ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವಂಚಿತ ಮಕ್ಕಳಿಗೆ ಸಿಕ್ಕಿತು ಆಶಾವಾದ

ನಮ್ಮ ಮಗು ಕೂಡ ಶಾಲೆಗೆ ಹೋಗಲಿ
Last Updated 1 ಜುಲೈ 2013, 9:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಪ್ರತಿ ವರ್ಷ ಜೂನ್ ಅವಧಿಯಲ್ಲಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾದ ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದಾಖಲಾತಿ ಆಂದೋಲನ ಆರಂಭವಾಗುತ್ತದೆ. ಪ್ರತಿ ಮಗುವನ್ನು ಶಾಲೆಗೆ ಸೇರಿಸುವಂತೆ ಅಭಿಯಾನ ನಡೆಯುತ್ತದೆ.

ಶಾಲಾಮಕ್ಕಳು ಅಲ್ಲಲ್ಲಿ ಜಾಥಾ ಕೈಗೊಂಡು ಘೋಷಣೆಗಳನ್ನು ಹಾಕುತ್ತಾರೆ. ಗೋಡೆಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಪ್ರಚಾರ ಕೈಗೊಳ್ಳುತ್ತಾರೆ. ಇದರ ಹೊರತಾಗಿಯೂ ಕೆಲ ಶಿಕ್ಷಕರು ವಿನೂತನ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇದರಿಂದ ಶಾಲೆ ವಂಚಿತ ಮಕ್ಕಳು ಕನಸು ಕಾಣುವಂತೆ ಆಗಿದೆ.

ತಾಲ್ಲೂಕಿನ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಣ ಸಂಯೋಜಕ ಜಿ.ಎನ್.ಮನ್ನಾರ್ ಸ್ವಾಮಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮೊದಲನೇ ಹಂತದ ರೂಪದಲ್ಲಿ ಪಟ್ಟಣ ವ್ಯಾಪ್ತಿಯ 30 ಶಾಲೆಗಳಲ್ಲಿ 2006 ರಿಂದ 2013ರವರೆಗಿನ ವಿದ್ಯಾರ್ಥಿಗಳ ದಾಖಲಾತಿ ವಿವರ ಸಂಗ್ರಹಿಸುತ್ತಿದ್ದಾರೆ. ಪ್ರತಿಯೊಂದು ಶಾಲೆಯಲ್ಲೂ ದಾಖಲಾದ ಮಕ್ಕಳು ಮುಂದುವರಿಯದಿದ್ದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಅವರ ಪಟ್ಟಿ ತಯಾರಿಸಿದ್ದಾರೆ. ಕಳೆದ ವರ್ಷ ಸಾಮಾನ್ಯ ಸಮೀಕ್ಷೆಯಲ್ಲಿ 79 ಮಕ್ಕಳು ಹೊರಗುಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಅವರ ಸಮೀಕ್ಷೆಯಿಂದ ಈಗಾಗಲೇ 30 ಶಾಲೆಗಳಿಂದ 150ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದ್ದು, ಅದು 200ರ ಸಂಖ್ಯೆ ಗಡಿ ಮುಟ್ಟುವುದರಲ್ಲಿದೆ.

ಎರಡನೇ ಹಂತದ ರೂಪದಲ್ಲಿ ಪ್ರತಿಯೊಂದು ಮಗುವಿಗೂ ಒಂದು ಫೈಲ್ ತಯಾರಿಸಲಾಗುತ್ತಿದ್ದು, ಅದರಲ್ಲಿ ಮಗುವಿನ ಸ್ಥಿತಿಯ ಚಿತ್ರಣ ನೀಡುವ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದಕ್ಕಾಗಿಯೇ ಒಂದು ವಿವರ ಸಹಿತ ಅರ್ಜಿ ನಮೂನೆಯನ್ನು ಸಿದ್ಧಪಡಿಸಿದ್ದಾರೆ.
ಮಗುವಿನ ಚಿತ್ರ, ಹೆಸರು, ಪೋಷಕರ ಹೆಸರು, ಜನ್ಮದಿನಾಂಕ, ಶಾಲೆಗೆ ದಾಖಲಾದದ್ದು, ಬಿಟ್ಟದ್ದು, ಈಗಿನ ಕೆಲಸ, ಶಾಲೆ ಬಿಡಲು ಕಾರಣ, ಈಗ ಶಾಲೆಗೆ ಬರಲು ಸಿದ್ಧವಾಗಿದ್ದಾರೆಯೇ, ಶಾಲೆ ಸೇರಲು ಒಪ್ಪದಿದ್ದಲ್ಲಿ  ಕಾರಣ ಏನು ಎಂದು ತಿಳಿದು ಪೋಷಕರ ಮನವೊಲಿಸಲಾಗುತ್ತದೆ.

ಅದಕ್ಕಾಗಿ ಬೇಕಾದ ಸೌಲಭ್ಯಗಳ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಲಾಗುತ್ತದೆ. ಅದಕ್ಕೆ ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ಸಂಪನ್ಮೂಲ ಶಿಕ್ಷಕರ ಸಹಿ ಇರುತ್ತದೆ.

ಈಗಾಗಲೇ ರೇಷ್ಮೆ, ಕೂಲಿ ಮುಂತಾದ ಕೆಲಸಗಳಲ್ಲಿ ತೊಡಗಿದ್ದ 40 ಮಕ್ಕಳನ್ನು ಪತ್ತೆ ಮಾಡಿದ್ದೇವೆ. ಅವರ ಸಮಸ್ಯೆಗಳನ್ನು ಆಲಿಸಿದೆವು. ಅವರು ಬಯಸಿದ ಶಾಲೆಗಳಲ್ಲಿಯೇ ದಾಖಲಿಸುವ ಪ್ರಕ್ರಿಯೆಯನ್ನು ಕೈಗೊಳ್ಳುತ್ತೇವೆ. ಸುಮಾರು ಹತ್ತು ಮಂದಿ ಶಿಕ್ಷಕರ ತಂಡ ರಚಿಸಿ, ಶಿಕ್ಷಣದಿಂದ ದೂರವುಳಿದಿರುವ ಮಕ್ಕಳ ಮನೆ ವಿಳಾಸವನ್ನು ಹುಡುಕಿಕೊಂಡು ಬೆಳಿಗ್ಗೆ, ಸಂಜೆ ವೇಳೆ ಮಗು ಮತ್ತು ಅವರ ಪೋಷಕರನ್ನು ಭೇಟಿಯಾಗಿ, ಮನವೊಲಿಸುತ್ತೇವೆ.

`ಬಹುತೇಕ ಪೋಷಕರು ಬಡತನ, ಆರ್ಥಿಕ ಕಾರಣ, ಕೌಟುಂಬಿಕ ಕಲಹ ಮುಂತಾದ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಆದರೆ ಇವೆಲ್ಲದಕ್ಕಿಂತ ಮಗುವಿನ ಭವಿಷ್ಯ ಮುಖ್ಯ ಎಂಬುದು ಅವರಿಗೆ ಮನಗಾಣಿಸುತ್ತೇವೆ' ಎಂದು ಜಿ.ಎನ್.ಮನ್ನಾರ್‌ಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

`ಪೋಷಕರ ಬೇಡಿಕೆಗಳಾದ ಹಾಸ್ಟೆಲ್ ಸೌಲಭ್ಯ, ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮ ಮೊದಲಾದ ಬೇಡಿಕೆಗಳಿಗೂ ಒಪ್ಪುತ್ತೇವೆ. ಮಗು ಶಾಲೆಯಲ್ಲಿರಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ತಾಲ್ಲೂಕು ಆಡಳಿತ ಮತ್ತು ಕಾರ್ಮಿಕ ಇಲಾಖೆ ಕೈಜೋಡಿಸಿದಲ್ಲಿ ಕೆಲಸ ಸುಲಭವಾಗುತ್ತದೆ' ಎನ್ನುತ್ತಾರೆ ಈ ಅಭಿಯಾನದಲ್ಲಿ ತೊಡಗಿರುವ ಶಿಕ್ಷಕರು.

ಹೊರಗುಳಿದ ಮಕ್ಕಳಲ್ಲಿ ಕೆಲವರು ಊರು ಬಿಟ್ಟಿರುವ ಸಾಧ್ಯತೆಗಳಿದ್ದು, ಶೇ 50ರಷ್ಟು ಮಕ್ಕಳನ್ನು ಶಾಲೆಗೆ ತಂದರೂ ನಾವು ಬಹಳಷ್ಟು ಸಾಧಿಸಿದಂತಾಗುತ್ತದೆ.  ಈ ರೀತಿ ದಾಖಲಾದ ಪ್ರತಿಯೊಂದು ಮಗುವಿನ ಬಗ್ಗೆ ಮುಂದಿನ ಮಾರ್ಚ್‌ವರೆಗೂ ಪ್ರತಿ ತಿಂಗಳೂ ಅಲ್ಲಿನ ಮುಖ್ಯಶಿಕ್ಷಕರಿಂದ ದೃಢೀಕರಣ ಪತ್ರ ಪಡೆಯುತ್ತೇವೆ.

ತಾಲ್ಲೂಕು ಮಟ್ಟದ ಎಲ್ಲಾ ಶಾಲೆಗಳಿಗೂ ಈ ಪದ್ಧತಿಯನ್ನು ವಿಸ್ತರಿಸಿದಲ್ಲಿ ಶಿಕ್ಷಣದಿಂದ ದೂರವುಳಿದ ಪ್ರತಿ ಮಗುವನ್ನು ಇನ್ನು ಮೂರು ವರ್ಷಗಳಲ್ಲಿ ಶಾಲೆಗೆ ಸೇರಿಸಲು ಸಾಧ್ಯವಾಗುತ್ತದೆ ಎನ್ನುವುದು ಶಿಕ್ಷಕರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT