ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಅಂತಿಮ ನಿರ್ಧಾರ ಮಕ್ಕಳಿಗೆ- ಅಶೋಕ್

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪೋಷಕರು ತಮ್ಮ ಮಕ್ಕಳು ಯಾವ ಶಿಕ್ಷಣ ಪಡೆಯಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ ಸಲಹೆ ನೀಡಬೇಕು. ಆದರೆ ಅಂತಿಮ ನಿರ್ಧಾರವನ್ನು ಮಕ್ಕಳಿಗೇ ಬಿಡಬೇಕು~ ಎಂದು ಸಚಿವ ಆರ್.ಅಶೋಕ ಸಲಹೆ ನೀಡಿದರು.

ಬಿಎಸ್‌ಎನ್‌ಎಲ್‌ನ `ಪ್ರತಿಭಾ ಪ್ರೋತ್ಸಾಹ ಸಮಿತಿ~ಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ನೃತ್ಯ, ಗಾನ, ಸಂಭ್ರಮ-2011~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಅಕ್ಕಪಕ್ಕದ ಮನೆಯವರು ತಮ್ಮ ಮಕ್ಕಳನ್ನು ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗೆ ಸೇರಿಸುತ್ತಾರೆ ಎಂದು ನಿಮ್ಮ ಮಕ್ಕಳೂ ಅದೇ ಕೋರ್ಸ್ ಸೇರಬೇಕು ಎಂದು ಹಠ ಹಿಡಿಯಬಾರದು. ಆಯ್ಕೆಯ ಸ್ವಾತಂತ್ರ್ಯವನ್ನು ಮಕ್ಕಳಿಗೆ ಬಿಡಬೇಕು. ತಾರಾ ಹೋಟೆಲ್‌ಗಳಲ್ಲಿ ಅಡುಗೆ ಮಾಡುವವರೂ ಈಗ ಲಕ್ಷಾಂತರ ಸಂಬಳ ಪಡೆಯುತ್ತಿದ್ದಾರೆ. ಚಿತ್ರಕಲಾವಿದನ ಚಿತ್ರಗಳು ಕೋಟಿಗಟ್ಟಲೇ ಬೆಲೆಗೆ ಮಾರಾಟವಾಗುತ್ತಿವೆ. ಈ ಕ್ಷೇತ್ರಗಳತ್ತ ಮಕ್ಕಳಿಗೆ ಆಸಕ್ತಿ ಇದ್ದರೆ ಅದನ್ನು ಪ್ರೋತ್ಸಾಹಿಸಬೇಕು~ ಎಂದು ನುಡಿದರು.

`ನಾನು ಶೇ 55 ಅಂಕಗಳನ್ನು ಪಡೆಯಲೂ ಶಿಕ್ಷಕರಿಂದ ಸಾಕಷ್ಟು ಏಟುಗಳನ್ನು ತಿನ್ನಬೇಕಾಯಿತು. ಆದರೆ ಇಂದಿನ ವಿದ್ಯಾರ್ಥಿಗಳು ಶೇ 99ರಷ್ಟು ಅಂಕಗಳನ್ನು ಗಳಿಸಿದರೂ ಸಹ ಪ್ರಮುಖ ಕಾಲೇಜುಗಳಲ್ಲಿ ಸೀಟುಗಳು ಸಿಗುತ್ತಿಲ್ಲ. ಮಕ್ಕಳನ್ನು ಇದೇ ಕಾಲೇಜಿಗೇ ಸೇರಿಸಬೇಕು ಎಂಬ ಮನೋಭಾವವನ್ನೂ ಪೋಷಕರು ಬದಲಾಯಿಸಿಕೊಳ್ಳಬೇಕು. ಬುದ್ಧಿ ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆ. ಬಡವರಿಗೆ ಕಡಿಮೆ, ಶ್ರೀಮಂತರಿಗೆ ಹೆಚ್ಚು ಬುದ್ಧಿ ಇರುವುದಿಲ್ಲ~ ಎಂದು ಮಾರ್ಮಿಕವಾಗಿ ನುಡಿದರು.

ವಿಶ್ವದ ಇತರ ರಾಷ್ಟ್ರಗಳ ಜನರಿಗೆ ಹೋಲಿಸಿದರೆ ಭಾರತೀಯರು ಕೊಂಚ ಬುದ್ಧಿವಂತರು ಎಂದು ಪ್ರತಿಪಾದಿಸಿದ ಅವರು, ಇಂಗ್ಲೆಂಡಿನ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುವವರು ಭಾರತೀಯರು, ಇತ್ತೀಚೆಗೆ ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ಇಂಗ್ಲಿಷ್ ಸ್ಪೆಲ್ಲಿಂಗ್‌ಗಳನ್ನು ಅತ್ಯಂತ ಸ್ಪಷ್ಟವಾಗಿ ಉಚ್ಛರಿಸಿ ಪ್ರಶಸ್ತಿ ಪಡೆದ ಬಾಲಕಿ ಭಾರತದವಳು. ಅದರಲ್ಲೂ ನಮ್ಮ ಬೆಂಗಳೂರಿನವಳು ಎಂದು ಸಮರ್ಥಿಸಿಕೊಂಡರು.

ಬಿಎಸ್‌ಎನ್‌ಎಲ್ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಹಾಗೂ ಸಂಸ್ಥೆಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಸಚಿವರು ಸನ್ಮಾನಿಸಿದರು.

ಚಿತ್ರನಟ ಶ್ರೀನಗರ ಕಿಟ್ಟಿ, ಯುವಕ ಪ್ರದೀಪ್ ಹಾಡಿದ `ಸಂಜು ವೆಡ್ಸ್ ಗೀತಾ~ ಚಿತ್ರದ ಗೀತೆಗೆ ದನಿಗೂಡಿಸಿದರು.
ವಿಧಾನಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಬಿಎಸ್‌ಎನ್‌ಎಲ್‌ನ ಪ್ರಧಾನ ವ್ಯವಸ್ಥಾಪಕ ಸುಭೇಂದು ಘೋಷ್, ಪ್ರತಿಭಾ ಪ್ರೋತ್ಸಾಹ ಸಮಿತಿಯ ಕಾರ್ಯದರ್ಶಿ ಕೆ.ಕರಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT