ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದ ವಿದ್ಯಾರ್ಥಿ ಜೀವನ ಉಜ್ವಲ: ಡಿ.ಸಿ

Last Updated 6 ಸೆಪ್ಟೆಂಬರ್ 2013, 6:51 IST
ಅಕ್ಷರ ಗಾತ್ರ

ಕೋಲಾರ:  ಶಿಕ್ಷಕರು ತರಗತಿಯೊಳಗೆ ಉತ್ತಮ ರೀತಿಯಲ್ಲಿ ಪಾಠ ಮಾಡಿದರೆ ಅದರ ಪರಿಣಾಮವು ಸಮುದಾಯದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮುದಾಯಕ್ಕೆ ಉತ್ತಮ ಭವಿಷ್ಯ ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಭಿಪ್ರಾಯಪಟ್ಟರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮತ್ತು ಅಭಿರುಚಿಯು ಇಮ್ಮಡಿಸುವ ರೀತಿಯಲ್ಲಿ ಶಿಕ್ಷಕರು ಪ್ರತಿ ವಿಷಯವನ್ನೂ ಬೋಧಿಸಬೇಕು. ಆಗ ಕಲಿಯುವುದು ಕಷ್ಟ ಎಂಬ ಅಭಿಪ್ರಾಯ ದೂರವಾಗುತ್ತದೆ ಎಂದರು.

ತಮ್ಮ ಬಾಲ್ಯ ಕಾಲವನ್ನು ಸ್ಮರಿಸಿದ ಅವರು, ಶಾಲಾ ಹಂತದಲ್ಲಿ ಗಣಿತ ಶಿಕ್ಷಕರೊಬ್ಬರು ಉತ್ತೇಜನಕಾರಿ ರೀತಿಯಲ್ಲಿ, ಸರಳ ವಿಧಾನಗಳಲ್ಲಿ ಗಣಿತ ಮತ್ತು ವಿಜ್ಞಾನದ ಪಾಠಗಳನ್ನು ಮಾಡುತ್ತಿದ್ದ ಪರಿಣಾಮವಾಗಿ ತಮಗೆ ಆ ವಿಷಯದಲ್ಲಿ ಹೆಚ್ಚು ಆಸಕ್ತಿ ಮೂಡಲು ಸಾಧ್ಯವಾಯಿತು ಎಂದರು.

ಶಿಕ್ಷಕರು ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರಷ್ಟೆ ಎಂದು ಭಾವಿಸುವಂತಿಲ್ಲ. ವಿದ್ಯಾರ್ಥಿಗಳ ಭವಿಷ್ಯವೆಲ್ಲವೂ ತರಗತಿಯ ಪಾಠ ಮತ್ತು ಪರಿಣಾಮಗಳನ್ನು ಆಧರಿಸಿರುತ್ತದೆ. ಹೀಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಮಹತ್ವವನ್ನು ಸ್ಮರಿಸುವ ಸಲುವಾಗಿ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳುವುದು ವಿಶೇಷವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಎಸ್.ಎಂ.ಝಲ್ಫಿಕರ್ ಉಲ್ಲಾ, ಡಾ.ರಾಧಾಕೃಷ್ಣನ್ ಅವರ ಜೀವನಚರಿತ್ರೆಯನ್ನು ಪ್ರತಿಯೊಬ್ಬ ಶಿಕ್ಷಕರೂ ಅರಿಯಬೇಕು. ಶಿಕ್ಷಕ ವೃತ್ತಿಯ ಪಾವಿತ್ರ್ಯ ಮತ್ತು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಶಿಕ್ಷಕ ಬೋಧನಾ ವೈಖರಿ, ಅವರ ಚಾರಿತ್ರ್ಯ, ಸಾರ್ವಜನಿಕ ಬದುಕನ್ನು ಮಕ್ಕಳಷ್ಟೇ ಅಲ್ಲದೆ ಪೋಷಕರೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ಶಿಕ್ಷಕರು ಎಚ್ಚರಿಕೆ ಮತ್ತು ಬದ್ಧತೆಯಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು. ಜಿಪಂ ಅಧ್ಯಕ್ಷ ಜಿ.ನಾಗರಾಜ್ ಮಾತನಾಡಿದರು.

ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷೆ ಸರಸ್ವತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ.ಪದ್ಮನಾಭ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಆಂಜನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಸಮನ್ವಯಾಧಿಕಾರಿ ಸಿದ್ದಗಂಗಯ್ಯ, ಸಹಾಯಕ ಉಪಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ,

ನಾಗೇಂದ್ರಪ್ರಸಾದ್, ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಅನಿಲಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ, ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶ್ರೀನಿವಾಸನ್, ಕಾರ್ಯದರ್ಶಿ ಬಿ.ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಅಶ್ವಥನಾರಾಯಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಗೋಪಾಲರೆಡ್ಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ನಾಗರಾಜ್ ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧ ಶಾಲೆಗಳ ನೂರಾರು ಶಿಕ್ಷಕರು, ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಕುಟುಂಬದ ಸದಸ್ಯರು ಕಾರ್ಯಕ್ರಮಕ್ಕೆ ಬಂದ ಪರಿಣಾಮ ಹಲವರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೆ ರಂಗಮಂದಿರದ ಹೊರಗೆ ನಿಂತಿದ್ದರು.

ಜನಪ್ರತಿನಿಧಿ ಗೈರು: ಕಾರ್ಯಕ್ರಮದಲ್ಲಿ ಜಿಲ್ಲೆಯ ಯಾವ ಶಾಸಕರೂ ಪಾಲ್ಗೊಳ್ಳದಿರುವುದು ಎದ್ದು ಕಂಡಿತು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತ್ರ ಶುಭಾಶಯ ಸಂದೇಶವನ್ನು ಕಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT