ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಶಿಕ್ಷಣ ಬೇಕಿದೆ ಕಾಯಕಲ್ಪ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ಶಾಲಾ ಶಿಕ್ಷಣ ಚರ್ಚೆಗೆ ಒಳಗಾಗುವುದು ಆರೋಗ್ಯಕರ. ಅದರಲ್ಲೂ ಮುಖ್ಯವಾಹಿನಿಯ ಶಾಲಾಶಿಕ್ಷಣ ವ್ಯವಸ್ಥೆ ನಿರ್ವಹಣೆಯ ಬಗ್ಗೆ ಸಂವಾದಗಳಿಗೆ ಸರ್ಕಾರದ ವ್ಯವಸ್ಥೆಯಲ್ಲಿ ವೇದಿಕೆಗಳೇ ಇಲ್ಲ. ಆಶ್ಚರ್ಯ  ತರುವ ವಿಚಾರವೆಂದರೆ, ಕೇಂದ್ರ ಹಂತದಲ್ಲಿ ಸಿ.ಎ.ಬಿ.ಇ. (ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಷನ್) ಶಾಲಾ ಶಿಕ್ಷಣದ ನಿರ್ಧಾರಗಳಲ್ಲಿ ಹಲವು ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದೆ.
 
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ, ತನ್ನ ನಿರ್ಣಯಗಳಿಗೆ ಈ ಸಂಸ್ಥೆಯ ಚರ್ಚೆಗಳು, ಸಲಹೆ ಸೂಚನೆಗಳನ್ನು ಪರಿಗಣಿಸುತ್ತಿರುವುದು ಸ್ವಾಗತಾರ್ಹ.

ಸಿಎಬಿಇ ಪ್ರಾರಂಭವಾದದ್ದು 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಒಂದು ಧನಾತ್ಮಕ ಆಯಾಮವಾಗಿ. ಆಗಲೇ ರಾಜ್ಯ ಮಟ್ಟದಲ್ಲಿ    ಎಸ್.ಎ.ಬಿ.ಇ. (ಸ್ಟೇಟ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಷನ್) ಉಗಮ ಆಗಬೇಕಿತ್ತು. ಆದರೆ ಈವರೆಗೆ ಆಗಿಲ್ಲ.

ಇನ್ನು ಶೈಕ್ಷಣಿಕ ಸಂವಾದಗಳಿಗೆ ಯಾರ ಕಡೆ ನೋಡಬೇಕು? ಇರುವ ಏಕೈಕ ಶೈಕ್ಷಣಿಕ `ಸರ್ಕಾರಿ~ ಸಂಸ್ಥೆಯಾದ  ಡಿಎಸ್‌ಇಆರ್‌ಟಿಯ ಮೊರೆ ಹೋಗೋಣವೆಂದರೆ ಈ ಸಂಸ್ಥೆಯನ್ನು ಕೆಟ್ಟದಾಗಿ ನಡೆಸಿಕೊಂಡು ಬರಲಾಗಿದೆ. ಆರು ದಶಕಗಳಿಂದ ಸಂಸ್ಥೆಗೆ ಸ್ವಾಯತ್ತತೆ ನೀಡುವ ಮಾತುಗಳು ಕೇಳಿಬರುತ್ತಲೇ ಇವೆ. ಈವರೆಗೆ ಆಗಿಲ್ಲ. ಅದು ಸರ್ಕಾರದ ಒಂದು ಬಾಲಂಗೋಚಿಯಾಗಿ ಸೊರಗಿದೆ.

ಈಗ ರಾಜ್ಯದ ಶೈಕ್ಷಣಿಕ ಹಣೆಬರಹ ಬರೆಯುತ್ತಿರುವುದು ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಎಂಬ ಕೇಂದ್ರ ನಿರ್ಮಾಣಕ್ಕೆ ಋಣಿಯಾದ ಘಟಕಗಳು. ಇವು ಮುಖ್ಯ ಆಡಳಿತ ವ್ಯವಸ್ಥೆಗೆ ಸಮಾನಾಂತರವಾಗಿ (ಪ್ಯಾರಲಲ್) ನಿರ್ವಹಣೆ ಕಾಣುತ್ತ ಕೇಂದ್ರ ಪ್ರಾಯೋಜಿಸಿದ ಚಿಂತನೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿವೆ.
 
ಈ ಘಟಕಗಳಲ್ಲಿರುವ ಆಯಕಟ್ಟಿನ ಉನ್ನತ ಸ್ಥಾನಗಳಲ್ಲಿ ನಿರ್ದೇಶಕರಿಂದ ಹಿಡಿದು ಹಲವರು ಶಿಕ್ಷಣದ ಗಂಧವೇ ಇಲ್ಲದ ಬೇರೆ ಇಲಾಖೆಯ ಎರವಲು ಸೇವೆಯ ಅಧಿಕಾರಿಗಳು. ಇನ್ನು ಅಲ್ಲಿ ಶೈಕ್ಷಣಿಕ ಸಂವಾದದ ನಿರೀಕ್ಷಣೆ ಹೇಗೆ ಸಾಧ್ಯ? ಒಟ್ಟಾರೆ ಪರಿಣಾಮವೆಂದರೆ ರಾಜ್ಯದ ಅತ್ಯುನ್ನತ ಶೈಕ್ಷಣಿಕ ನಿರ್ಣಯಗಳು, ಒಂದು ವಿಶಾಲ ಸಾಮೂಹಿಕ ಚಿಂತನೆಯ ಸೆಲೆಯನ್ನು ಬಯಸುವುದೇ ಇಲ್ಲ. ಪರಿಣಾಮವಾಗಿ ಹಲವು ಮುಖ್ಯ ಕ್ಷೇತ್ರಗಳಲ್ಲಿ, ಶಾಲಾ ಶಿಕ್ಷಣ ನಿಂತ ನೀರಾಗಿ ನಾರುತ್ತಿದೆ.

ಟೀಚರ್ ಎಜುಕೇಷನ್ ಎಂಬ ಬಹುಮುಖ್ಯ ಕ್ಷೇತ್ರವನ್ನು ಅಧ್ಯಯನ ಮಾಡಿದರೆ ಸಾಕು. ಅಲ್ಲಿಯ ಬೌದ್ಧಿಕ ದಾರಿದ್ರ್ಯ, ಅಸೀಮ ನಿರ್ಲಕ್ಷತನ ಹೇಳಲಸದಳ. ಇದಕ್ಕೆ ಹಲವು ಸ್ವಯಂಕೃತ ಹಾಗೂ ಕೆಲವು ಕೇಂದ್ರ ಕೊಡಮಾಡಿದ ಕಾರಣಗಳಿವೆ.

ಕರ್ನಾಟಕ ರಾಜ್ಯವು 80ರ ದಶಕದಿಂದಲೇ ಶಿಕ್ಷಕರ ನೇಮಕಾತಿಗೆ ತರಬೇತಿಯನ್ನು ಕಡ್ಡಾಯ ಮಾಡಿ ನಿಯಮಗಳನ್ನು ರೂಪಿಸಿದೆ. ಪ್ರಾಥಮಿಕ ಶಿಕ್ಷಕರಿಗೆ ಡಿಇಡಿ, ಪ್ರೌಢಶಾಲಾ ಶಿಕ್ಷಕರಿಗೆ ಬಿಇಡಿ ಮಾಡುವುದು ಕಡ್ಡಾಯ. ಸರ್ಕಾರದ ಆರ್ಥಿಕ ಮಿತವ್ಯಯದ ನೀತಿಯಿಂದಾಗಿ ನೌಕರಿಗಳು ದೊರೆಯುವ ಕೆಲವೇ ಕ್ಷೇತ್ರಗಳಲ್ಲಿ ಶಿಕ್ಷಣ ಬಹುಮುಖ್ಯ. ಇದರಿಂದಾಗಿ ಶಿಕ್ಷಕರ ಶಿಕ್ಷಣದ ವ್ಯಾಸಂಗಕ್ಕಾಗಿ ತುಂಬಾ ಬೇಡಿಕೆ ಬಂದಿತು. ದಿಢೀರನೆ ಈ ಬೇಡಿಕೆ ಪೂರೈಸುವ ತರಬೇತಿ ಕಾಲೇಜುಗಳ ಆಗಮನ ಆಯಿತು.

ನೂಕುನುಗ್ಗಲು...
ಎಂದೂ ಶಿಕ್ಷಣದ ಬಗ್ಗೆ ಕೇಳಿ, ಕಂಡರಿಯದವರೆಲ್ಲಾ ಹಣದ ವಿಪುಲ ಸಾಧ್ಯತೆಗಳನ್ನು ಮನಗಂಡು ತರಬೇತಿ ಕಾಲೇಜುಗಳನ್ನು ಪ್ರಾರಂಭಿಸಲು ನೂಕುನುಗ್ಗಲಿನಲ್ಲಿ ಬಂದರು.ಆಗ ಅನುಮತಿ ನೀಡಲಾದ ಸಂಸ್ಥೆಗಳ ಸಂಖ್ಯೆಯನ್ನು ನೋಡಿದರೆ ನಡುಕ ಹುಟ್ಟುತ್ತದೆ. ಅಲ್ಲಿಗೆ ಕರ್ನಾಟಕ ರಾಜ್ಯದ ಶೈಕ್ಷಣಿಕ ಮ್ಯಾಪ್‌ನಲ್ಲಿ ಒಂದು ನಿರ್ಧಾರಕ, ಅನಪೇಕ್ಷಿತ ತಿರುವನ್ನು ಕಾಣಲಾಯ್ತು. ಹೀಗೆ ಅನುಮತಿ ನೀಡುವಾಗ ಯಾವುದೇ ಶೈಕ್ಷಣಿಕವೆನ್ನಬಹುದಾದ ನೀತಿ ನಿರೂಪಣೆ ಕಾಣಸಿಗದು.

ಮಾನವ ಸಂಪನ್ಮೂಲ ಅಭಿವೃದ್ಧಿಯ ಮೊದಲ ಮಂತ್ರವೆಂದರೆ ವೃತ್ತಿಪರ ವ್ಯಾಸಂಗದ ನಂತರ ನೌಕರಿಯ ಸಾಧ್ಯತೆಗಳು. ಅದರ ಪರಿಗಣನೆಯಾಗಲಿ ಅಥವಾ ಭವಿಷ್ಯದ ದೃಷ್ಟಿಯಿಂದ ಅವಶ್ಯವಾದ ಶಿಕ್ಷಕರ ಸಂಖ್ಯೆಯ ಪರಿಗಣನೆಯಾಗಲಿ ಯಾವುದು ಇರಲಿಲ್ಲ. ವ್ಯವಸ್ಥೆ ಭ್ರಷ್ಟಾಚಾರಕ್ಕೆ ಮಣೆ ಹಾಕಿತು.

2003-04ರಲ್ಲಿ ಕರ್ನಾಟಕ ರಾಜ್ಯದಲ್ಲಿ 131 ಪ್ರಾಥಮಿಕ ಶಿಕ್ಷಣ ತರಬೇತಿ ಕೇಂದ್ರಗಳಿದ್ದವು. ಒಟ್ಟು ಸೀಟ್‌ಗಳ ಸಂಖ್ಯೆ ವರ್ಷಕ್ಕೆ 7,600. ಇಂತಹ ಸಂಸ್ಥೆಗಳಿಂದ ಹೊರಬಂದ ಅಭ್ಯರ್ಥಿಗಳಿಗೂ, ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ವರ್ಷದಲ್ಲಿ ನಿರ್ಮಾಣವಾಗುತ್ತಿದ್ದ ಶಿಕ್ಷಕರ ಹುದ್ದೆಗಳ ಸಂಖ್ಯೆಗೂ ಒಂದು ಆರೋಗ್ಯಕರ ಅನುಪಾತವಿದ್ದಿತು. ಈಗ 2010ನೆಯ ಸಾಲಿನಲ್ಲಿ ಡಿಇಡಿ ಸಂಸ್ಥೆಗಳ ಸಂಖ್ಯೆ 1008 ಆಗಿದೆ! ಒಟ್ಟು ಸೀಟ್‌ಗಳ ಸಂಖ್ಯೆ 59,000! ಏನಾದರೂ ಅರ್ಥ ಹುಡುಕಲು ಸಾಧ್ಯವೆ?
ಈ ಎಲ್ಲಾ ಬೆಳವಣಿಗೆಗಳು ಕೇಂದ್ರ ಸರ್ಕಾರ ಹುಟ್ಟುಹಾಕಿದ ಎನ್‌ಸಿಟಿಇ (ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್) ಸಂಸ್ಥೆಯ ನೇತೃತ್ವದಲ್ಲೇ ನಡೆಯಿತು ಎಂಬುದು ಸಹ ಕುತೂಹಲಕಾರಿ ಅಂಶ. ಈ ಸಂಸ್ಥೆಗೆ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ವೃತ್ತಿಪೂರ್ವ ಶಿಕ್ಷಣ ಸಂಸ್ಥೆಗಳಿಗೆ ಪರವಾನಗಿ ನೀಡುವ ಅಧಿಕಾರವನ್ನು ನೀಡಲಾಯ್ತು.

ರಾಜ್ಯಗಳು ಡಿಇಡಿ, ಬಿಇಡಿ, ಬಿಪಿಇಡಿ, ಇನ್ನು ಅನೇಕ ಶಿಕ್ಷಕರ ಶಿಕ್ಷಣದ ಕೋರ್ಸುಗಳನ್ನು ಅನುಮತಿಸುವ ಅಧಿಕಾರವನ್ನು ಕಳೆದುಕೊಂಡವು. ಈ ಅಧಿಕಾರ ಹೊಂದಿದ್ದ    ಎನ್‌ಸಿಟಿಇಗೆ ಪ್ರಸ್ತಾವನೆಗಳನ್ನು ಕಳುಹಿಸುವುದಕಷ್ಟೇ ರಾಜ್ಯಗಳು ಸೀಮಿತವಾದವು. ನಮ್ಮ ರಾಜ್ಯದಲ್ಲಿ ಅಲ್ಲಿಯವರೆಗೆ ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಉಸ್ತುವಾರಿ ಸಾಕಷ್ಟು ನಿಯಮಬದ್ಧವಾಗಿ ನಡೆಯುತ್ತಿದ್ದವು.
 
ಪ್ರತಿ ಸಂಸ್ಥೆಯಲ್ಲಿನ, ದಾಖಲೆಗಳಿಂದ ಒಳಗೊಂಡು ಬೋಧನೆಯ, ಎಲ್ಲಾ ವಿಷಯಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಭೇಟಿ ನೀಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಎನ್‌ಸಿಟಿಇ ಪ್ರಾರಂಭವಾದ ಮೇಲೆ, ರಾಜ್ಯ ಸರ್ಕಾರದ ನಿರ್ವಹಣಾ ವ್ಯವಸ್ಥೆ, ಅಂಚೆ ಕಚೇರಿಯ ಸ್ವರೂಪದ ಚಟುವಟಿಕೆಗಳನ್ನು ತನ್ನ ಮೇಲೆ ಆರೋಪಿಸಿಕೊಂಡಿತು.ಪ್ರಸ್ತಾವನೆಗಳನ್ನು ಕಳುಹಿಸಿ ಕೈ ತೊಳೆದುಕೊಳ್ಳುವ, ಯಾವುದಕ್ಕೂ ಜವಾಬ್ದಾರಿ ವಹಿಸದ ನಿರ್ಲಿಪ್ತತೆ ಈಗ ಬೆಳೆದು ನಿಂತಿದೆ. ಶಿಕ್ಷಕರ ಶಿಕ್ಷಣ ಸಂಸ್ಥೆಗಳು ವಿಪರೀತ ಡೊನೇಷನ್ ಹಾವಳಿಯಲ್ಲಿ ನಿರತವಾದವು.

ಆಗ ದಕ್ಷಿಣ ಭಾರತದಲ್ಲಿ ಕರ್ನಾಟಕದಷ್ಟು ಸುಲಭವಾಗಿ ಅನುಮತಿ ಪಡೆಯಲು ಆಗುತ್ತಿರಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ನಾಯಿಕೊಡೆಗಳಂತೆ ಆಂಗ್ಲಮಾಧ್ಯಮ ಡಿಇಡಿ ಕಾಲೇಜುಗಳು, ಗಲ್ಲಿಗಲ್ಲಿಗಳಲ್ಲಿ ಬಿಇಡಿ ಕಾಲೇಜುಗಳು ಸ್ಥಾಪಿತಗೊಂಡವು.ಎನ್‌ಸಿಟಿಇಗೆ ಇಂತಹ ದೊಡ್ಡ ಜಾಲ ನಿರ್ವಹಿಸುವ ಸಂಪನ್ಮೂಲಗಳು ಇರಲಿಲ್ಲ.

ಕೇಂದ್ರದಿಂದ ಸ್ಥಾಪಿತವಾದ ಯಾವ ಸಂಸ್ಥೆಯೂ ಇದರಷ್ಟು ದೊಡ್ಡ ಪ್ರಮಾಣದ ವೈಫಲ್ಯತೆಯನ್ನು ಹಾಗೂ ಅಪಖ್ಯಾತಿಯನ್ನು ಅಲ್ಲಿಯವರೆಗೆ ತೆರೆದುಕೊಂಡಿರಲಿಲ್ಲ ಎಂಬುದು ಅತಿಶಯೋಕ್ತಿಯೇನಲ್ಲ. ಕೇರಳ, ತಮಿಳುನಾಡಿನಿಂದ ಬಂದ ಶಿಕ್ಷಣಾರ್ಥಿಗಳೇ ಹೆಚ್ಚು. ಸಂಸ್ಥೆಗಳಿಗೂ ಡೊನೇಷನ್ ಕೊಡುವವರೇ ಬೇಕು.ಶಿಕ್ಷಣಾರ್ಥಿಗಳು ಅನ್ನುವುದಕ್ಕಿಂತ ಅವರು ಪದವಿ, ಡಿಪ್ಲೊಮಾ ಪ್ರಮಾಣಪತ್ರಗಳನ್ನು ಅರಸಿ ಬಂದವರು.

 ಕಳೆದ ಸಾಲಿನಲ್ಲಿ ಯಾವುದೇ ತರಗತಿಗಳಾಗಲಿ, ಪ್ರಾಯೋಗಿಕ ಬೋಧನೆ ಮಾಡುವುದಾಗಲಿ ಮಾಡದೆ, ತರಗತಿಗಳನ್ನು ವರ್ಷವಿಡೀ ನಡೆಸದೆ ನೇರವಾಗಿ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಹಾಜರ‌್ಪಡಿಸಿದ ಸಂಸ್ಥೆಗಳನ್ನು ಪತ್ತೆಹಚ್ಚಿ  ಕ್ರಮ ಕೈಗೊಳ್ಳುವ ಪ್ರಯತ್ನಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿಇಡಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಮಾಡಿದ್ದು ನೆನಪಿದೆ.

ಆದರೆ ಕೋರ್ಟುಗಳ ಆಸರೆ ಪಡೆದ ಅಭ್ಯರ್ಥಿಗಳು ಜಯಶೀಲರಾದರೇ ವಿನಃ ವಿಶ್ವವಿದ್ಯಾಲಯಗಳಾಗಲೀ ಅಥವಾ ಸರ್ಕಾರವಾಗಲೀ ಅಲ್ಲ. ರಾಜ್ಯ ಸರ್ಕಾರಗಳು ಇಂತಹ ಪ್ರಕರಣಗಳಲ್ಲಿ ಎನ್‌ಸಿಟಿಇಗೆ ಪ್ರಸ್ತಾವನೆಗಳಷ್ಟೇ (ಬೆರಳೆಣಿಕೆ ಸಂಖ್ಯೆಯಲ್ಲಿ) ಕಳುಹಿಸಿಕೊಟ್ಟು ಕೈತೊಳೆದುಕೊಂಡವು. ನ್ಯಾಯಾಲಯಗಳ ಪ್ರಕರಣ ಗಾಬರಿಗೊಳಿಸುವಷ್ಟು ಆದವು. ಆದರೆ ಅಕ್ರಮಗಳನ್ನು ತಡೆಯಲು ಸಾಧ್ಯವಾಗಲಿಲ್ಲ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ಅಪಹಾಸ್ಯಕ್ಕೆ ಈಗಾಗಲೇ ಈಡಾಗಿದ್ದೇವೆ ಎಂಬುದು ಸತ್ಯ.

ಉದಾಹರಣೆಗೆ ಪ್ರಾಯೋಗಿಕ ಬೋಧನೆಗಾಗಿ ಪ್ರಾಥಮಿಕ ಶಾಲೆಗಳೇ ಇಲ್ಲದ ಕಡೆ ತಮಿಳು, ಇಂಗ್ಲಿಷ್ ಡಿಇಡಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಪ್ರತಿ ಅಭ್ಯರ್ಥಿ 35-40 ಪ್ರಾಯೋಗಿಕ ಪಾಠಗಳನ್ನು ಮಾಡಬೇಕು. ಆದರೆ ಶಾಲೆಗಳಿದ್ದರೆ ತಾನೆ? ಆದರೂ ಅಂತವರೆಲ್ಲ ಡಿಇಡಿ, ಬಿಇಡಿ ಪದವಿಗಳನ್ನು ಪಡೆಯುತ್ತಿದ್ದಾರೆ.

ಇತ್ತ ರಾಜ್ಯವು ಶೈಕ್ಷಣಿಕ ನಾಯಕತ್ವ ವಹಿಸುತ್ತಿಲ್ಲ. ಅತ್ತ ಎನ್‌ಸಿಟಿಯು ಕಾಗದದ ಹುಲಿಯಾಗಿ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರವೇ ನೀಡಬೇಕೆಂದು ಕಾಯುತ್ತಿದೆ.
ಇವರಿಬ್ಬರ ಮಧ್ಯೆ ಕರ್ನಾಟಕದಲ್ಲಿ ಡಿಪ್ಲೊಮ, ಡಿಗ್ರಿಗಳು ಕೆಲವೇ ಸಾವಿರ ರೂಪಾಯಿಗಳಿಗೆ ಮಾರಾಟಕ್ಕಿವೆ ಎಂಬ ಕುಖ್ಯಾತಿಯನ್ನು ಪಡೆಯಬೇಕಾಗಿ ಬಂದಿದೆ.

ಒಂದು ಕಾಲದಲ್ಲಿ ಅತ್ಯಂತ ಶಿಸ್ತಿನ ಹಾಗೂ ಆರೋಗ್ಯಕರ ಶೈಕ್ಷಣಿಕ ವ್ಯವಸ್ಥೆ ನಿರ್ಮಾಣ ಮಾಡಿದ್ದ ನಮ್ಮ ರಾಜ್ಯದಲ್ಲಿ ಕೆಲವೇ ವರ್ಷಗಳಲ್ಲಿ ಅಧಃಪತನಕ್ಕೆ ಶಿಕ್ಷಕರ ಶಿಕ್ಷಣ ಕ್ಷೇತ್ರವನ್ನು ಇಳಿಸಲಾಗಿದೆ. ಇದೆಲ್ಲಾ ನೋಡಿಯೇ ಇರಬೇಕು, ತಮಿಳುನಾಡಿನಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ಒಂದು ಯೂನಿವರ್ಸಿಟಿಯನ್ನೇ ಸ್ಥಾಪಿಸಲಾಗಿದೆ.

 ರಾಜ್ಯ ಸರ್ಕಾರ ಶಿಕ್ಷಕರ ಶಿಕ್ಷಣವನ್ನು ಒಂದು ಆದ್ಯತೆಯ ಕ್ಷೇತ್ರವೆಂದು ಗುರುತಿಸಿ ಕಾರ‌್ಯಪ್ರವೃತ್ತವಾಗಲು ಕೆಲವು ನಿರ್ದಿಷ್ಟ ಸಲಹೆಗಳೆಂದರೆ,
* ಶಿಕ್ಷಕರ ಶಿಕ್ಷಣದ ಶೈಕ್ಷಣಿಕ ನಿರ್ವಹಣೆಯ ಉಸ್ತುವಾರಿಗಾಗಿ ಒಂದು ಕ್ರಮಬದ್ಧ ಯೋಜನೆ ಜಾರಿಗೊಳಿಸಬೇಕು. ಇದಕ್ಕೆ ಪ್ರತ್ಯೇಕ ಉಸ್ತುವಾರಿಯ ವ್ಯವಸ್ಥೆ ಹೀಗೆ ಯೋಚಿಸಬೇಕು.
(ಅ) ಡಿಇಡಿ ಪಠ್ಯವಸ್ತು 2002 ರಲ್ಲಿ ಜಾರಿಯಾಗಿದೆ. ಈ ಪಠ್ಯವಸ್ತು (ಸಿಲೆಬಸ್)ವನ್ನು ಜಾರಿಮಾಡುವ ಸಂದರ್ಭದಲ್ಲಿಯೇ 4 ವರ್ಷಗಳಲ್ಲಿ ಅದರ ಪುನರವಲೋಕನ ಮಾಡಬೇಕೆಂಬ ಸಲಹೆ ಅಂಗೀಕಾರವಾಗಿತ್ತು. ಆದರೆ ಹತ್ತು ವರ್ಷಗಳಾಗುತ್ತಾ ಬಂದರೂ ಏನೂ ಕೆಲಸವಾಗಿಲ್ಲ. ಈ ಅಸೀಮ ನಿರ್ಲಕ್ಷತನ, ಹೊಣೆಗೇಡಿತಕ್ಕಿಂತ ಕಡಿಮೆ ಏನಿಲ್ಲ.
(ಆ) ಪ್ರಾಯೋಗಿಕ ಬೋಧನೆಗೆ ಸಾಕಷ್ಟು ಒತ್ತು ನೀಡಬೇಕು. ಬೋಧನೆಗೆ ಅವಕಾಶಗಳಿಲ್ಲದ ಸಂಸ್ಥೆಗಳನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಬೇಕು.
(ಇ) ಡಯಟ್ ಸಂಸ್ಥೆಗಳಿಗೆ ಆಯಾ ಜಿಲ್ಲೆಗಳ ಶಿಕ್ಷಣ ಕಾಲೇಜುಗಳ ಸಮಸ್ತ ಜವಾಬ್ದಾರಿ ನೀಡಿ, ಎಲ್ಲೆಲ್ಲಿ ಅಕ್ರಮಗಳು ಗುರ್ತಿಸಲ್ಪಡುತ್ತವೋ, ಅಂತಹ ಕಡೆ ಶಿಸ್ತು ಕ್ರಮ ಜರುಗಿಸಬೇಕು. ಇಡೀ ವ್ಯವಸ್ಥೆಗೆ ಜವಾಬ್ದಾರಿತನ ಹೊರಲು ಚುರುಕು ಮುಟ್ಟಿಸುವ ಕ್ರಮ ಆಗಬೇಕು. ಡಯಟ್‌ಗಳನ್ನು ಹೊಣೆ ಮಾಡಬೇಕು.

* ಬಿಇಡಿ ಕಾಲೇಜುಗಳ ಒಂದು ಸಮಗ್ರ ನಿರ್ವಹಣೆಗಾಗಿ ಯೋಜಿತ ಕಾರ್ಯಕ್ರಮಕ್ಕಾಗಿ ಐ.ಯು.ಬಿ. (ಅಂತರ ವಿಶ್ವವಿದ್ಯಾಲಯಗಳ ಮಂಡಳಿ)ಯ ಬಳಕೆ ಅಗತ್ಯ. ರಾಜ್ಯ ಪ್ರೌಢಶಾಲಾ ಶಿಕ್ಷಕರ ಶಿಕ್ಷಣವನ್ನು ಸಮಗ್ರವಾಗಿ ಪರಿಗಣಿಸುವ ವ್ಯವಸ್ಥೆ ಆಗಬೇಕು.

* ಹೊರ ರಾಜ್ಯದ ಅಭ್ಯರ್ಥಿಗಳ ದಾಖಲಾತಿಗಳ ಬಗ್ಗೆ ಹಾಗೂ ಇಂತಹ ದಾಖಲಾತಿ ಮಾಡುವ ಸಂಸ್ಥೆಗಳ ಬಗ್ಗೆ ನಿಗಾ ಅಗತ್ಯ.

* ಎನ್‌ಸಿಟಿಇಯ ವ್ಯಾಪ್ತಿ ಹಾಗೂ ನಿರ್ವಹಣೆ ಪ್ರಾಥಮಿಕ ಶಿಕ್ಷಕರ ಶಿಕ್ಷಣದ ಹಂತಕ್ಕಾದರೂ ಅವಶ್ಯವೆ ಆಲೋಚಿಸಿ ಆಯಾ ರಾಜ್ಯಗಳಿಗೆ ಬಿಡುವ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದೊಡನೆ ವ್ಯವಹರಿಸಿ ಕ್ರಮ ಕೈಗೊಳ್ಳಬೇಕು.

* ಮೌಲ್ಯಮಾಪನ ವಿಧಿವಿಧಾನಗಳ, ಪರೀಕ್ಷೆಗಳ ನಿರ್ವಹಣೆ ಬಗ್ಗೆ ಅವಲೋಕನದ ಅವಶ್ಯಕತೆ ತುಂಬಾ ಇದೆ. ಈಗ ನಾವು ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಗಮನಿಸಿದರೆ 80-90ರ ಶೇಕಡಾಂಶದ ಫಲಿತಾಂಶ ಹೇಗೆ ಸಾಧ್ಯ ಯೋಚಿಸಬೇಕು.

* ಬಿಇಡಿ ಕೋರ್ಸ್ ಅನ್ನು ಪದವಿ ನಂತರ ಅಥವಾ ಪಿಯುಸಿ ನಂತರ 4 ಅಥವಾ 3 ವರ್ಷಕ್ಕೆ ನಿಗದಿಪಡಿಸಿ ಬದಲಾವಣೆಗಳನ್ನು ತರುವ ಪ್ರಸ್ತಾಪ ಎನ್‌ಸಿಟಿಇ ಈ ಹಿಂದೆ ಮಾಡಿತ್ತು. ಈ ಬಗ್ಗೆ ಆಲೋಚಿಸುವ ಕಾಲ ಸನ್ನಿಹಿತವಾಗಿದೆ. ಅಂತೂ ಕಾಯಕಲ್ಪಕ್ಕಾಗಿ ಡಿಇಡಿ ಹಾಗೂ ಬಿಇಡಿ ವ್ಯಾಸಂಗ ಖಂಡಿತ ಕಾಯುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT