ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕಾರ್ಖಾನೆ: ಇದು ತಾಳಿಕಟ್ಟೆ ಗ್ರಾಮ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೊಳಲ್ಕೆರೆ: ಒಂದು ಗ್ರಾಮದಲ್ಲಿ ಎಷ್ಟು ಶಿಕ್ಷಕರು ಇರಬಹುದು? ಅಬ್ಬಬ್ಬಾ ಎಂದರೆ 20, 50, 100.  ಆದರೆ ಇಲ್ಲೊಂದು ಗ್ರಾಮ ಶಿಕ್ಷಕರಿಂದ ತುಂಬಿ ತುಳುಕುತ್ತಿದೆ. ಇಲ್ಲಿರುವ ಶಿಕ್ಷಕರ ಸಂಖ್ಯೆ 600 ಕ್ಕೂ ಹೆಚ್ಚು!

ಈ ಗ್ರಾಮಕ್ಕೆ ಮದುವೆಯಾಗಿ ಬಂದ ಶಿಕ್ಷಕಿಯರನ್ನು ಲೆಕ್ಕ ಹಾಕಿದರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಇನ್ನು ಶಿಕ್ಷಕ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವವರ ಸಂಖ್ಯೆ ಸಾವಿರ ದಾಟುತ್ತದೆ! ತಾಲ್ಲೂಕಿನ ತಾಳಿಕಟ್ಟೆ ಎಂಬ ಗ್ರಾಮ ಈ ನೂರಾರು ಶಿಕ್ಷಕರ ತವರೂರು.

ಇಲ್ಲಿ ಪ್ರತಿ ಮನೆಯಲ್ಲೂ ಶಿಕ್ಷಕರಿದ್ದಾರೆ. ಬೀದರ್‌ನಿಂದ ಮೈಸೂರುವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳ್ಲ್ಲಲಿ ಈ ಗ್ರಾಮದ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಮಾರು 1,400 ಕುಟುಂಬಗಳಿರುವ ಈ ಗ್ರಾಮ ಪಟ್ಟಣಕ್ಕೆ ಸಮೀಪವೇನೂ ಇಲ್ಲ. ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರವಿರುವ ಇಲ್ಲಿಗೆ ಸಾರಿಗೆ ವ್ಯವಸ್ಥೆಯೂ ಅಷ್ಟಕ್ಕಷ್ಟೆ. ಕುರುಬ ಜನಾಂಗಕ್ಕೆ ಸೇರಿದ ಹಿಂದುಳಿದ ವರ್ಗದ ಜನ ವಾಸಿಸುವ ಈ ಗ್ರಾಮಕ್ಕೆ ಹೇಳಿಕೊಳ್ಳುವಂತಹ ಮೂಲ ಸೌಕರ್ಯಗಳೂ ಇಲ್ಲ. ಬಡ ರೈತ ಕುಟುಂಬದ ಇಲ್ಲಿನ ಜನ ಆರ್ಥಿಕವಾಗಿಯೂ, ಅಷ್ಟು ಸಬಲರಾಗಿಲ್ಲ. ಆದರೆ, ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಈ ಗ್ರಾಮದ ಸಾಧನೆ ಮಾತ್ರ ಎಲ್ಲರಿಗೂ ಮಾದರಿ.

`ಇಲ್ಲಿನ ಅವಿದ್ಯಾವಂತ ತಂದೆ-ತಾಯಿಗಳಿಗೆ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಛಲ ಇತ್ತು. ಕಳೆದ 15 ವರ್ಷಗಳ ಹಿಂದೆ ಎಲ್ಲರೂ ತಮ್ಮ ಮಕ್ಕಳನ್ನು ಟಿಸಿಎಚ್ ತರಬೇತಿಗೆ ಸೇರಿಸಿದರು. ಸರ್ಕಾರಿ ಸೀಟು ಸಿಗದವರು ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಅಧಿಕ ಶುಲ್ಕ ನೀಡಿ ಓದಿಸಿದರು. ಕೆಲವರು ಜಮೀನು, ಬಂಗಾರ ಮಾರಿ ವಿದ್ಯಾಭ್ಯಾಸ ಮಾಡಿಸಿದರು. ಮಕ್ಕಳೂ ನಿಷ್ಠೆಯಿಂದ ಓದಿ ಶಿಕ್ಷಕ ವೃತ್ತಿ ಪಡೆದರು~ ಎನ್ನುತ್ತಾರೆ ಗ್ರಾಮದ ಶಿಕ್ಷಕ ಎಚ್. ಕಲ್ಲೇಶಪ್ಪ.

ಹಿಂದೆ ನಮ್ಮ ಗ್ರಾಮದ ಹಿರಿಯ ಶಿಕ್ಷಕರಾದ ಹರಳಪ್ಪ, ಮಲಿಯಪ್ಪ, ಸಿದ್ದಪ್ಪ, ಕೆಂಚಪ್ಪ ಎಂಬುವರು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಿದರು. ಡಾಕ್ಟರ್, ಎಂಜಿನಿಯರ್ ಆಗಿ ದುಡ್ಡು ಮಾಡುವುದು ಬೇಕಿಲ್ಲ. ಶಿಕ್ಷಕರಾದರೆ ಗ್ರಾಮದ ಅನಕ್ಷರತೆಯೂ ನಿರ್ಮೂಲನೆ ಆಗುತ್ತದೆ ಎಂದು ಪ್ರೇರೇಪಿಸಿದರು.

ಕುಟುಂಬದ ಬಡತನವೂ, ಮಕ್ಕಳಿಗೆ ಒಳ್ಳೆಯ ಪಾಠವನ್ನೇ ಕಲಿಸಿತ್ತು. ಇದರಿಂದ ಎಷ್ಟೇ ಕಷ್ಟ ಬಂದರೂ, ಗುರಿ ಸಾಧಿಸಿ ಶಿಕ್ಷಕರಾದರು ಎನ್ನುತ್ತಾರೆ ಅವರು.

`ಸುಮಾರು 600ಕ್ಕೂ ಹೆಚ್ಚು ಶಿಕ್ಷಕರಿರುವ ಗ್ರಾಮ ರಾಜ್ಯದಲ್ಲಿ ಮತ್ತೆಲ್ಲೂ ಇರಲಿಕ್ಕಿಲ್ಲ. ಗ್ರಾಮದ ಜನರ ಶಿಕ್ಷಣ ಪ್ರೀತಿ ಅನನ್ಯ~ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್. ಮಂಜುನಾಥ್.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT