ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮುಷ್ಕರಕ್ಕೆ ತೋಂಟದ ಶ್ರೀ ಬೆಂಬಲ

Last Updated 13 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಧಾರವಾಡ: `ಬ್ರಿಟಿಷರು ಉಪವಾಸ ಸತ್ಯಾಗ್ರಹಕ್ಕೆ ಹೆದರಿ ಭಾರತ ಬಿಟ್ಟು ತೊಲಗಿದರು. ಆದರೆ ಈಗಿನ ರಾಜ್ಯ ಸರ್ಕಾರ ಶಿಕ್ಷಕರು ಬೀದಿಯಲ್ಲಿ ಕುಳಿತು 60 ದಿನಗಳಿಂದ ಉಪವಾಸ ನಡೆಸಿದರೂ ಗಮನ ಹರಿಸದಿರುವುದು ನಾಚಿಗೇಡಿನ ಸಂಗತಿ~ ಎಂದು ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಅನುದಾನ ಬಿಡುಗಡೆಗೆ ಆಗ್ರಹಿಸಿ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಎದುರು ಶಿಕ್ಷಕರು ನಡೆಸಿರುವ ಮುಷ್ಕರ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.

ದೇಶದ ನಾಗರಿಕರನ್ನು ರೂಪಿಸುವ ಮತ್ತು ಕನ್ನಡ ಭಾಷೆ ಉಳಿಸಿ- ಬೆಳೆಸುವ ಶಿಕ್ಷಕರಿಗೆ ಪ್ರೋತ್ಸಾಹ ಕೊಡುವುದನ್ನು ಬಿಟ್ಟು, ಅವರಿಗೆ ಅನ್ಯಾಯ ಮಾಡುವುದು ಸರ್ಕಾರಕ್ಕೆ ಶೋಭೆತರುವಂಥದ್ದಲ್ಲ. ಆದ್ದರಿಂದ ಕೂಡಲೇ ಅನುದಾನ ಬಿಡುಗಡೆ ಮಾಡಿ ಶಿಕ್ಷಕರು ಉಪವಾಸ ಕೈ ಬಿಡುವಂತೆ ಮಾಡಬೇಕು ಎಂದರು.

ಸರ್ಕಾರ ಒಂದು ಲಕ್ಷ ಕೋಟಿ ಬಜೆಟ್ ಮಂಡಿಸಲು ಮುಂದಾಗಿದೆ. ಆದರೆ ಶಿಕ್ಷಕರಿಗೆ ಬೇಕಾಗಿರುವ 165 ಕೋಟಿ ರೂಪಾಯಿ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಎಲ್ಲ ಬಜೆಟ್‌ಗಿಂತ ಶಿಕ್ಷಣ ಹಾಗೂ ಭಾಷೆ ಕುರಿತ ಬಜೆಟ್ ಮುಖ್ಯ. ಆದ್ದರಿಂದ ಮುಖ್ಯಮಂತ್ರಿಗಳು ಕೇವಲ ಹೇಳಿಕೆ ನೀಡುವುದಲ್ಲದೇ ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.  ಇದೇ ಸಂದರ್ಭದಲ್ಲಿ ಧರಣಿ ನಿರತ ಶಿಕ್ಷಕರು ಸ್ವಾಮೀಜಿ ಅವರಿಗೆ ಮನವಿ ಸಲ್ಲಿಸಿದರು.

`ಭಾಷೆ ಎಂಬುದು ಅತ್ಯಂತ ಮಹತ್ವ ಪಡೆದಿದೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಅಲ್ಲಿ ಎಂಇಎಸ್ ಕಾರ್ಯಕರ್ತರು ಗೆಲ್ಲುತ್ತಾರೆ, ಇದಕ್ಕೆ ಭಾಷೆಯೇ ಕಾರಣ~ ಎಂದು ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

`ಮಠಾಧೀಶರು ರಾಜಕಾರಣದಿಂದ ದೂರ ಇರುವುದು ಸೂಕ್ತ. ಮೊನ್ನೆ ಸದನದಲ್ಲಿ ನಡೆದ ಘಟನೆ ಬಹಳ ದುರದೃಷ್ಟಕರ~ ಎಂದು ಪ್ರಶ್ನೆಯೊಂದದಕ್ಕೆ ಉತ್ತರಿಸಿದರು. ಆಮರಣ ಉಪವಾಸ ಸತ್ಯಾಗ್ರಹ ನಡೆಸಿದ್ದ ಗೋಪಾಲಕೃಷ್ಣ ಪಿ.ಬಿ. ಅಸ್ವಸ್ಥರಾದ ಕಾರಣ ಇಂದು ಆಸ್ಪತ್ರೆಗೆ ದಾಖಲಿಸಲಾಯಿತು. ಲೋಕೇಶ, ಸುಧೀಂದ್ರ ದೇಸಾಯಿ, ಪ್ರವೀಣಕುಮಾರ, ವಿಜಯಲಕ್ಷ್ಮೀ ಚರಂತಿಮಠ ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.

ಶ್ಯಾಮ ಮಲ್ಲನಗೌಡರ, ಆನಂದ ಕುಲಕರ್ಣಿ, ಮುತ್ತುರಾಜ ಮತ್ತಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT