿಕ್ಷಕರಿಗೆ ಸಿಗುತ್ತಿದ್ದ ಸಾಮಾಜಿಕ ಮನ್ನಣೆ ಇಂದು ನಮಗೇಕೆ ಸಿಗುತ್ತಿಲ್ಲ? ಇದಕ್ಕೆ ನಾವೆಷ್ಟು ಕಾರಣ ಎಂಬುದು ಇಂದಿನ ಬಹಳಷ್ಟು ಶಿಕ್ಷಕರ ಮುಂದಿರುವ ಪ್ರಶ್ನೆ.

ಅಂದು ಕಲಿಯುವ ಆಸಕ್ತಿ ಇರುವ ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದರು. ಆದರೆ ಇಂದು, ಹುಟ್ಟಿದ ಎಲ್ಲ ಮಕ್ಕಳನ್ನೂ ಶಾಲೆಗೆ ಎಳೆದುಕೊಂಡು ಬಂದು ಕಲಿಸಬೇಕಾದ ಅನಿವಾರ್ಯ ಸ್ಥಿತಿ ಶಿಕ್ಷಕರದ್ದು. ವಿದ್ಯೆ ಅಭ್ಯಾಸಿಯ ವಶ. ವಿದ್ಯಾರ್ಥಿಯ ಲಕ್ಷಣವೇ ಇಲ್ಲದವರಿಗೆ (ವಿದ್ಯೆಯ ಅರ್ಥಿ ಎಂದರೆ ವಿದ್ಯೆಯನ್ನು ಯಾಚಿಸುವವನು, ಬೇಡುವವನು ಎಂದರ್ಥ) ಕಲಿಸುವುದು ಹೇಗೆ? ಇದು ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಮುಂದಿರುವ ದೊಡ್ಡ ಸವಾಲು. ತೀವ್ರ ನಿರಾಸಕ್ತಿ ಇರಲಿ, ಬುದ್ಧಿ ಮಂದವೇ ಆಗಿರಲಿ ಕಲಿಸಬೇಕಾದ ಹೊಣೆ ಅವರದ್ದು.

ಅದಕ್ಕಾಗಿ ಶಿಕ್ಷಕರ ಶ್ರಮ, ಸಮಯ, ಜ್ಞಾನವೆಲ್ಲ ವ್ಯರ್ಥವಾಗುತ್ತಿದೆ. ಆದರೂ `ವರ್ಷವೆಲ್ಲ ಏನು ಮಾಡಿದಿರಿ?' ಎಂಬ ಪ್ರಶ್ನೆ. ವಿದ್ಯಾರ್ಥಿಯಲ್ಲಿ ಏನೇ ನ್ಯೂನತೆ ಇದ್ದರೂ ವೈಫಲ್ಯಕ್ಕೆ ಕಾರಣ ಶಿಕ್ಷಕರು ಎನ್ನಲಾಗುತ್ತಿದೆ. ಇದು ಶಿಕ್ಷಕರ ಪಾಲಿಗೆ ಎಷ್ಟು ಒತ್ತಡ, ಎಂಥಾ ನಿರಾಶಾದಾಯಕ ವಾತಾವರಣವನ್ನು ತಂದೊಡ್ಡುತ್ತಿದೆ ಎಂಬುದರ ಅರಿವು ಬಹುತೇಕರಿಗೆ ಇಲ್ಲ.

ಇಂದಿನ ಸರ್ಕಾರಿ ಶಿಕ್ಷಕರಿಗಂತೂ ಬೋಧಿಸುವುದಷ್ಟೇ ಕೆಲಸವಲ್ಲ. ಶಾಲೆಗೆ ಹೋಗುವಾಗಲೇ ಅಂದಿನ ಬಿಸಿಯೂಟಕ್ಕೆ ಬೇಕಾಗುವ ತರಕಾರಿ, ಉಪ್ಪು, ಬೇಳೆಯನ್ನೆಲ್ಲ ಹೊತ್ತುಕೊಂಡು ಹೋಗಬೇಕು. ಅಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಬೇಕು. ದಿನದಿನದ ಲೆಕ್ಕ ಬರೆದಿಡಬೇಕು. ಜೊತೆಗೆ ಇಲಾಖೆ ದಿಢೀರನೆ ಕೇಳುವ ಮಾಹಿತಿಯನ್ನು ಒದಗಿಸಬೇಕು. ಎಲ್ಲೆಡೆ ಶಿಕ್ಷಕರ ಕೊರತೆ. ಹೀಗೆ ಬದಲಾಗಿರುವ ವ್ಯವಸ್ಥೆಯಲ್ಲಿ ಶಿಕ್ಷಕ ಕೇವಲ ಬೋಧಕ ಮಾತ್ರ ಆಗಿಲ್ಲ. ಹಲವು ಕೆಲಸಗಳ ಮೇಲುಸ್ತುವಾರಿ ಅವರದು.

ತರಗತಿಗೆ ಹೋಗಿ ಮಕ್ಕಳ ಮುಖ ನೋಡಲಾಗದೆ ಇತರ ಕೆಲಸಗಳಲ್ಲೇ ಕಳೆದುಹೋಗುವ ದಿನಗಳು ಹಲವು. ಆದ್ದರಿಂದ ಬೋಧನೆಯ ಹಂಬಲ ಹೊತ್ತು ಬಂದ ಶಿಕ್ಷಕರು `ಯಾಕಪ್ಪಾ ಈ ಕೆಲಸಕ್ಕೆ ಬಂದೆವು' ಎಂದು ನಿಟ್ಟುಸಿರು ಬಿಡುವಂತಾಗಿದೆ. ಜೊತೆಗೆ `ಮೇಷ್ಟ್ರು ಪಾಠಾನೇ ಮಾಡಲ್ಲ, ಯಾವಾಗ್ಲೂ ಅಡ್ಡಾಡ್ತಾ ಇರ‌ತಾರೆ' ಎಂಬ ಆರೋಪ ಬೇರೆ. ಇದಕ್ಕೆ ಶಿಕ್ಷಕರು ಎಷ್ಟರ ಮಟ್ಟಿಗೆ ಕಾರಣ?
ಹಿಂದೆ ಖಾಸಗಿ ಶಾಲೆ, ಸರ್ಕಾರಿ ಶಾಲೆ ಎಂಬ ಭೇದವಾಗಲೀ, ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಎಂಬ ಪೈಪೋಟಿಯಾಗಲೀ ಇರಲಿಲ್ಲ.

ಆದರೆ ಇಂದು ಖಾಸಗಿ ಶಾಲಾ ಮಕ್ಕಳೊಂದಿಗೆ ಸರ್ಕಾರಿ ಶಾಲಾ ಮಕ್ಕಳ ಪ್ರಗತಿಯನ್ನು ಹೋಲಿಸಲಾಗುತ್ತಿದೆ. ಖಾಸಗಿ ಶಾಲಾ ಮಕ್ಕಳ ಬುದ್ಧಿಮಟ್ಟ, ಆರ್ಥಿಕ ಪರಿಸ್ಥಿತಿ, ಪೋಷಕರ ಕಲಿಕಾ ಮಟ್ಟ, ಅವರ ಸಹಕಾರ ಉತ್ತಮವಾಗಿದ್ದು, ಅವು ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೂ ಅದನ್ನೆಲ್ಲ ಕಡೆಗಣಿಸಿ, ಶಿಕ್ಷಕರೇ ಸರಿಯಾಗಿ ಕಲಿಸುತ್ತಿಲ್ಲ, ಹಾಗಾಗಿ ಸರ್ಕಾರಿ ಶಾಲಾ ಮಕ್ಕಳು ಕಲಿಯುವುದಿಲ್ಲ ಎಂಬ ಧೋರಣೆ ವ್ಯಕ್ತಪಡಿಸುವುದು ಶಿಕ್ಷಕರಿಗೆ ನೋವು ಉಂಟು ಮಾಡುತ್ತಿದೆ.

ಒಂದು ಕಾಲದಲ್ಲಿ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿತ್ತು. ಅಂದಿನ ಪೋಷಕರು, ಅಕ್ಷರ ಕಲಿಸುವ ಗುರುವೆಂದರೆ ದೇವರ ಸಮಾನ ಎಂಬಂತಹ ಕಲ್ಪನೆಯನ್ನು ತಮ್ಮ ಮಕ್ಕಳಲ್ಲಿ ಕಲ್ಪಿಸಿಕೊಟ್ಟಿದ್ದರು. ಇಂದು ಎಲ್ಲರೂ ಅಕ್ಷರಸ್ಥರೇ. ಜ್ಞಾನದ ಮೂಲ ಶಾಲೆ ಮಾತ್ರ ಆಗಿಲ್ಲ. ದೂರದರ್ಶನ, ಕಂಪ್ಯೂಟರ್, ಮೊಬೈಲ್ ಮೊದಲಾದ ಮಾಧ್ಯಮಗಳಿಂದ ವಿಪುಲ ಮಾಹಿತಿ ಗ್ರಹಿಸುವ ವಿದ್ಯಾರ್ಥಿಗೆ/ ಪೋಷಕರಿಗೆ ತಮ್ಮಂತೆಯೇ ಓದಿದ ಅಥವಾ ತಮಗಿಂತ ಸ್ವಲ್ಪ ಹೆಚ್ಚು ಓದಿದ ಮೇಷ್ಟ್ರು ಅದ್ಭುತ ಎನಿಸುತ್ತಿಲ್ಲ.

ಪರಿಣಾಮವಾಗಿ ಶಿಕ್ಷಕರನ್ನು ಎಲ್ಲರಂತೆಯೇ ಸಾಮಾನ್ಯ ವ್ಯಕ್ತಿಗಳು ಎಂದು ಅವರು ಪರಿಗಣಿಸುತ್ತಾರೆ. `ಗುರುವೇ ನಮಃ' ಎಂಬ ಕಾಲ ಹೋಗಿ `ಗುರುವೇನು ಮಹಾ' ಎಂಬ ಕಾಲ ಬಂದಿದೆ. ಇದು ಶಿಕ್ಷಕರ ವರ್ತನೆಯ ವೈಪರೀತ್ಯಗಳಿಂದಲ್ಲ; ಬದಲಾದ ಸಾಮಾಜಿಕ ವಾತಾವರಣದ ಪ್ರಭಾವದಿಂದ. ರಕ್ತ ಸಂಬಂಧಗಳೇ ಅಲ್ಲಾಡುತ್ತಿರುವ ಈ ದಿನಗಳಲ್ಲಿ ಗುರು-ಶಿಷ್ಯ ಸಂಬಂಧದ ಪೂಜ್ಯ ಭಾವನೆಗೆ ಧಕ್ಕೆ ಬಂದಿದ್ದರೆ ಆಶ್ಚರ್ಯವೇನಿಲ್ಲ.

ಇಂದಿನ ಶಿಕ್ಷಕರು ಮಗುವನ್ನು ಕೇವಲ ಪಠ್ಯ ವಿಷಯಗಳಿಗಷ್ಟೇ ಸಿದ್ಧಗೊಳಿಸುತ್ತಿಲ್ಲ. ಬದಲಾದ ಪರಿಸರಕ್ಕೆ ಅನುಗುಣವಾಗಿ ಕ್ರೀಡೆ, ಪ್ರತಿಭಾ ಕಾರಂಜಿ, ಗಣಕ ಯಂತ್ರ, ಪ್ರವಾಸ, ವೃತ್ತಿ ಮಾರ್ಗದರ್ಶನ, ಕೈದೋಟ... ಹೀಗೆ ಬಹುಮುಖ ಬೋಧನೆ ಮಾಡುತ್ತಿದ್ದಾರೆ. ಆಕರ್ಷಕ ತಂತ್ರ, ಕೌಶಲ, ಶೈಲಿ, ಹಾಡು, ನೃತ್ಯ, ಕಥೆ, ಸ್ಥಳ ಭೇಟಿ, ಬೋಧನೋಪಕರಣ ಬಳಸುತ್ತಿದ್ದಾರೆ.

ಇದಕ್ಕಾಗಿ ಅವರೆಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಗೊತ್ತೇ? ನಿರಂತರ ತರಬೇತಿ ಪಡೆಯುತ್ತಾ, ಪುನಶ್ಚೇತನಗೊಳ್ಳುತ್ತಾ ಎಷ್ಟು ಕ್ರಿಯಾಶೀಲರಾಗಿರುತ್ತಾರೆ ಗೊತ್ತೇ? ಆದರೂ `ಹಿಂದೆಲ್ಲ ಮೇಷ್ಟ್ರು ಎಷ್ಟು ತಿಳ್ಕೊಂಡಿರ‌್ತಿದ್ರು, ಇವತ್ತು ಮೇಷ್ಟ್ರಿಗೆ ವಿಷಯ ಜ್ಞಾನವೇ ಇಲ್ಲ; ಆಳವಾಗಿ ಅಧ್ಯಯನ ಮಾಡೋಲ್ಲ' ಎಂಬ ಆರೋಪ.

ಬಡ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ಕೊಡಿಸುವ, ಸಮವಸ್ತ್ರ ಹೊಲಿಸುವ, ಫೀಸು ಭರಿಸುವ, ಪ್ರವಾಸ ಕರೆದೊಯ್ಯುವ, ಬಹುಮಾನ ನೀಡುವ ಸಾವಿರಾರು ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಹಿಂದೆ ಇದನ್ನು ಶಿಕ್ಷಕರ ಉದಾರತೆ, ಕಾಳಜಿ, ಜವಾಬ್ದಾರಿ ಎಂದು ಗುರುತಿಸಿ ಮೆಚ್ಚುತ್ತಿದ್ದ ಸಮಾಜದ ದೃಷ್ಟಿ ಇಂದು ಬೇರೆಯೇ ಆಗಿದೆ. `ಅದು ಸರ್ಕಾರದ್ದು, ಮೇಷ್ಟ್ರದ್ದಲ್ಲ, ಅವರ‌ಯಾಕೆ ಉಚಿತವಾಗಿ ಕೊಡ್ತಾರೆ?' ಎಂದೋ;  `ಮೇಷ್ಟ್ರಿಗೇನೋ ಲಾಭ ಇರ‌ಬೇಕು, ಅದಕ್ಕೆ ಸಹಾಯ ಮಾಡ್ತಾರೆ' ಎಂದೋ; `ಯಾವುದರಲ್ಲಿ ಎಷ್ಟು ಹೊಡ್ಕೊಂಡಿದ್ನೋ, ಅದಕ್ಕೆ ಸ್ವಲ್ಪ ದಾನ ಮಾಡಿದ್ದಾನೆ' ಎಂದೋ ಲಘುವಾಗಿ ಮಾತನಾಡುವ, ಅನುಮಾನಿಸುವ, ಪ್ರಶ್ನಿಸುವ ಪೋಷಕರೇ ಅಧಿಕ.

ಔದಾರ‌ಯಕ್ಕೆ ಕನಿಷ್ಠ ಕೃತಜ್ಞತೆಯನ್ನೂ ಸೂಚಿಸುವ ಸೌಜನ್ಯವೂ ಹಲವು ಪೋಷಕರಿಗೆ ಇಲ್ಲ. ಇಂತಹ ಟೀಕೆ, ಅನುಭವಗಳು ಪದೇ-ಪದೇ ಆದಾಗ ಶಿಕ್ಷಕರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಸುತ್ತ ಬೇಲಿ ಹಾಕಿಕೊಳ್ಳದೆ ಇರುತ್ತಾರೆಯೇ?
ಹಾಗೆಂದು ಎಲ್ಲ ಶಿಕ್ಷಕರೂ ಪ್ರಾಮಾಣಿಕರು; ಆತ್ಮ ಗೌರವ ಉಳ್ಳವರು; ವೃತ್ತಿ ಧರ್ಮ ಕಾಪಾಡುವವರು ಎಂದಲ್ಲ. ಅಪವಾದಗಳು ಇರಬಹುದು.

ಆದರೆ ಅದೇ ಶಿಕ್ಷಕ ವರ್ಗದ ಮೌಲ್ಯ ನಿರ್ಧರಿಸುವ ಮಾನದಂಡ ಆಗಬಾರದು. ಅಂತಹವರನ್ನು ಶಿಕ್ಷಿಸುವ, ತಿದ್ದುವ ಹೊಣೆ ಖಂಡಿತಾ ಇಲಾಖೆಯದು, ಸಮಾಜದ್ದು. ಆದರೆ ಪ್ರಾಮಾಣಿಕತೆಯನ್ನು ಮೆಚ್ಚಿ, ಪ್ರೋತ್ಸಾಹಿಸದಿದ್ದರೆ ಉತ್ತಮ ಶಿಕ್ಷಕರೂ ದಕ್ಷತೆ ಕಳೆದುಕೊಳ್ಳುವ ಸಂಭವ ಇರುತ್ತದೆ ಎಂಬ ಅರಿವು ಸಮಾಜದ್ದಾಗಬೇಕು.

ಹೀಗೆ ಶಿಕ್ಷಣ ಅಥವಾ ಶಿಕ್ಷಕ ಪಾವಿತ್ರ್ಯ ಕಾಪಾಡಿಕೊಂಡಿಲ್ಲ ಎನಿಸಿದರೆ ಅದಕ್ಕೆ ಸಾಮಾಜಿಕ ವಾತಾವರಣ ಕಾರಣವೇ ಹೊರತು ಶಿಕ್ಷಕ ಅಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಹಿಂದಿನದಕ್ಕೆ ಹೋಲಿಸಿ, ಈಗ ಕಾಲ ಬದಲಾಗಿದೆ, ಹಿಂದೆ ಬಹಳ ಚೆನ್ನಾಗಿತ್ತು ಎಂದು ಅಭಿಪ್ರಾಯ ಪಡುವುದು ಮಾನವನ ಸಹಜ ಗುಣ. ಅಂತೆಯೇ ಶಿಕ್ಷಕ ಮತ್ತು ಶಿಕ್ಷಣ ವ್ಯವಸ್ಥೆ ಕೂಡ ಹಿಂದಿನಂತೆ ಈಗ ಇಲ್ಲ ಎಂಬುದು ಸಹ ಒಪ್ಪಿಕೊಳ್ಳಬೇಕಾದ ಸಂಗತಿ.

ಆದ್ದರಿಂದ ಶಿಕ್ಷಕ ಬಾಂಧವರು ನಿರಾಶಾದಾಯಕವಾಗಿ ಬದುಕದೇ, ವೃತ್ತಿಯ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳದೇ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ, ಒಪ್ಪಿಕೊಳ್ಳುವ ಜಾಣ್ಮೆ ತೋರಬೇಕು. ವೃತ್ತಿಯಲ್ಲಿ ಆಸಕ್ತಿ ಇದ್ದರೆ ಕೀರ್ತಿ, ತೃಪ್ತಿ ಸಿಕ್ಕೇ ಸಿಗುತ್ತದೆ. ಸರ್ವ ಹಿತದ ದೃಷ್ಟಿಯಿಂದ ಯೋಚಿಸುವ ಉದಾರ ಪ್ರವೃತ್ತಿ ಶಿಕ್ಷಕರದ್ದಾಗಬೇಕು.

ಟೀಕೆ, ನಿಂದೆ ಸಾವಿರ ಬರಲಿ ಕರ್ತವ್ಯ ಲೋಪ ಮಾಡಬಾರದು. ಶ್ರದ್ಧೆ, ನಿಷ್ಠೆಯಿಂದ ಕ್ರಿಯಾಶೀಲರಾಗಿರಬೇಕು. ಯಾರೋ ಮೆಚ್ಚುವುದು ಮುಖ್ಯವಲ್ಲ. ಆತ್ಮ ತೃಪ್ತಿ ಮುಖ್ಯ. ವಿದ್ಯಾರ್ಥಿಯು ಗುರು ಬ್ರಹ್ಮ ಗುರು ವಿಷ್ಣು...  ಎಂದು ಪೂಜಿಸುವುದು ಬೇಕಿಲ್ಲ; ನನ್ನೊಳಗಿನ ವಿದ್ಯೆ ಮತ್ತು ಬುದ್ಧಿಯನ್ನು ನಿರ್ವಂಚನೆಯಿಂದ ಧಾರೆ ಎರೆದಿರುವೆ ಎಂಬ ಧನ್ಯತೆ ಸಿಗಬೇಕು. ಅದೇ ಸಾರ್ಥಕ ಕ್ಷಣ. ಆದ್ದರಿಂದ ಬಾಹ್ಯ ಒತ್ತಡಗಳಿಗೆ ಬಲಿಯಾಗದೇ, ತನ್ನತನ ಕಳೆದುಕೊಳ್ಳದೇ ಸದೃಢ ಚಿತ್ತದಿಂದ ಕರ್ತವ್ಯ ನಿರ್ವಹಿಸಿ, ಗುರು ಪರಂಪರೆಯ ನಿರಂತರತೆಗೆ ಶಿಕ್ಷಕ ವರ್ಗ ಕಾರಣವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT