ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಲ್ಲದ ಶಾಲೆ, ಮಾರು ದೂರ ಕೋಣೆ...

Last Updated 9 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಯಾದಗಿರಿ:  ಶಾಲಾ ಕಟ್ಟಡವಿದ್ದರೂ, ಶಿಕ್ಷಕರಿಲ್ಲ... ಕೋಣೆಗಳಿಲ್ಲದೇ ವಸತಿ ನಿಲಯದಲ್ಲಿ ನಡೆಯುವ ತರಗತಿಗಳು... ಬೇಕಾಬಿಟ್ಟಿ ನಿರ್ಮಿಸಿದ ಶಾಲಾ ಕಟ್ಟಡ... ಕಿರಿಯ ಆರೋಗ್ಯ ಸಹಾಯಕಿಯ ವಸತಿಗೃಹದ ಅತಿಕ್ರಮಣ... ಕಲ್ಯಾಣ ಮಂಟಪದಲ್ಲಿ ನಡೆಯುವ ಮೊರಾರ್ಜಿ ದೇಸಾಯಿ ವಸತಿ ಶಾಲೆ...

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನುಮೇಗೌಡ ಮರಕಲ್, ದೇವರಾಜ ನಾಯಕರು ಬುಧವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ಸರ್ಕಾರ ಒದಗಿಸಿರುವ ಸೌಕರ್ಯಗಳು ಜನರಿಗೆ ಸರಿಯಾಗಿ ಲಭಿಸದೇ ಇರುವುದಕ್ಕೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾಗಿ ಹೋದರು.

ತಾಲ್ಲೂಕಿನ ಯಲ್ಹೇರಿಯ ಗ್ರಾಮದ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಾಕಷ್ಟು ಅವ್ಯವಸ್ಥೆಗಳು ಕಂಡು ಬಂದವು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಬಿಸಿಎಂ ಇಲಾಖೆಯ ವಸತಿ ನಿಲಯದ ಎರಡು ಕೋಣೆಗಳಲ್ಲಿ ತರಗತಿ ನಡೆಸಲಾಗುತ್ತಿದೆ.

ಇನ್ನೊಂದೆಡೆ ಉರ್ದು ಪ್ರಾಥಮಿಕ ಶಾಲೆಯಲ್ಲಿ ಏಳು ತರಗತಿಗಳಿದ್ದರೂ, ಕೇವಲ ಇಬ್ಬರು ಶಿಕ್ಷಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲದೇ ಈ ಶಾಲೆಯ ಮಕ್ಕಳಿಗೆ ಒಂದು ವಾರದಿಂದ ಬಿಸಿಯೂಟವೂ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಯಿತು.

ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿಯೂ ಕಾರ್ಯಕರ್ತೆಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಗ್ರಾಮದ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ವೈದ್ಯರೂ ಬಂದಿಲ್ಲ ಎಂಬ ಮಾಹಿತಿಯನ್ನು ಅಂಗನವಾಡಿ ಸಹಾಯಕಿಯರು ನೀಡಿದರು.

ಕಲ್ಯಾಣ ಮಂಟಪದಲ್ಲಿ ಶಾಲೆ:  ತಾಲ್ಲೂಕಿನ ಕಾಳೆಬೆಳಗುಂದಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಿತಿಯಂತೂ ಗಂಭೀರವಾಗಿದೆ. ಕಟ್ಟಡಗಳು ಸಿಗದೇ ಇರುವುದರಿಂದ ಗ್ರಾಮದ ಕಲ್ಯಾಣ ಮಂಟಪದಲ್ಲಿಯೇ ಈ ಶಾಲೆ ನಡೆಸಲಾಗುತ್ತಿದೆ. ತಿಂಗಳಿಗೆ ರೂ. 20 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಆದರೂ ಮದುವೆ, ಮತ್ತಿತರ ಸಮಾರಂಭ ನಡೆದಾಗ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೊರಗೆ ಹೋಗಿ ಪಾಠ ಮಾಡುವ ಪರಿಸ್ಥಿತಿ ಇದೆ ಎಂದು ಅಲ್ಲಿನ ಶಿಕ್ಷಕರು ಮಾಹಿತಿ ನೀಡಿದರು.

ಇದರಿಂದ ತೀವ್ರ ಆಕ್ರೋಶಗೊಂಡ ಹನುಮೇಗೌಡ ಮರಕಲ್ ಹಾಗೂ ದೇವರಾಜ ನಾಯಕ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪಾಲಕರು ಅವರನ್ನು ಇಲ್ಲಿಗೆ ಕಳುಹಿಸುತ್ತಾರೆ. ಏನಾದರೂ ತೊಂದರೆ ಆದರೆ ಗತಿ ಏನು? ಇಲ್ಲಿ ಕಲಿಯುತ್ತಿರುವವರೂ ನಮ್ಮ ಮಕ್ಕಳೇ ಎಂಬ ಭಾವನೆ ಬರಬೇಕು. ಈ ವಿಷಯವನ್ನು ತಮ್ಮ ಗಮನಕ್ಕೆ ಏಕೆ ತಂದಿಲ್ಲ ಎಂದು ಶಿಕ್ಷಕರನ್ನು ಪ್ರಶ್ನಿಸಿದರು.

ಹಳಿಗೇರಾ ಗ್ರಾಮದಲ್ಲಿ 2009-10 ನೇ ಸಾಲಿನಲ್ಲಿ ಶಾಲಾ ಕೋಣೆಯೊಂದನ್ನು ನಿರ್ಮಿಸಿದ್ದು, ಶಾಲೆಯಿಂದ ಮಾರು ದೂರವಿದೆ. ಒಂದೇ ಕೋಣೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದು, ಅದೂ ಅರ್ಧಕ್ಕೆ ನಿಂತಿದೆ. ಪಕ್ಕದಲ್ಲಿಯೇ ಇರುವ ಕಿರಿಯ ಆರೋಗ್ಯ ಸಹಾಯಕಿಯರ ವಸತಿ ಗೃಹದಲ್ಲೂ ಬೇರೆಯವರೂ ವಾಸವಾಗಿರುವುದು ಕಂಡು ಬಂತು.

ಈ ವಸತಿ ಗೃಹದಲ್ಲಿದ್ದ ಮಹಿಳೆಯನ್ನು ಕೇಳಿದರೆ, ಶೇಷಪ್ಪ ಎಂಬುವವರ ಕಟ್ಟಡ ಇದಾಗಿದ್ದು, ಅವರೇ ನಾಲ್ಕು ದಿನ ಇರಲು ನೀಡಿದ್ದಾರೆ ಎಂದು ಹೇಳಿದರು. 

 ನಂತರ ಮಾತನಾಡಿದ ಹನುಮೇಗೌಡ ಮರಕಲ್, ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಸಾಕಷ್ಟು ಹಣವನ್ನು ನೀಡುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅನುದಾನವನ್ನು ವೆಚ್ಚ ಮಾಡಿದರೂ, ಜನರಿಗೆ ಸೌಲಭ್ಯ ಸಿಗದಂತಾಗಿದೆ. ಬೇಕಾಬಿಟ್ಟಿ ಕೆಲಸ ಮಾಡುತ್ತಿರುವುದರಿಂದ ಇಷ್ಟೆಲ್ಲ ಆವಾಂತರ ಆಗುತ್ತಿವೆ. ಹಳಿಗೇರಾದ ಶಾಲಾ ಕೋಣೆ ಹಾಗೂ ಎಎನ್‌ಎಂ ವಸತಿ ಗೃಹದಲ್ಲಿ ಬೇರೋಬ್ಬರು ವಾಸವಾಗಿರುವ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಲು ತಿಳಿಸಿರುವುದಾಗಿ ಹೇಳಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಮಾತನಾಡಿ, ವಸತಿ ಗೃಹಗಳಲ್ಲಿ ಹೆಚ್ಚಿನ ಸಮಸ್ಯೆ ಕಾಣುತ್ತಿವೆ. ವಾರ್ಡನ್‌ಗಳು ಇಲ್ಲದೇ ಇರುವುದು, ಸಮರ್ಪಕವಾಗಿ ಆಹಾರ ಪೂರೈಕೆ ಆಗದೇ ಇರುವುದು ಪ್ರಮುಖ ಸಮಸ್ಯೆಗಳಾಗಿವೆ.

ಅದರಲ್ಲಿಯೂ ಬಿಸಿಎಂ ಇಲಾಖೆಯ ವಸತಿ ನಿಲಯಗಳಲ್ಲಿನ ಮಕ್ಕಳ ಗೋಳನ್ನು ಕೇಳುವವರೇ ಇಲ್ಲದಾಗಿದೆ.  ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಅಲ್ಲದೇ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT