ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಅಧಿಸೂಚನೆಯಲ್ಲಿ ನ್ಯೂನತೆ ಆರೋಪ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಸಾಕಷ್ಟು ನ್ಯೂನತೆಗಳು ಇರುವ ಕಾರಣ, ಕಾಯ್ದೆಯ ಅನ್ವಯ ಪ್ರವೇಶ ನೀಡಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷ ಪುಟ್ಟಣ್ಣ ತಿಳಿಸಿದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಜೊತೆ ಶಾಸಕರ ಭವನದಲ್ಲಿ ಮಂಗಳವಾರ ಮಾತುಕತೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂನತೆಗಳ ನಿವಾರಣೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಭೆ ಕರೆಯಬೇಕು ಎಂದು ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಗುವುದು ಎಂದರು.

`ಆರ್ಥಿಕವಾಗಿ ಹಿಂದುಳಿದವರು ಯಾರು ಎಂಬ ಕುರಿತು ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟನೆ ಇಲ್ಲ. ಕೆಲವು ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಸರ್ಕಾರ ಇದೇ ಅಧಿಸೂಚನೆಯನ್ನು ಮೂರು ತಿಂಗಳ ಹಿಂದೆ ಹೊರಡಿಸಿದ್ದರೆ, ಅನುಷ್ಠಾನ ಸಾಧ್ಯವಾಗುತ್ತಿತ್ತು. ತಕ್ಷಣ ಸಭೆ ಕರೆದು ನ್ಯೂನತೆಗಳನ್ನು ಸರಿಪಡಿಸಿದರೆ ಮುಂದಿನ ವರ್ಷದಿಂದ ಕಾಯ್ದೆಯ ಅನ್ವಯ ಪ್ರವೇಶ ನೀಡಬಹುದು~ ಎಂದು ಹೇಳಿದರು.

ಮಕ್ಕಳಿಗೆ ಹತ್ತಿರದ ಶಾಲೆಯಲ್ಲಿ ಪ್ರವೇಶ ನೀಡಬೇಕು ಎಂದು ಅಧಿಸೂಚನೆ ಹೇಳುತ್ತದೆ. ಆದರೆ ಬೆಂಗಳೂರಿನಂಥ ಪ್ರದೇಶಗಳಲ್ಲಿ ಯಾರಿಗೆ ಯಾವ ಶಾಲೆ ಹತ್ತಿರ, ಯಾವ ಪ್ರದೇಶದ ಮಕ್ಕಳಿಗೆ ಯಾವ ಶಾಲೆಯಲ್ಲಿ ಎಷ್ಟು ಪ್ರಮಾಣದ ಸೀಟುಗಳನ್ನು ಮೀಸಲಿಡಬೇಕು ಎಂಬ ಸಮೀಕ್ಷೆಯೇ ನಡೆದಿಲ್ಲ.

ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಈ ಕಾಯ್ದೆಯಿಂದ ಏಕೆ ಹೊರಗಿಡಲಾಗಿದೆ ಎಂಬುದೂ ಅರ್ಥವಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಪುಟ್ಟಣ್ಣ ಹೇಳಿದರು.

ಒಕ್ಕೂಟದ ಕಾರ್ಯದರ್ಶಿ ಸುದಿ ಸುರೇಶ್ ಮಾತನಾಡಿ, `ಅಧಿಸೂಚನೆ ಹೊರಡಿಸುವ ಮುನ್ನ ಶಿಕ್ಷಕ ಪ್ರತಿನಿಧಿಗಳು, ಆಡಳಿತ ಮಂಡಳಿಗಳ ಪ್ರತಿನಿಧಿಗಳು ಅಥವಾ ಜನಪ್ರತಿನಿಧಿಗಳ ಜೊತೆ ಸರ್ಕಾರ ಸಮಾಲೋಚನೆ ನಡೆಸಿಲ್ಲ. ಪ್ರವೇಶ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿಗಳ ಪಾತ್ರ ಏನು ಎಂಬ ಪ್ರಶ್ನೆಗಳಿಗೆ ಸ್ಪಷ್ಟನೆ ಇಲ್ಲ.

 ಈ ಕಾಯ್ದೆಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದರೆ ಖಾಸಗಿ ಶಾಲೆಗಳಿಗೆ ಹಾನಿಯಾಗಲಿದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯ ನಂತರ `ಪ್ರಜಾವಾಣಿ~  ಜೊತೆ ಮಾತನಾಡಿದ ಖಾಸಗಿ ಶಾಲೆಯೊಂದರ ಕಾರ್ಯದರ್ಶಿ ಮೊಹಿದ್ದೀನ್ ಅವರು, `ಮಕ್ಕಳನ್ನು ದಂಡಿಸುವ, ಅವರನ್ನು ಗದರುವ ಶಿಕ್ಷಕರಿಗೆ ಒಂದು ಲಕ್ಷ ರೂಪಾಯಿ ದಂಡದ ಜೊತೆ ಜೈಲುವಾಸ ನೀಡುವಂಥ ಅವಕಾಶಗಳನ್ನು ಈ ಕಾಯ್ದೆ ನೀಡುತ್ತದೆ. ಇದು ಜಾರಿಯಾದರೆ ಶಿಕ್ಷಕ ವೃತ್ತಿಗೆ ಬರುವವರ ಸಂಖ್ಯೆಯೂ ಕುಸಿಯಬಹುದು~ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT