ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರೇ ಇಲ್ಲ-ಸುಧಾರಣೆ ಹೇಗೆ?

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಿಟ್ನಾಳ್ ಗಮನಿಸುವರೇ
Last Updated 3 ಡಿಸೆಂಬರ್ 2012, 7:24 IST
ಅಕ್ಷರ ಗಾತ್ರ


ಕೊಪ್ಪಳ :ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಸುಧಾರಿಸಲು ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಅದೂ, ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಈ ರೀತಿ ಹೇಳಿದ್ದಾರೆ.

ಆದರೆ, ಜಿಲ್ಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕೆಲ ಶಿಕ್ಷಕರ ಧೋರಣೆ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಸರಿಯಾದ ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸ್ವತಃ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಜಿಲ್ಲೆಯ ಎಷ್ಟೋ ಪ್ರೌಢಶಾಲೆಗಳಲ್ಲಿ ಈಗಲೂ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಬೋಧಿಸಲು ಶಿಕ್ಷಕರೇ ಇಲ್ಲ! ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಜೂನ್‌ನಿಂದಲೂ ವಿಜ್ಞಾನ ಮತ್ತು ಗಣಿತ ಶಿಕ್ಷಕರೇ ಇಲ್ಲ. ಹೀಗಾಗಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಆ ಪ್ರೌಢಶಾಲೆಯ ವಿದ್ಯಾರ್ಥಿಗಳು ಏನು ಬರೆದಿರಬೇಕು ಎಂಬುದನ್ನು ಹಿಟ್ನಾಳ್ ಅವರು ತಿಳಿದುಕೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳುತ್ತಾರೆ.

ಸದರಿ ಶಾಲೆಗೆ ಈ ವಿಷಯಗಳ ಶಿಕ್ಷಕರನ್ನು ಒದಗಿಸಲು ಗ್ರಾಮದ ಭಗತ್‌ಸಿಂಗ್‌ಯುವಕ ಮಂಡಳಿ ಡಿ. 6ರ ವರೆಗೆ ಗಡುವು ನೀಡಿದೆ. ಗಡುವಿನೊಳಗೆ ಸ್ಪಂದಿಸದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.

ಇದು ಒಂದು ಶಾಲೆಯ ಉದಾಹರಣೆ ಮಾತ್ರ. ಇಂತಹ ಎಷ್ಟು ಶಾಲೆಗಳಲ್ಲಿ ಯಾವ ಯಾವ ವಿಷಯಗಳ ಬೋಧಕರಿಲ್ಲ ಎಂಬುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಹಿರಂಗಪಡಿಸುತ್ತಿಲ್ಲ. ಅದೂ ಅಲ್ಲದೇ, ಶಿಕ್ಷಕರ ಹುದ್ದೆಗಳ ಪರಿವರ್ತನೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಫಲವಾಗಿ ಕೆಲ ಶಾಲೆಗಳಲ್ಲಿ ಒಂದೇ ವಿಷಯ 3-4 ಜನ ಶಿಕ್ಷಕರಿದ್ದರೆ, ಇನ್ನೂ ಕೆಲ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಹೆಚ್ಚುವರಿ ಶಿಕ್ಷಕರು ಕರ್ತವ್ಯದ ಮೇಲೆ ಹಾಜರಾಗಿಲ್ಲ.

ಇಷ್ಟೆಲ್ಲ ಅಧ್ವಾನಗಳಿರುವಾಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇರಲು ಹೇಗೆ ಸಾಧ್ಯ? ಕೆಲ ವಿಷಯಗಳ ಬೋಧಕರು ಇಲ್ಲದೇ ಇರುವಾಗ ಇರುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಸಾಧ್ಯವಿಲ್ಲ ಎಂಬುದನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಿಟ್ನಾಳ್ ಅರಿತುಕೊಳ್ಳುವುದು ಅಗತ್ಯ ಎಂದೂ ಶಿಕ್ಷಕರು ಪ್ರತಿಪಾದಿಸುತ್ತಾರೆ.

ಇನ್ನು, ಶಿಕ್ಷಣದ ವಿಷಯಕ್ಕೆ ಬಂದರೆ, ಜಿಲ್ಲಾ ಪಂಚಾಯಿತಿ ಸಹ ತನ್ನ ಪಾಲಿನ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದೇ ಹೇಳಬೇಕು. ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಇಷ್ಟು ದಿನಗಳಾದರೂ, ಇದುವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿ ರಚನೆಯಾಗಿಲ್ಲ. ಈ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲೂ ಈ ಸ್ಥಾಯಿ ಸಮಿತಿ ಇರಲಿಲ್ಲ.

ಲ್ಲೆಯ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಹ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವುದು ಅಗತ್ಯವಲ್ಲವೇ ಎಂದೂ ಜನರು ಪ್ರಶ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಇನ್ನು ಮೇಲಾದರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಹಾಗೂ ಇತರ ಸದಸ್ಯರಿಂದ ಆಗುವುದೇ? ಆ ಮೂಲಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿಯಾದರೂ ಸುಧಾರಿಸಬಹುದೇ ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT