ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕತ್ವದ ವಿಶೇಷ ವ್ಯಾಖ್ಯಾನ

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ


ಕಳೆದ ತಿಂಗಳು ಜಯಲಕ್ಷ್ಮಿ ಸಿಕ್ಕಿದ್ದಳು. ಅದೂ ದೂರದ ಇಂದೋರಿನಲ್ಲಿ. ಆಕೆ ಒಂದು ದೊಡ್ಡ ಕಂಪನಿಯ ಹಣಕಾಸು ನೋಡಿಕೊಳ್ಳುವ ಅಧಿಕಾರಿಯಾಗಿದ್ದಾಳೆ. ಸುಖವಾಗಿದ್ದಾಳೆ. ಆಕೆಯನ್ನು ನೋಡಿದಾಕ್ಷಣ ಇಪ್ಪತ್ತೈದು ವರ್ಷಗಳ ಹಿಂದಿನ ಚಿತ್ರಣ ಕಣ್ಣ ಮುಂದೆ ತೇಲಿಬಂತು.

ಒಬ್ಬ ಮೇಷ್ಟ್ರು ಬಂದು, ‘ಸರ್, ಈ ಜಯಲಕ್ಷ್ಮಿಯನ್ನು ಕಾಲೇಜಿನಿಂದ ಹೊರಗೆ ಹಾಕಿಬಿಡಬೇಕು. ಪ್ರತಿವಾರ ಇರುವ ನಾಲ್ಕು ತರಗತಿಗಳಲ್ಲಿ ಕನಿಷ್ಠ ಎರಡಕ್ಕಾದರೂ ಆಕೆ ಬರುವುದಿಲ್ಲ. ಆಕೆಗೆ ಓದಿನಲ್ಲಿ ಆಸಕ್ತಿ ಇಲ್ಲ’ ಎಂದು ಕೋಪದಿಂದ ಹೇಳಿದರು. ಈ ತರಹದ ತಕರಾರುಗಳು ಮೇಲಿಂದ ಮೇಲೆ ಬಂದ ಮೇಲೆ ಆಕೆಯನ್ನು ನನ್ನನ್ನು ಭೆಟ್ಟಿಯಾಗಲು ಬರಹೇಳಿದೆ. ಪ್ರಿನ್ಸಿಪಾಲರು ಕರೆದಿದ್ದಾರೆ ಎಂದಾಗ ಆಕೆಗೆ ಭಯವಾಗಿರಬೇಕು. ಪಾಪ! ಹೆದರಿಕೊಂಡೇ ಬಂದಳು. ‘ಯಾಕಮ್ಮಾ ಮನೆಯಲ್ಲಿ ಏನಾದರೂ ತೊಂದರೆ ಇದೆಯೇ? ಯಾಕೆ ಇಷ್ಟೊಂದು ತರಗತಿಗನ್ನು ತಪ್ಪಿಸಿಕೊಳ್ಳುತ್ತೀ?’ ಎಂದು ಕೇಳಿದೆ. ಆಕೆ ತಲೆ ತಗ್ಗಿಸಿ, ‘ಮನೆಯಲ್ಲಿ ಸ್ವಲ್ಪ ತೊಂದರೆ ಇದೆ ಸರ್’ ಎಂದಳು.

ಮರುವಾರ ಆಕೆಗೆ ತಿಳಿಸಿಬಿಟ್ಟು ಅವರ ಮನೆಗೆ ಹೋದೆ. ನನ್ನೊಂದಿಗೆ ಆ ಮೇಷ್ಟ್ರನ್ನು ಕರೆದುಕೊಂಡು ಹೋಗಿದ್ದೆ. ಮನೆಯ ಪರಿಸ್ಥಿತಿ ನೋಡಿ ಗಾಬರಿಯಾಯಿತು. ಅಲ್ಲಿ ಮನೆ ಎನ್ನುವುದೇನೂ ಇಲ್ಲ. ಅದೊಂದು ಸುಮಾರು 12/10 ಅಡಿಯ ಒಂದೇ ಕೋಣೆ. ಅಲ್ಲಿಯೇ ಮೂಲೆಯಲ್ಲಿ ಅರ್ಧ ಗೋಡೆ ಕಟ್ಟಿದ್ದೇ ಬಚ್ಚಲುಮನೆ. ಆ ಕೋಣೆಯಲ್ಲಿ ನಾಲ್ವರು ಜನ ವಾಸವಾಗಿದ್ದಾರೆ. ಜಯಲಕ್ಷ್ಮಿಯ ತಂದೆ, ತಾಯಿ, ಜಯಲಕ್ಷ್ಮಿ ಹಾಗೂ ತಮ್ಮ. ನಾವು ಹೋದಾಗ ತಾಯಿ ಚಾಪೆಯ ಮೇಲೆ ಮಲಗಿಕೊಂಡಿದ್ದರು. ನಮ್ಮಲ್ಲಿ ಸಾಮಾನ್ಯವಾಗಿ ಹೊರಗಿನವರು ಬಂದಾಗ ಹೆಣ್ಣುಮಕ್ಕಳು ಮಲಗಿರುವುದಿಲ್ಲ. ಆದರೆ ಆಕೆಗೆ ಏಳುವುದು ಅಸಾಧ್ಯವಾಗಿತ್ತು. ಆಕೆಯ ಬಲಗಾಲು ತುಂಬ ಊದಿಕೊಂಡು ಆನೆಯ ಕಾಲಿನ ತರಹವಾಗಿತ್ತು. ‘ಯಾಕೆ, ಏನಾಗಿದೆ ಇವರಿಗೆ?’ ಎಂದು ತಂದೆಯನ್ನು ಕೇಳಿದೆ. ಅಲ್ಲಿಯವರೆಗೂ ಕನ್ನಡದಲ್ಲಿ ಮಾತನಾಡುತ್ತಿದ್ದ ಅವರು ತಕ್ಷಣ ಇಂಗ್ಲೀಷ್‌ನಲ್ಲಿ ಹೇಳತೊಡಗಿದರು. ಬಹುಶಃ ಹೆಂಡತಿಗೆ ಅದು ತಿಳಿಯಬಾರದೆಂಬ ಆಶಯ ಅವರದು.

ಅವರು ಒಂದು ಸಹಕಾರಿ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿದ್ದರು. ಕೆಲಸ ಕಡಿಮೆಯಾಗಿದೆಯೆಂದು ಇವರನ್ನು ಕೆಲಸದಿಂದ ತೆಗೆದುಹಾಕಿದ್ದರು. ಮನೆಯಲ್ಲಿ ಗಳಿಸುವವರು ಇವರೊಬ್ಬರೇ. ಜೀವನ ನಡೆಯಬೇಕಲ್ಲ? ಅವರು ಒಂದೆರಡು ಅಂಗಡಿಗಳಲ್ಲಿ ಲೆಕ್ಕ ಬರೆದು ಒಂದೆರಡು ಸಾವಿರ ರೂಪಾಯಿ ಗಳಿಸುತ್ತಿದ್ದರು. ಮಗ ಬೇರೆ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದವನು ಕಾಲೇಜು ಬಿಟ್ಟು ಬೆಳಿಗ್ಗೆ ಹಾಲು, ಪೇಪರ್ ಹಾಕಿ ಮಧ್ಯಾಹ್ನ ಯಾವುದೋ ಖಾಸಗಿ ಆಫೀಸಿನಲ್ಲಿ ಅಟೆಂಡರ್ ಕೆಲಸ ಮಾಡುತ್ತಿದ್ದ.

ಜಯಲಕ್ಷ್ಮಿಗೆ ಫೀಸು ಮಾಫಿಯಾದದ್ದರಿಂದಲೂ, ಸ್ಕಾಲರಶಿಪ್ ಬರುತ್ತಿದ್ದದರಿಂದ ಕಾಲೇಜಿಗೆ ಬರುತ್ತಿದ್ದಳು. ತಾಯಿಗೆ ಮಧುಮೇಹ ರೋಗವಿದ್ದು ಕಾಲಿಗೆ ಗಾಯವಾಗಿ ಸೋಂಕು ತಗುಲಿ ಊದಿಕೊಂಡು ಬಿಟ್ಟಿದೆ. ಎರಡು ಹೊತ್ತಿನ ಊಟಕ್ಕೇ ತೊಂದರೆ ಇರುವಾಗ ಔಷಧಿಗೆ ದುಡ್ಡು ಎಲ್ಲಿಂದ ತರುವುದು? ಅವರೆಂದರು, ‘ಆಕೆ ದಿನಾ ಸಾಯೋದನ್ನು ನೋಡಲಾರೆ ಸರ್. ಒಮ್ಮೆ ಸತ್ತರೆ ಒಂದಷ್ಟು ಅತ್ತು ಬಿಡುತ್ತೇವೆ. ಆಕೆಗಾದರೂ ಮುಕ್ತಿಯಾಗುತ್ತದೆ.’ ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ನಮ್ಮ ಮೇಷ್ಟ್ರ ಮುಖವೂ ಪೆಚ್ಚಾಗಿತ್ತು. ಮನೆಯಿಂದ ಹೊರಗೆ ಬಂದ ತಕ್ಷಣ ಅವರೆಂದರು, ‘ನಾನು ಜಯಲಕ್ಷ್ಮಿಗೆ ಬಯ್ಯಬಾರದಿತ್ತು ಸರ್, ಆಕೆಯ ಸ್ಥಾನದಲ್ಲಿ ನಾನಿದ್ದರೆ ಕಾಲೇಜಿಗೆ ಬರುವುದೇ ಸಾಧ್ಯವಿರಲಿಲ್ಲ, ಆಕೆಯನ್ನು ಅಭಿನಂದಿಸಬೇಕು.’

ನನಗೆ ಪರಿಚಯವಿದ್ದ ಆಸ್ಪತ್ರೆಯ ನಿರ್ದೇಶಕರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಅಂಬುಲೆನ್ಸ್ ಕಳಿಸಿ ತಾಯಿಯನ್ನು ಕರೆಸಿಕೊಂಡು ಚಿಕಿತ್ಸೆ ನೀಡಿ ನನಗೆ ಫೋನ್ ಮಾಡಿ ‘ಏನ್ ಸಾರ್ ಇವರು ಇಷ್ಟು ಕೇರ್‌ಲೆಸ್ ಆಗಿದ್ದಾರೆ?’ ಎಂದರು. ಆಗ ನಾನು ‘ಅವರು ಕೇರ್‌ಲೆಸ್ ಅಲ್ಲಪ್ಪಾ, ಕೇರ್ಡ್‌ಲೆಸ್ (caredless) ಎಂದು ಎಲ್ಲ ವಿಷಯ ತಿಳಿಸಿದೆ. ನಂತರ ಆ ವೈದ್ಯರು ಜಯಲಕ್ಷ್ಮಿಯ ತಂದೆಗೆ ತಮ್ಮ ಆಸ್ಪತ್ರೆಯಲ್ಲೇ ಕೆಲಸಕೊಟ್ಟು ಅವರ ಹೆಂಡತಿಗೆ ಪುಕ್ಕಟೆ ಚಿಕಿತ್ಸೆ ದೊರಕಿಸಿದರು. ಮತ್ತೆ ಅವರ ಮಗ ಕಾಲೇಜು ಸೇರಿ ಮುಂದುವರೆದ. ನಂತರ ಜಯಲಕ್ಷ್ಮಿಯ ಚಹರೆಯೇ ಬದಲಾಯಿತು. ಆಕೆ ಪದವಿಯನ್ನು ಉನ್ನತದರ್ಜೆಯಲ್ಲಿ ಪಾಸಾಗಿ ವೃತ್ತಿಯಲ್ಲಿ ಈಗ ತುಂಬ ಸುಖವಾಗಿದ್ದಾಳೆ.

ಈಗ ಮೇಷ್ಟ್ರು ಯಾರಾದರೂ ಕ್ಲಾಸಿಗೆ ಬರದಿದ್ದರೆ ಒಮ್ಮೆಲೇ ಬಯ್ಯುವುದಿಲ್ಲ. ‘ಏನಾದರೂ ತೊಂದರೆ ಇದೆಯಾ’ ಎಂದು ಕೇಳಿ ತಿಳಿದು ಸಹಾಯ ಮಾಡುತ್ತಾರೆ. ಅವರಿಗೆ ಅರ್ಥವಾದದ್ದೇನೆಂದರೆ ಶಿಕ್ಷಕರ ಜವಾಬ್ದಾರಿ ಇರುವುದು ಪಾಠ ಮಾಡುವ ಪಠ್ಯಕ್ರಮದ ಮೇಲಲ್ಲ, ವಿದ್ಯಾರ್ಥಿಗಳ ಮೇಲೆ. ಒಂದು ಸಲ ವಿದ್ಯಾರ್ಥಿಯನ್ನು ಒಬ್ಬ ಪ್ರೀತಿಯ ವ್ಯಕ್ತಿಯಾಗಿ, ನಮ್ಮ ಮಗನಂತೆ ಅಥವಾ ಮಗಳಂತೆ ಗಮನಿಸಿ ಸಹಕರಿಸಿದರೆ ನಂಬಲಾರದಂತಹ ಪರಿಣಾಮಗಳನ್ನು ನೀಡುತ್ತದೆ. ಶಿಕ್ಷಕತ್ವಕ್ಕೆ ವಿಶೇಷ ವ್ಯಾಖ್ಯಾನ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT