ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕಾಯ್ದೆ ಉಲ್ಲಂಘನೆ: ಶಿಕ್ಷಕರ ಹುದ್ದೆ ಅಕ್ರಮ ಪರಿವರ್ತನೆ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಪರಿವರ್ತನೆ ಹಾಗೂ ಸ್ಥಳಾಂತರ ಮಾಡಿರುವುದು ಬೆಳಕಿಗೆ ಬಂದಿದೆ.

ಶಿಕ್ಷಕರಿಗೆ ಬಡ್ತಿ, ವರ್ಗಾವಣೆಯೂ ಕಾಯ್ದೆಗೆ ವಿರುದ್ಧವಾಗಿದ್ದು, ಈ ಕುರಿತಂತೆ ಸಮಗ್ರವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ವತಃ ಡಿಡಿಪಿಐ  ಮಂಟೇಲಿಂಗಾಚಾರ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇಲಾಖೆಯ ಕಾರ್ಯದರ್ಶಿ ಕುಮಾರ ನಾಯ್ಕ, ಆಯುಕ್ತ ತುಷಾರ ಗಿರಿನಾಥ್, ಗುಲ್ಬರ್ಗ ವಿಭಾಗದ ಹೆಚ್ಚುವರಿ  ಶಿಕ್ಷಣ ಆಯುಕ್ತ ಎಸ್.ಜಿ. ವಾಲಿ ಹಾಗೂ ನಿರ್ದೇಶಕಿ ಕುಮುದಿನಿ ಬೈರಣ್ಣನವರ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಡಿಡಿಪಿಐ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಹಾಗೂ ವರ್ಗಾವಣೆ, ಬಡ್ತಿಗೆ ತೊಂದರೆಯಾಗಲಿದೆ ಎಂದು ವಿವರಿಸಿದ್ದಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು `ಪ್ರಜಾವಾಣಿ~ಗೆ ಲಭ್ಯವಾಗಿವೆ. ಹುದ್ದೆಗಳ ಪರಿವರ್ತನೆ, ಸ್ಥಳಾಂತರದಂತಹ ಕಾನೂನುಬಾಹಿರ ಕ್ರಮಗಳ ತನಿಖೆ ನಡೆಸಿ ಪರಿಹಾರಕ್ಕೆ ಸೂಕ್ತ ನಿರ್ದೇಶನ ನೀಡದಿದ್ದರೆ ಕೊಪ್ಪಳ ಜಿಲ್ಲೆಯ 128 ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿಷಯವಾರು ಹುದ್ದೆಗಳನ್ನು ಗುರುತಿಸುವುದು ಕಷ್ಟವಾಗಲಿದೆ. ಈ ಅಕ್ರಮಗಳಿಗೆ ಪರಿಹಾರ ನೀಡದಿದ್ದಲ್ಲಿ ಈ ಕಚೇರಿಯಿಂದ ನಿಖರವಾದ ಅಂಕಿ-ಅಂಶಗಳಿಂದ ಕೂಡಿದ ಯಾವುದೇ ಮಾಹಿತಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.

ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಮಂಜೂರಾದ ಹುದ್ದೆ ಇರದಿದ್ದರೂ ಅಂತಹ ಸ್ಥಾನಗಳಿಗೆ ಬೇರೆ ವಿಷಯದ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಒಂದು ಶಾಲೆಯಲ್ಲಿ ವಿಷಯವೊಂದರ ಬೋಧನೆಗಾಗಿ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ ಹೊಂದಿದ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಒಂದು ವಿಷಯದ ಹುದ್ದೆಯನ್ನು ಪರಿವರ್ತಿಸಲು ಶಿಕ್ಷಣ ಕಾಯ್ದೆಯಡಿ ಅವಕಾಶ ಇಲ್ಲ.
 
ಉದಾಹರಣೆಗೆ, ಒಂದು ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ಮಂಜೂರಾತಿ ನೀಡಿರುವುದಿಲ್ಲ. ಹೀಗಾಗಿ ಆ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ಇರುವುದಿಲ್ಲ ಹಾಗೂ ವರ್ಗಾವಣೆ ಮೂಲಕ ಆ ಹುದ್ದೆ ತುಂಬಲು ಕಾಯ್ದೆಯಡಿ ಅವಕಾಶ ಇರುವುದಿಲ್ಲ.

ಅದೇ ಶಾಲೆಯ ವಿಜ್ಞಾನ ವಿಷಯದ ಶಿಕ್ಷಕ ಒಂದು ವೇಳೆ ವರ್ಗಾವಣೆಗೊಂಡರೆ, ಸದರಿ ಹುದ್ದೆಗೆ ಅದೇ ಶೈಕ್ಷಣಿಕ ಅರ್ಹತೆಯ ಶಿಕ್ಷಕನನ್ನು ವರ್ಗ ಮಾಡಬೇಕು. ಜಿಲ್ಲೆಯಲ್ಲಿ ಮಾತ್ರ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಖಾಲಿ ಇರುವ ವಿಜ್ಞಾನ ಶಿಕ್ಷಕ ಹುದ್ದೆಯನ್ನು ಚಿತ್ರಕಲಾ ಶಿಕ್ಷಕ ಹುದ್ದೆಗೆ ಪರಿವರ್ತಿಸಲಾಗಿದೆ. ಆ ಹುದ್ದೆಗೆ ಬೇರೆ ಶಾಲೆಯ ಚಿತ್ರಕಲಾ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲೆಯ ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈ ರೀತಿ ಕಾನೂನುಬಾಹಿರವಾಗಿ 70-80 ಶಿಕ್ಷಕ ಹುದ್ದೆಗಳನ್ನು ಪರಿವರ್ತಿಸಲಾಗಿದೆ. ಪ್ರತಿ ಹುದ್ದೆಯ ಪತಿವರ್ತನೆಗೆ 80-90 ಸಾವಿರ ರೂಪಾಯಿಗಳಷ್ಟು ಹಣದ ವ್ಯವಹಾರ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬಹುತೇಕ ಅಧಿಕಾರಿಗಳು ಹಾಗೂ ಶಿಕ್ಷಕರು ಖಾಸಗಿಯಾಗಿ ಹೇಳುತ್ತಾರೆ.

ಹುದ್ದೆಗಳನ್ನು ಪರಿವರ್ತನೆ-ವರ್ಗಾವಣೆ ಮಾಡಿರುವ ಪರಿಣಾಮ ಅನೇಕ ಶಾಲೆಗಳಲ್ಲಿ ವಿಷಯವಾರು ಹೆಚ್ಚುವರಿ ಶಿಕ್ಷಕರಿದ್ದಾರೆ. ಇವರಿಗೆ ವೇತನ ನೀಡಲು ತೊಂದರೆಯಾಗುತ್ತಿದೆ. ಹೀಗಾಗಿ ಈ ವಿಷಯವನ್ನು ಗಂಭೀರ ಪ್ರಕರಣ ಎಂಬುದಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಲು ಡಿಡಿಪಿಐ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT