ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮೇಲೆ ಹೆಚ್ಚಿದ ಹೊರೆ

ಶಾಲೆಯಲ್ಲಿ ಕಲಿಸುವುದಕ್ಕಿಂತ ಇತರೆ ಕೆಲಸಗಳೇ ಹೆಚ್ಚು!
Last Updated 5 ಸೆಪ್ಟೆಂಬರ್ 2013, 6:38 IST
ಅಕ್ಷರ ಗಾತ್ರ

ಯಾದಗಿರಿ:  ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ಸೇವೆಯನ್ನು ಸ್ಮರಿಸಿ, ಅವರನ್ನು ಸನ್ಮಾನಿಸುವ ಕೆಲಸಗಳೂ ನಡೆಯುತ್ತವೆ. ಆದರೆ ಇಡೀ ವರ್ಷ ಶಿಕ್ಷಕರು ಶಾಲೆ ಕಲಿಸುವುದಕ್ಕಿಂತ ಇತರೇ ಕೆಲಸಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿದೆ. ಇದರಿಂದ ಶಿಕ್ಷಕರೂ ಈಗ ಟೇಬಲ್ ಕೆಲಸದಲ್ಲಿಯೇ ತಲ್ಲೆನರಾಗುವಂತಾಗಿದೆ.

ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಈ ಎಲ್ಲ ಯೋಜನೆಗಳ ನಿರ್ವಹಣೆಯ ಹೊಣೆ ಮಾತ್ರ ಶಿಕ್ಷಕರ ಮೇಲೆಯೇ ಬೀಳುತ್ತಿದೆ. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಬೇರೆ ಕೆಲಸಗಳಲ್ಲಿಯೇ ಹೆಚ್ಚಿನ ಕಾಲ ಕಳೆಯಬೇಕಾಗಿದೆ.

ಪ್ರತಿಯೊಂದು ಶಾಲೆಯಲ್ಲೂ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಶಾಲಾ ಕಟ್ಟಡ, ಉಪಕರಣಗಳ ಖರೀದಿ, ನಲಿ-ಕಲಿ, ವಿದ್ಯಾರ್ಥಿಗಳ ಶಿಷ್ಯವೇತನ, ಪುಸ್ತಕ ಹಂಚಿಕೆ, ನೋಟ್‌ಬುಕ್‌ಗಳ ವಿತರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನಕ್ಕಾಗಿ ಬ್ಯಾಂಕ್ ಖಾತೆ ತೆರೆಯುವುದು, ಎಜ್ಯುಸ್ಯಾಟ್, ಕಂಪ್ಯೂಟರ್ ತರಬೇತಿ, ಸಮುದಾಯದತ್ತ ಶಾಲೆ, ಬಾ ಮರಳಿ ಶಾಲೆಗೆ,  ಆರೋಗ್ಯ ಜಾಗೃತಿ, ಪೊಲಿಯೋ ಲಸಿಕೆ, ಆನೆಕಾಲು ರೋಗ ನಿಯಂತ್ರಕ ಮಾತ್ರೆ ವಿತರಣೆ, ಜನಗಣತಿ, ಜಾತಿಗಣತಿ, ಚುನಾವಣೆ ಕಾರ್ಯ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಸಂಗ್ರಹಣೆ ಮುಂತಾದ ಕೆಲಸಗಳನ್ನು ಮುಖ್ಯಾಧ್ಯಾಪಕರು ಮಾಡಬೇಕಾಗಿದೆ. ಇದರ ಜೊತೆಗೆ ಶಿಕ್ಷಕರು ಕಡ್ಡಾಯವಾಗಿ ಏಳು ದಿನ ತರಬೇತಿಗೆ ಹಾಜರಾಗಬೇಕು.

ಮೊದಲೇ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಒಂದೊಂದು ಶಾಲೆಗಳಲ್ಲಿ ಇಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಶಾಲೆಗಳ ಮಕ್ಕಳಿಗೆ ಒಬ್ಬರೇ ಪಾಠ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

`ಏನ್ ಮಾಡೋಣ ಹೇಳ್ರಿ. ನೂರಾ ಎಂಟ ಕೆಲಸ ನಮಗ ಹಚ್ಚತಾರ. ಆ ಎಲ್ಲ ಕೆಲಸ ಮಾಡಬೇಕು. ಕಾಗದ ಪತ್ರ ಸರಿಯಾಗಿ ಇಡಬೇಕು. ಸಾಲ್ಯಾಗ ಒಂದ ವ್ಯವಸ್ಥಾ ಇಲ್ಲಂದ್ರು, ಅದಕ್ಕ ಮಾಸ್ತರನ್ನ ಹೊಣೆ ಮಾಡ್ತಾರ. ಹಿಂಗಾದ್ರ ನಾವ ಸಾಲಿ ಯಾವಾಗ ಕಲಸೋಣ್ರಿ' ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ಅಲವತ್ತಿಕೊಳ್ಳುತ್ತಾರೆ.

ಮೊದಲು ಗುರುಕುಲ ವ್ಯವಸ್ಥೆಯಲ್ಲಿ ಶಿಕ್ಷಕರು ಕೇವಲ ಪಾಠ ಮಾಡುವುದಕ್ಕೆ ತಮ್ಮ ಸಮಯವನ್ನು ಮೀಸಲಿಡುತ್ತಿದ್ದರು. ಆದರೆ ಈಗ ಪಾಠಕ್ಕಿಂತ ಇತರೇ ಕೆಲಸಗಳ ಹೊರೆಯೇ ಹೆಚ್ಚಾಗಿದೆ. ಶಿಕ್ಷಕರ ವೃತ್ತಿ ಅತ್ಯಂತ ಗೌರವದಿಂದ ಕೂಡಿದೆ. ಆದರೆ ಆ ವೃತ್ತಿಯನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ ಎಂಬುದನ್ನು ಶಿಕ್ಷಕರೇ ಒಪ್ಪಿಕೊಳ್ಳುತ್ತಿದ್ದಾರೆ.

`ಶಿಕ್ಷಕರ ದಿನದಂದು ಶಿಕ್ಷಕರ ವೃತ್ತಿ, ಶಿಕ್ಷಕರ-ವಿದ್ಯಾರ್ಥಿಗಳ ಬಾಂಧವ್ಯಗಳ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಕಾರ್ಯ ಭಾರದಿಂದಾಗಿ ಮಕ್ಕಳಿಗೆ ಶಿಕ್ಷಕರ ದರ್ಶನ ಆಗುವುದೂ ದುರ್ಲಭ ಆಗುತ್ತಿದೆ' ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯೊಬ್ಬರು ಹೇಳುತ್ತಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆಯು ಸಾಕಷ್ಟು ಹಿಂದುಳಿದಿದೆ. ಇಂತಹ ಜಿಲ್ಲೆಗಳ ಶಿಕ್ಷಕರ ಮೇಲೂ ಹೆಚ್ಚಿನ ಜವಾಬ್ದಾರಿ ಬೀಳುತ್ತಿದ್ದು, ಇದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಶಿಕ್ಷಕರನ್ನು ಪಾಠ ಮಾಡುವುದಕ್ಕೆ ಸೀಮಿತ ಮಾಡಬೇಕು. ಬೇರೆ ಕೆಲಸಗಳ ಹೊರೆಯನ್ನು ಕಡಿಮೆ ಮಾಡಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT