ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆ: ಇದೆಂಥಾ ಅನ್ಯಾಯ?

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗುವ ಕಡೆಯ  ದಿನಾಂಕವನ್ನು ಜುಲೈ 7 ರವರೆಗೆ ವಿಸ್ತರಿಸಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ದಾಖಲಾಗಲು ಅನುಮತಿ ನೀಡಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ  ದಾಖಲಾತಿಗೆ ಅವಕಾಶ ನೀಡದೆ ತಾರತಮ್ಯ ಮಾಡಿದೆ. ಜತೆಗೆ ವಿದ್ಯಾರ್ಥಿಗಳಿಗೆ ಅನವಶ್ಯಕ ಖರ್ಚಿಗೂ ಕಾರಣವಾಗಿದೆ.

ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಗೆ ಕೇವಲ 15 ದಿನ ಸಮಯಾವಕಾಶ ನೀಡಿತ್ತು. ನಂತರದ ಒಂದು ವಾರಕ್ಕೆ 420 ರೂ ದಂಡ.

ಆನಂತರದ ವಾರಕ್ಕೆ ಹಿಂದಿನ ದಂಡ 420 ರೂ. ಮತ್ತು 1400 ರೂ ಎರಡನ್ನು ಸೇರಿಸಿ ಒಟ್ಟು ದಂಡ 1820 ರೂ. ಕಟ್ಟಿ ಪ್ರವೇಶ ಪಡೆಯಲು ಅನುಮತಿ ನೀಡಿದೆ.
ದಾಖಲಾತಿ ಶುಲ್ಕ ವಿದ್ಯಾರ್ಥಿನಿಯರಿಗೆ 132 ರೂ. ಆದಾಯ ಪ್ರಮಾಣ ಪತ್ರ ಕೊಟ್ಟ ವಿದ್ಯಾರ್ಥಿಗಳಿಗೆ 564 ರೂ. ಮಾತ್ರ ನೀಡಿ ಪ್ರವೇಶ ಪಡೆಯಬಹುದಿತ್ತು.
 
ಟಿ.ಸಿ. ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇವೆಲ್ಲವನ್ನು ಹೊಂದಿಸಿ ಕಾಲೇಜಿಗೆ 15 ದಿನಗಳೊಳಗೆ ದಾಖಲಾಗಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ದಾಖಲಾತಿಗೆ ಸಮಯ ಕಡಿಮೆ ನೀಡಿದ್ದರಿಂದ ಬಹುಪಾಲು ವಿದ್ಯಾರ್ಥಿಗಳು ದಂಡಕಟ್ಟಿದ್ದಾರೆ.

ಪ್ರವೇಶ ಶುಲ್ಕ ಕಡಿಮೆ ಇಟ್ಟು ದಂಡವನ್ನು ಮನಬಂದಂತೆ ವಿಧಿಸುವುದು ವಿದ್ಯಾರ್ಥಿಗಳ ಪೋಷಕರಿಗೆ ನುಂಗಲಾಗದ ತುತ್ತಾಗಿದೆ. ಅಪರಾಧಿಗಳಿಗೆ ನ್ಯಾಯಾಲಯದ ದಂಡವೇ ಕಡಿಮೆ ಇರುವಾಗ ಶಿಕ್ಷಣ ಇಲಾಖೆಯ ದಂಡದ ದರ ಏರಿರುವುದು ಅಚ್ಚರಿಯಾಗಿದೆ.
 
ಅದರ ಜತೆಗೆ ಮೂರನೇ ಬಾರಿಗೆ ದಿನಾಂಕ ವಿಸ್ತರಿಸಿರುವ ಇಲಾಖೆ, ವಿದ್ಯಾರ್ಥಿಗಳು ದಾಖಲಾಗಲು ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಅವಕಾಶಕೊಟ್ಟು ಮಲತಾಯಿ ಧೋರಣೆ ತಾಳಿದೆ.

ಅಷ್ಟೇ ಅಲ್ಲದೆ ದಂಡ ಕಟ್ಟಿ ಸರ್ಕಾರಿ ಕಾಲೇಜಿನಲ್ಲಿ  ದಾಖಲಾಗಿ, ಕಾಲೇಜು ವರ್ಗಾವಣೆಗೆ ಮತ್ತೆ 1000 ರೂ. ಪಾವತಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ದಿನಾಂಕ ವಿಸ್ತರಿಸಿದಾಗ ದಾಖಲಾಗಲು ಎಲ್ಲಾ ಕಾಲೇಜಿಗೆ ಅವಕಾಶ ನೀಡಿದ್ದರೆ, ವಿದ್ಯಾರ್ಥಿಗಳಿಗೆ ಒಂದು ಹೊರೆ ಬೀಳುತ್ತಿತ್ತು.

ಈಗ ಎರಡು ಮೂರು  ಹೊರೆ ಬಿದ್ದಿದೆ. ಒಂದು ತಿಂಗಳಲ್ಲಿ  ಕಾಲೇಜು ದಾಖಲಾತಿಗೆ ಇಲಾಖೆ ಇಷ್ಟೊಂದು ಕಷ್ಟವನ್ನು ತಂದಿಟ್ಟಿರುವುದು ವಿದ್ಯಾರ್ಥಿಗಳಲ್ಲಿ  ಆತಂಕ ಹೆಚ್ಚಿಸಿದೆ.

ರಾಜ್ಯಾದ್ಯಂತ ಬರ ಇದೆ. ದಾಖಲಾತಿಗೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಸಮಯ ಬೇಕಾಗಿರುತ್ತದೆ. ಜನಸಾಮಾನ್ಯರ ತಿಳಿವಳಿಕೆ, ಆರ್ಥಿಕ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇವೆಲ್ಲವನ್ನು ಇಲಾಖೆ ಗಮನದಲ್ಲಿಟ್ಟುಕೊಂಡು ದಾಖಲಾತಿಗೆ 15 ದಿನಗಳ ಬದಲು ಒಂದು ತಿಂಗಳು ಸಮಯ ನೀಡಿದ್ದರೆ ಪೋಷಕರಿಗೆ ಆರ್ಥಿಕ ಹೊರೆ ಬೀಳುತ್ತಿರಲಿಲ್ಲ.

ಶಿಕ್ಷಣ ಸಚಿವರು ಇಲಾಖೆಯ ಈ ದಂಡದ ನೀತಿಯನ್ನು ರದ್ದು ಪಡಿಸಿ, ವಸೂಲಿ ಮಾಡಿರುವ ದಂಡವನ್ನು ಪೋಷಕರಿಗೆ ಹಿಂತಿರುಗಿಸಬೇಕು. ಎಲ್ಲಾ ಕಾಲೇಜುಗಳಲ್ಲಿ  ದಾಖಲಾತಿಗೆ ಅನುಮತಿ ನೀಡಬೇಕು ಹಾಗೂ ವಿದ್ಯಾರ್ಥಿ ಸ್ನೇಹಿ ನಿಯಮ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲು ಮುಂದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT