ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನದ ಸಂಭ್ರಮವಿಲ್ಲ, ಹಬ್ಬದ ಖುಷಿಯೂ ಇಲ್ಲ!

ತಾತ್ಕಾಲಿಕ ಹುದ್ದೆ- ಸಂಬಳಕ್ಕೂ ಮೀನಮೇಷ
Last Updated 4 ಸೆಪ್ಟೆಂಬರ್ 2013, 19:37 IST
ಅಕ್ಷರ ಗಾತ್ರ

ಮಂಗಳೂರು: ಸಹೋದ್ಯೋಗಿ ಅಧ್ಯಾಪಕರು ಶಿಕ್ಷಕರ ದಿನಾಚರಣೆ ಸಂಭ್ರಮದಲ್ಲಿ ಮುಳುಗಿದ್ದರೂ ತಾತ್ಕಾಲಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಿಕ್ಷಕರ ಮೊಗದಲ್ಲಿ ಆ ಖುಷಿ ಇಲ್ಲ. ಏಕೆಂದರೆ ತರಗತಿ ಆರಂಭವಾಗಿ ಮೂರು ತಿಂಗಳು ಕಳೆದರೂ ಅವರಿಗಿನ್ನೂ ಸಂಬಳವಾಗಿಲ್ಲ!

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಹೆಚ್ಚು ಇದ್ದರೆ, ಅಲ್ಲಿಗೆ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ವರ್ಗಾಯಿಸಲಾಗುತ್ತದೆ. ವರ್ಗಾವಣೆಗೊಳ್ಳುವ ಶಿಕ್ಷಕರು ಸರ್ಕಾರಿ ಶಿಕ್ಷಕರೇ ಆಗಿದ್ದರೂ ಅವರ ಹುದ್ದೆ ಮಾತ್ರ ತಾತ್ಕಾಲಿಕ. ಹಾಗಾಗಿ ಅವರಿಗೆ ಸಂಬಳ ಮಂಜೂರಾಗಬೇಕಿದ್ದರೆ, ರಾಜ್ಯ ಸರ್ಕಾರವು ಹುದ್ದೆ ಮುಂದುವರಿಕೆ ಆದೇಶವನ್ನು ನೀಡಬೇಕು. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಹುದ್ದೆ ಮುಂದುವರಿಕೆ ಆದೇಶ ನೀಡಲಾಗುತ್ತದೆ. ಆದರೆ ಈ ಬಾರಿ ಸೆಪ್ಟಂಬರ್ ತಿಂಗಳು ಬಂದರೂ ಇನ್ನೂ ಆದೇಶ ಹೊರಬಿದ್ದಿಲ್ಲ. ಜಿಲ್ಲೆಯಲ್ಲಿ ಎಷ್ಟು ತಾತ್ಕಾಲಿಕ ಹುದ್ದೆಗಳಿವೆ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಮಾಹಿತಿಯೂ ಇಲ್ಲ!

`ನಾನು ಮೂರು ವರ್ಷದ ಹಿಂದೆ ಈ ಶಾಲೆಗೆ ವರ್ಗಾವಣೆಗೊಂಡಿದ್ದೆ. ಇಷ್ಟು ವರ್ಷ ಜುಲೈ ತಿಂಗಳಲ್ಲಿ ಹುದ್ದೆ ಮುಂದುವರಿಕೆ ಆದೇಶ ಸಿಗುತ್ತಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳ ಸಂಬಳ ಒಟ್ಟಿಗೆ ಸಿಗುತ್ತಿತ್ತು. ಆದರೆ, ಈ ಬಾರಿ ಇನ್ನೂ ಆದೇಶವೇ ಬಂದಿಲ್ಲ. ಸಂಬಳ ಆಗುವಾಗ ಇನ್ನೂ ಒಂದೆರಡು ತಿಂಗಳು ವಿಳಂಬವಾಗುವ ಲಕ್ಷಣವಿದೆ. ದಿನದ ಖರ್ಚಿಗೂ ಪರದಾಡಬೇಕಾದ ಸ್ಥಿತಿ ನನ್ನದು' ಎಂದು ಮಂಗಳೂರು ಉತ್ತರ ವಲಯದ ಪ್ರೌಢಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕಿಯೊಬ್ಬರು `ಪ್ರಜಾವಾಣಿ' ಜತೆ ಅಳಲು ತೋಡಿಕೊಂಡರು.

`ಇದು ನನ್ನೊಬ್ಬಳ ಸ್ಥಿತಿ ಅಲ್ಲ. ತಾತ್ಕಾಲಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಅಧ್ಯಾಪಕರೆಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ' ಎಂದು ಅವರು ತಿಳಿಸಿದರು.

ರಾಜ್ಯದಾದ್ಯಂತ ಸಮಸ್ಯೆ: `ಈ ಬಾರಿ ಸರ್ಕಾರದಿಂದ ಹುದ್ದೆ ಮುಂದುವರಿಕೆ ಆದೇಶ ಬಂದಿಲ್ಲ. ಇದು ಕೇವಲ ನಮ್ಮ ಜಿಲ್ಲೆಯಲ್ಲಿರುವ ಸಮಸ್ಯೆ ಅಲ್ಲ. ಇಲಾಖೆಯ ಆಯುಕ್ತರ ಮಟ್ಟದಲ್ಲಿ ಇದನು ಬಗೆಹರಿಸಬೇಕು' ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಸೆಸ್ ಜಯಶೇಖರ್ ಅವರು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಅವರು ಡಿಡಿಪಿಐ ಅವರತ್ತ ಬೊಟ್ಟು ಮಾಡಿದರು. `ಯಾವ ಯಾವ ಶಾಲೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿವೆ ಎಂಬ ಬಗ್ಗೆ ಡಿಡಿಪಿಐ ಅವರಿಂದ ಇನ್ನೂ ಮಾಹಿತಿ ಬಂದಿಲ್ಲ. ಸಂಬಳದ ಬಗ್ಗೆ ಸಮಸ್ಯೆಗಳಿದ್ದರೆ ಸರ್ಕಾರದ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು' ಎಂದು ಅವರು ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಸಂವಹನ ಕೊರತೆಯ ಕಾರಣದಿಂದಾಗಿ ಶಿಕ್ಷಕರು ಸಮಸ್ಯೆ ಎದುರಿಸುವಂತಾಗಿದೆ.

`ನಾನು ಹೊಸ ಮನೆ ಕಟ್ಟಿಸಿದ್ದು, ಅದಕ್ಕೆ ಪಡೆದ ಸಾಲದ ಕಂತು ಸಂಬಳದಿಂದ ಕಡಿತವಾಗುತ್ತಿತ್ತು. ಈ ಬಾರಿ ಸಂಬಳ ವಿಳಂಬವಾಗಿರುವುದರಿಂದ ಸಾಲ ಮರುಪಾವತಿಯೂ ಕಷ್ಟವಾಗುತ್ತಿದೆ. ತಿಂಗಳ ಖರ್ಚಿನ ನಿರ್ವಹಣೆಗೆ ಕೈಸಾಲ ಮಾಡಬೇಕಾದ ಸ್ಥಿತಿ ಇದೆ' ಎಂದು ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡರು.

`ಸರ್ಕಾರಿ ನೌಕರರು ಹಬ್ಬದ ಸಂದರ್ಭದಲ್ಲಿ ರೂ 5 ಸಾವಿರದವರೆಗೆ ಮುಂಗಡ ಪಡೆಯಲು ಅವಕಾಶವಿದೆ. ಪ್ರತಿ ತಿಂಗಳು ರೂ 500 ಅನ್ನು ಸಂಬಳದಲ್ಲಿ ಮುರಿದುಕೊಂಡು ಈ ಮುಂಗಡವನ್ನು ಸರಿದೂಗಿಸಲಾಗುತ್ತದೆ. ಈ ಬಾರಿ ಶಿಕ್ಷಕರ ದಿನಾಚರಣೆಯ ಬೆನ್ನಲ್ಲೇ ಗೌರಿ ಗಣೇಶ ಹಬ್ಬವೂ ಬಂದಿದೆ. ನಮಗೆ ಶಿಕ್ಷಕರ ದಿನಾಚರಣೆಯ ಸಂಭ್ರಮವೂ ಇಲ್ಲ, ಹಬ್ಬದ ಸಡಗರವೂ ಇಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT