ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಕರೇ ರಾಜಕಾರಣದಿಂದ ದೂರವಿರಿ'

Last Updated 6 ಸೆಪ್ಟೆಂಬರ್ 2013, 8:50 IST
ಅಕ್ಷರ ಗಾತ್ರ

ಬಾಗಲಕೋಟೆ: `ಶಿಕ್ಷಕರೇ ರಾಜಕಾರಣದಿಂದ ದೂರವಿರಿ, ಜಾತ್ಯತೀತವಾಗಿರಿ, ಪೂರ್ವಗ್ರಹ ಪೀಡಿತರಾಗದೇ ಮಕ್ಕಳ ಸರ್ವಾಂಗೀಣ ಏಳಿಗೆಗೆ ಶ್ರಮಿಸಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಸಲಹೆ ನೀಡಿದರು.

ನವನಗರದ ಕಲಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಅವರು, `ಆಸಕ್ತರು, ಬುದ್ದಿವಂತರು  ಮಾತ್ರ ಈ ಕೆಲಸಕ್ಕೆ ಬನ್ನಿ' ಎಂದರು.

`ಶೈಕ್ಷಣಿಕವಾಗಿ ಬಾಗಲಕೋಟೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿರುವಂತೆ ಗುಣಮಟ್ಟದ ಶಿಕ್ಷಣ ನೀಡುವತ್ತ  ಗಮನ ಹರಿಸಿ' ಎಂದರು.
`ಮಕ್ಕಳು ಗೌರವಿಸುವ ಶಿಕ್ಷಕರಾದರೆ ಅದುವೇ ನಿಮಗೆ ಶ್ರೇಷ್ಠ ಪ್ರಶಸ್ತಿ' ಎಂದರು.


`ಸಾವಿರಾರು ಸರ್ಕಾರಿ ಶಾಲೆಗಳು ಬಂದ್ ಆಗುವ ದುಸ್ಥಿತಿ ಬಂದೊದಗಿದೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ಶಿಕ್ಷಕ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ತಿಳಿಸಿದರು.

`ಸೆಪ್ಟೆಂಬರ್‌ನಿಂದ ಮಾರ್ಚ್ ವರೆಗಿನ ಅವಧಿಯೊಳಗೆ ವೃತ್ತಿಯಿಂದ ನಿವೃತ್ತರಾಗುವ ಶಿಕ್ಷಕರನ್ನು ಈ ವರ್ಷದ ಶೈಕ್ಷಣಿಕ ಅವಧಿ ಮುಗಿಯುವವರೆಗೂ ಸೇವೆಯಲ್ಲಿ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ' ಎಂದರು.

`ಬಾಗಲಕೋಟೆಯಲ್ಲಿ ಒಂದು ವರ್ಷದೊಳಗೆ ಗುರು ಭವನ ನಿರ್ಮಾಣ ಮಾಡಲು ಅಗತ್ಯವಿರುವ ನಿವೇಶನ ಮತ್ತು ಶಿಕ್ಷಕರ ಕಲ್ಯಾಣ ನಿಧಿಯಿಂದ ್ಙ 45 ಲಕ್ಷ ಹಾಗೂ ಜಿಲ್ಲೆಯ ಶಾಸಕರ ಅನುದಾನ ಕೊಡಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, `ಶಿಕ್ಷಕರು ಮಕ್ಕಳಿಗೆ ಪಠ್ಯವನ್ನು ಬೋಧಿಸುವ ಜೊತೆಗೆ ಅವರಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ದೇಶಾಭಿಮಾನ ಬೆಳೆಸಬೇಕು, ಮಕ್ಕಳು ಮತ್ತು ಪೋಷಕರು ಖಾಸಗಿ ಶಾಲೆಗಳಿಗೆ ಹೋಗದೇ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುವಂಥ ವಾತಾವರಣವನ್ನು ಶಿಕ್ಷಕರು ನಿರ್ಮಿಸಬೇಕು'ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ, `ಶಿಕ್ಷಕರಿಂದ ಮಾತ್ರ ದೇಶದ ಭವಿಷ್ಯ ಬದಲಾಗಬಲ್ಲದು' ಎಂದು ಅಭಿಪ್ರಾಯಪಟ್ಟರು.

`ನಗರ ಪ್ರದೇಶದ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಓದಿದವರೇ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಸರ್ಕಾರಿ ಶಾಲೆ ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದಿದವರು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು' ಎಂದು ಹೇಳಿದರು.

ಉಪನ್ಯಾಸ ನೀಡಿದ ವಿಜಾಪುರದ ಕೃಪಾಮಯಿ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ನಿರ್ಮಲಾ, `ಸಮರ್ಥ ಶಿಕ್ಷಕರೇ ರಾಷ್ಟ್ರದ ನಿಜವಾದ ನಿರ್ಮಾಪಕರು' ಎಂದರು.

`ಜೀವನೋಪಾಯಕ್ಕಾಗಿ ಶಿಕ್ಷಕ ವೃತ್ತಿ ಅವಲಂಬಿಸದೇ ದೇಶದ ಭವಿಷ್ಯ ನಿರ್ಮಾಣಕ್ಕಾಗಿ ಈ ವೃತ್ತಿಗೆ ಬರಬೇಕು' ಎಂದು ಹೇಳಿದರು.
ಜಿ.ಪಂ.ಅಧ್ಯಕ್ಷೆ ಶಾಂತಾ ಭೂಷಣ್ಣನವರ, ಉಪಾಧ್ಯಕ್ಷ ಕೃಷ್ಣಾ ಓಗೆಣ್ಣನವರ, ಜಿ.ಪಂ.ಸದಸ್ಯರಾದ ಬಸವಂತಪ್ಪ ಮೇಟಿ, ಪಾಂಡು ಪೊಲೀಸ, ತಾ.ಪಂ. ಅಧ್ಯಕ್ಷೆ ಗಿರಿಜಾ ದೇಸಾಯಿ, ಜಿಲ್ಲಾಧಿಕಾರಿ ಮನೋಜ್ ಜೈನ್, ಸಿಇಒ ಎಸ್.ಜಿ.ಪಾಟೀಲ, ಡಿಡಿಪಿಐ ಎ.ಎಂ. ಮಡಿವಾಳರ, ಪಿಯು ಡಿಡಿ ಇಲಾಳ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ಬಳ್ಳಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಬಾಗೆನ್ನವರ, ಹುಲಿಕಲ್ ನಟರಾಜ, ಪ್ರಕಾಶ ತಪಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT